ಫೆ.16ರಂದು ರಾಜ್ಯ ರೈತ ಸಂಘದಿಂದ ಬೆಂಗಳೂರು ಚಲೋ-ಸಮಾವೇಶ

ದಾವಣಗೆರೆ: ರಾಜ್ಯದ ದುಡಿಯುವ ಜನರ ಬವೆಗಳನ್ನು ನಿವಾರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಬರುವ ಫೆ.16ರಂದು ಬೆಂಗಳೂರು ಚಲೋ ನಡೆಸಿ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.13ರಂದು ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ ನೆನಪಿನ ದಿನಾಚರಣೆಯನ್ನು ಚಾಮರಾಜ ನಗರದಲ್ಲಿ ರಾಜ್ಯ ರೈತ ಸಂಘದಿಂದ ಆಯೋಜಿಸಲು ತೀರ್ಮಾನಿಸಲಾಗಿದೆ. ಅಂದು ಚಾಮರಾಜನಗರದ ಪ್ರಮುಖ ವೃತ್ತವೊಂದಕ್ಕೆ ನಂಜುಂಡಸ್ವಾಮಿ ಅವರ ಹೆಸರು ಇಡಲಾಗುವುದು ಎಂದು ಹೇಳಿದರು.
ಸಂಘದಿಂದ ಪ್ರತಿ ಜಿಲ್ಲೆಯಲ್ಲೂ ತಲಾ 100 ಜನ ಯುವಕರನ್ನು ಆಯ್ಕೆ ಮಾಡಿ ಹೋರಾಟಕ್ಕೆ ಸಜ್ಜು ಮಾಡಲಾಗುತ್ತಿದ್ದು, ಅಂದು ರಾಜ್ಯ ಯುವ ರೈತ ಘಟಕಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ರಾಜ್ಯ ಸರ್ಕಾರ ರೈತರಿಗೆ ಪ್ರತಿ ಎಕರೆಗೆ 10 ಸಾವಿರ ರೂ. ಪ್ರೋತ್ಸಾಹಧನ ನೀಡಬೇಕು. ನೈಸರ್ಗಿಕ ಕೃಷಿಗೆ ಹೆಚ್ಚಿನ ಉತ್ತೇಜನ ನೀಡಬೇಕು. ಮಕ್ಕಳಿಗೆ ವಿಷಮುಕ್ತ ನೈಸರ್ಗಿಕ ಆಹಾರ ನೀಡಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರುಗಳಾದ ಟಿ.ನುಲೇನೂರು ಎಂ.ಶಂಕರಪ್ಪ, ಶ್ರೀಮತಿ ಮಂಜುಳಾ ಅಕ್ಕಿ, ಅರುಣ್ ಕುಮಾರ್ ಕುರಡಿ, ಕರಿಲಕ್ಕೇನಹಳ್ಳಿ ಹನುಮಂತಪ್ಪ, ನಾಗಂದ್ರಪ್ಪ, ಹೊರಕೆರಪ್ಪ, ಬನ್ನೂರು ಕೃಷ್ಣಪ್ಪ, ಜಯಣ್ಣ ಇತರರು ಉಪಸ್ಥಿತರಿದ್ದರು.