Bescom: ವಿದ್ಯುತ್ ಪೂರೈಕೆ ಅಸಮರ್ಪಕ: ಕೆಇಬಿ ಕಚೇರಿಗೆ ಮುತ್ತಿಗೆ ಹಾಕಿದ ಜಿಲ್ಲಾ ಬಿಜೆಪಿ
ದಾವಣಗೆರೆ: ರೈತರಿಗೆ ಸರ್ಕಾರ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡದ ಕಾರಣ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಕೆಇಬಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ.
ನಗರದ ಅಂಬೇಡ್ಕರ್ ಸರ್ಕಲ್ ಬಳಿ ಇರುವ ಕೆಇಬಿ ಕಚೇರಿಗೆ ಸಂಸದ ಜಿಎಂ ಸಿದ್ದೇಶ್ವರ್, ಶಾಸಕ ಬಿಪಿ ಹರೀಶ್, ಎಂ.ಎಲ್.ಸಿ ರವಿಕುಮಾರ್ ಅವರ ನೇತೃತ್ವದಲ್ಲಿ ಮುತ್ತಿಗೆ ಹಾಕಿ ಪ್ರತಿಭಟಿಸಿದ ಕಾರ್ಯಕರ್ತರು ರೈತರನ್ನು ಶೋಷಣೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕೆಇಬಿ ಕಚೇರಿಗೆ ಬಿಗಿ ಭದ್ರತೆಯ ವ್ಯವಸ್ಥೆ ಮಾಡಿದ್ದಾರೆ.
ಪ್ರತಿಭಟನೆಯಲ್ಲಿ ಎಂ.ಎಲ್.ಸಿ ರವಿಕುಮಾರ್ ಮಾತನಾಡಿ, ಸಿದ್ದರಾಮಯ್ಯ ಅವರ ಮನೆ ಕಟ್ಟುತ್ತಿರುವ ಗುತ್ತಿಗೆದಾರರಾದ ಸಂತೋಷ್ ಎಂಬುವವರ ಮನೆಯಲ್ಲಿ 45 ಕೋಟಿ ಹಣ ಸಿಕ್ಕಿದೆ. ಅಂಬಿಕಾಪತಿ ಮನೆಯಲ್ಲಿ 42 ಕೋಟಿ ಹಣ ಸಿಕ್ಕಿದೆ. ಇವರು ಸಿದ್ದರಾಮಯ್ಯ, ಡಿಕೆಶಿ, ಅಶ್ವತ್ಥಾಮ ಅವರುಗಳ ಆಪ್ತರು ಹಾಗೂ ಗುತ್ತಿಗೆದಾರರ ಸಂಘದ ರಾಜ್ಯ ಉಪಾಧ್ಯಕ್ಷನಾಗಿದ್ದು, ಈತನ ಮನೆಯಲ್ಲಿ ಹಣ ಸಿಕ್ಕಿದೆ. ಕಾಂಗ್ರೆಸ್ ನಾಯಕರಿಗೆ ನೈತಿಕತೆ ಇದ್ದರೆ ಪ್ರಾಮಾಣಿಕವಾಗಿ ಉತ್ತರ ಕೊಡಬೇಕು ಎಂದು ಮಾತನಾಡಿದರು.
ಸಂವಿಧಾನದ ಮೇಲೆ ಗೌರವವಿದ್ದರೆ ರಾಜೀನಾಮೆ ನೀಡಲಿ. ಇದು ಪಂಚರಾಜ್ಯ ಚುನಾವಣೆಗಾಗಿ ಮಾಡುತ್ತಿರುವ ಹೂಡಿಕೆಯಾಗಿದೆ. ಇಂತದರ ನಡುವೆ ಈ ಭಾರಿ ಮೋದಿ ಸೋಲುತ್ತಾರೆ ಎಂದು ಹಗಲುಗನಸು ಕಾಣುತ್ತಿದ್ದಾರೆ. ಇಂತಹ 20 ಜನ ಬಂದರು ಮೋದಿ ಅವರನ್ನು ಸೋಲಿಸಲು ಅಸಾಧ್ಯ ಎಂದು ತಿಳಿಸಿದರು.
ಇನ್ನೂ ರಾಜ್ಯದಲ್ಲಿ ಬರ ಇದೆ ಪರಿಹಾರ ಕೊಡಿ ಎಂದು ಕೇಳಿದರೆ, ಕೇಂದ್ರ ಸರ್ಕಾರದಿಂದ ತಂಡ ಬಂದಿಲ್ಲ ಅವರು ಅಧ್ಯಯನ ಮಾಡಿ ವರದಿ ಕೊಟ್ಟಿಲ್ಲ ಎಂದು ಹೇಳುತ್ತಾರೆ. ನಮ್ಮ ಸರ್ಕಾರ ಇದ್ದಾಗ ಪ್ರವಾಹದ ಸಂದರ್ಭದಲ್ಲಿ 2 ಸಾವಿರ ಕೋಟಿ ರೂ. ಬಿಡುಗಡೆ ಮಾಡಿದ್ದೇವು. ಈಗಾಗಲೇ ಪ್ರಹ್ಲಾದ ಜೋಷಿಯವರು ಕಲ್ಲಿದ್ದಲು ಪೂರೈಕೆಯಲ್ಲಿ ಕಡಿಮೆ ಮಾಡಿಲ್ಲ ಎಂದು ತಿಳಿಸಿದ್ದು, ವಿದ್ಯುತ್ ಪೂರೈಕೆ ಕುರಿತು ಪ್ರತಿಭಟಿಸಿದರೆ ಕೇಂದ್ರ ಸರ್ಕಾರದಿಂದ ಕಲ್ಲಿದ್ದಲು ಕೊಡ್ತಾಯಿಲ್ಲ ಎಂದು ನೆಪ ಹೇಳುತ್ತಾರೆ. ಅಲ್ಲದೇ ರಾಜ್ಯದಲ್ಲಿ ಮಳೆ ಕಡಿಮೆಯಾಗುವ ಸಾಧ್ಯತೆ ಹೆಚ್ಚಿದೆ ಎಂಬುದರ ಕುರಿತು ಮಾಹಿತಿ ಇದ್ದರು ಸರಿಯಾದ ರೀತಿಯಲ್ಲಿ ಯಾವುದೇ ಮುನ್ನೆಚ್ಚರಿಕ ಕ್ರಮವನ್ನು ಕೈಗೊಂಡಿಲ್ಲ. ಪರಿಹಾರ ಕೊಡಲು ಸಾಧ್ಯವಾಗಲಿಲ್ಲವೆಂದರೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.