ಅಪ್ರತಿಮ ಹೋರಾಟಗಾರ, ಕ್ರಾಂತಿಕಾರಿ ಭಗತ್‌ಸಿಂಗ್‌ರ ಸ್ಮರಣೆ

ದಾವಣಗೆರೆ: ಭಾರತದ ಕ್ರಾಂತಿಕಾರಿ, ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟ ನಡೆಸಿದವರಲ್ಲಿ ಭಗತ್‌ಸಿಂಗ್ ಪ್ರಮುಖರು. ಬಡಕುಟುಂಬದಿಂದ ಬಂದು, ತಾರುಣ್ಯದಲ್ಲಿಯೇ ವೀರಮರಣವನ್ನಪ್ಪಿದ ಮಹಾನ್ ಚೇತನ. ಇಂತಹ ದೇಶಭಕ್ತನ ೧೧೪ ನೇ ಜನ್ಮದಿನದ ಸವಿನೆನಪಿಗಾಗಿ ಈ ಲೇಖನ.
ಭಗತ್ ಸಿಂಗ್‌ರ ಹಿನ್ನಲೆ :
ಭಗತ್‌ಸಿಂಗ್‌ರು ಈಗಿನ ಪಾಕಿಸ್ತಾನದ ಲಾಯಲ್‌ಪುರ ಜಿಲ್ಲೆಯ ’ಬಾಂಗಾ’ ಎಂಬ ಗ್ರಾಮದಲ್ಲಿ ಸಿಬ್ಬರ ’ಜಾಟ್’ ಮನೆತನದಲ್ಲಿ ೧೯೦೭ ಸೆಪ್ಟೆಂಬರ್ ೨೮ ರಂದು ಜನಿಸಿದರು. ತಂದೆ ಕಿಶನ್‌ಸಿಂಗ್, ತಾಯಿ ವಿದ್ಯಾವತಿ, ಭಗತ್‌ರ ಮೇಲೆ ಅತೀ ಪ್ರಭಾವ ಬೀರಿದ್ದವರೆಂದರೆ ಅವರ ಚಿಕ್ಕಪ್ಪ ಅಜಿತ್‌ಸಿಂಗ್, ಇವರು ಉಗ್ರ ಭಾಷಣಕಾರರಾಗಿದ್ದು ರೈತರೊಂದಿಗೆ ಹಲವಾರು ಚಳುವಳಿಗಳನ್ನು ಸಂಘಟಿಸುತ್ತಿದ್ದರು. ಜಲಿಯನ್ ವಾಲಾಬಾಗ್‌ನಲ್ಲಿ ಬ್ರಿಟಿಷರು ನಡೆಸಿದ ಮಾರಣಹೋಮದಿಂದ ರಕ್ತದ ಕೆಂಪು ಕಲೆ ಅವರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹಬ್ಬಿಸಿತು.
ಭಗತ್ ಸಿಂಗ್‌ರ ಹೋರಾಟಕ್ಕೆ ಸ್ಫೂರ್ತಿ:
ಪಂಜಾಬಿನ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ನಿರತರಾಗಿ ’ಲಾಹೋರ್’ ಪಿತೂರಿ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ’ಕರ್ತಾರ್‌ಸಿಂಗ್’ ಸರಬ್‌ರವರನ್ನು ೧೯೧೫ ರಲ್ಲಿ ಅವರ ೨೦ ನೇ ವಯಸ್ಸಿನಲ್ಲಿ ನೇಣೆಗೇರಿಸಲಾಗಿತ್ತು. ರಾಷ್ಟ್ರ ವಿಮೋಚನೆಯೊಂದೇ ನನ್ನ ಗುರಿ, ನನಗೆ ಬೇಕಾಗಿರುವುದು ಸ್ವಾತಂತ್ರ್ಯ ಅದೊಂದೇ ನನ್ನ ಕನಸು ಎಂಬ ’ಸರಬ್’ ಕೊನೆಗಾಲದ ಮಾತುಗಳು ಭಗತ್‌ಸಿಂಗ್‌ರಲ್ಲಿ ಉದ್ದೀಪನ ಹಚ್ಚಿದವು. ಇದು ಭಗತ್‌ರನ್ನು ಸಾವಿಗೇ ಸವಾಲು ಹಾಕುವಂತಹ ಗುಣವನ್ನು ಮೈಗೂಡುವಂತೆ ಮಾಡಿತು.
ಗುಪ್ತ ಕ್ರಾಂತಿಕಾರಿ ಪಕ್ಷ ಸೇರ್ಪಡೆ :
ಭಗತ್‌ಸಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗಲೇ ಬ್ರಿಟಿಷರ ವಿರುದ್ಧ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ್ದರು. ೧೯೨೩ ರಲ್ಲಿ ಚಂದ್ರಶೇಖರ ಅಜಾದರ ನೇತೃತ್ವದಲ್ಲಿ ಗುಪ್ತಕ್ರಾಂತಿಕಾರಿ ಪಕ್ಷಕ್ಕೆ ಸೇರಿಕೊಂಡರು . ಕೊನೆಗೆ ಆ ಪಕ್ಷವು ಹಿಂದುಸ್ತಾನ್ ಸೋಷಿಯಾಲಿಸ್ಟ್ ರಿಪಬ್ಲಿಕ್ ಸೇವೆ’ ಎಂಬ ಹೆಸರಿನಿಂದ ದೇಶದ ಹಲವಾರು ಕ್ರಾಂತಿಕಾರಿಗಳಿಗೆ ಬ್ರಿಟಿಷರ ವಿರುದ್ಧ ಹೋರಾಡಲು ಆಶ್ರಯ ನೀಡಿತು ’ಭಗತ್‌ಸಿಂಗ್’ ಈ ಕ್ರಾಂತಿಕಾರಿ ಸೇನೆಯ ಪ್ರತಿಯೊಂದು ಸಶಸ್ತ್ರ ಹೋರಾಟದಲ್ಲಿಯೂ ಭಾಗವಹಿಸಿ , ಅದರ ಪ್ರಮುಖ ಕಾರ್ಯಕರ್ತರಾಗಿ ಹೆಸರು ಗಳಿಸಿದರು.
ಕ್ರಾಂತಿಕಾರಿ ಯುವಕರ ಸಂಘಟನೆ : ಭಗತ್‌ಸಿಂಗ್‌ರು ೧೯೨೫ ರಲ್ಲಿ ನವಯುವಕ ಭಾರತಸಭೆ ಎಂಬ ಕ್ರಾಂತಿಕಾರಿ ಸಂಘಟನೆಯೊಂದನ್ನು ಪಂಜಾಬಿನಲ್ಲಿ ಸ್ಥಾಪಿಸಿ, ಬ್ರಿಟಿಷರ ವಿರುದ್ಧ ’ಶಸ್ತ್ರ’ ಹಿಡಿದು ಹೋರಾಟ ನಡೆಸಬಯಸುವ ಯುವಕರಿಗೆ ಮಾರ್ಗದರ್ಶನ, ಪ್ರೇರಣೆ ಹಾಗೂ ಆಶ್ರಯ ನೀಡಿದರು. ಬ್ರಿಟಿಷರಿಗೆ ತಮ್ಮ ಸುಳಿವು ಸಿಗದಂತೆ, ಯುವ ಜನತೆಗೆ ತಮ್ಮ ತತ್ವ ಧೈಯ, ಉದ್ದೇಶಗಳ ಸಂದೇಶ ತಿಳಿಸಲು ದಿಲ್ಲಿಯ ’ಅರ್ಜುನ’ ಮತ್ತು ಕಾನ್ಪೂರದ ’ಪ್ರತಾಪ’ ಪತ್ರಿಕೆಗಳಲ್ಲಿ ತಮ್ಮ ಲೇಖನಗಳನ್ನು ಅನಾಮಧೇಯ ಹೆಸರಿನಲ್ಲಿ ಪ್ರಕಟಿಸುತ್ತಿದ್ದರು. ಭಗತ್‌ಸಿಂಗ್‌ರು ’ಕೀರ್ತಿ’ ಎಂಬ ಹೆಸರಿನ ಸಮಾಜವಾದಿ ನಿಯತಕಾಲಿಕ ಪತ್ರಿಕೆಯ ಸಂಪಾದಕೀಯ ಮಂಡಳಿಯಲ್ಲಿಯೂ ಕೆಲವು ಕಾಲ ಕೆಲಸ ಮಾಡಿದರು.
ಮಾತಿಗಿಂತ ಕೃತಿಯಲ್ಲಿ ತೊಡಗುವುದೇ ಲೇಸು :
ಬುದ್ಧಿ ಜೀವಿಗಳಂತೆ ಕೇವಲ ಮಾತಿನಲ್ಲಿ ಜಾಣೆ ತೋರಿದರೆ ಸಾಲದು, ಮನಸ್ಸಿನಲ್ಲಿ ಇದ್ದುದನ್ನು ಕಾರ್ಯರೂಪಕ್ಕೆ ತರಬೇಕು. ಬಾಯಿ ಬಡಾಯಿಯ ಬರೀ ಮಾತಿಗಿಂತ ಮೌನವಾಗಿದ್ದುಕೊಂಡೇ ಕೃತಿಯಲ್ಲಿ ತೊಡಗುವುದು ಲೇಸು ಎಂಬ ಧೈಯವಾಕ್ಯದಲ್ಲಿ ಬಲವಾದ ನಂಬಿಕೆಯನ್ನು ಹೊಂದಿದ್ದ ಭಗತ್‌ಸಿಂಗ್‌ರು ಈ ತತ್ವವನ್ನು ಸ್ವತಃ ತಾವೇ ಚಾಚೂ ತಪ್ಪದಂತೆ ಅನುಷ್ಠಾನಕ್ಕೆ ತಂದರು. ಅದನ್ನು ಆಚರಿಸುವಂತೆ ತನ್ನ ಅನುಯಾಯಿಗಳಿಗೆ ಕರೆ ನೀಡಿದರು. ೧೯೨೯ ರಲ್ಲಿ ಭಗತ್‌ಸಿಂಗ್‌ರು ಚಂದ್ರಶೇಖರ ಅಜಾದ್ ಮತ್ತು ಕುಂದನಲಾಲ್ ಅವರೊಡನೆ ಸೇರಿಕೊಂಡು, ಕಾಕೋರಿ ಒಳಸಂಚು ಮೊಕದ್ದಮೆಗಳಲ್ಲಿ ಬಂಧಿತರಾಗಿದ್ದ ಕೈದಿಗಳ ಬಿಡುಗಡೆಗಾಗಿ ’ಶಸಸ್ತ್ರ’ ಯೋಜನೆಯನ್ನು ರೂಪಿಸಿದವರಾದರೂ ಅದು ಯಶಸ್ವಿಯಾಗಲಿಲ್ಲ.
ಬ್ರಿಟಿಷ್ ಅಧಿಕಾರಿಯನ್ನು ಕೊಂದ ಭಗತ್‌ಸಿಂಗ್:
ಸೈಮನ್ ಆಯೋಗದ ವಿರುದ್ಧ ಲಾಹೋರಿನಲ್ಲಿ ಕಾಂಗ್ರೆಸ್ ನಡೆಸಿದ ಚಳುವಳಿಯಲ್ಲಿ ಭಾಗವಹಿಸಿದ್ದ ಲಾಲ್ ಲಜಪತ್‌ರಾಯರು ಬ್ರಿಟಿಷರ ಲಾಠಿ ಏಟಿನಿಂದಾಗಿ ಸಾವಿಗೀಡಾದರು. ಭಗತ್‌ಸಿಂಗ್‌ರು ೧೯೨೮ ರ ಡಿಸೆಂಬರ್ ೧೭ ರಂದು ’ಲಾಲ್’ರ ಸಾವಿಗೆ ಕಾರಣರಾದ ಬ್ರಿಟಿಷ್ ಪೊಲೀಸ್ ಅಧಿಕಾರಿ ’ಸ್ಟಾಂಡರ್ಸ್’ ಅವರನ್ನು ಗುಂಡಿಟ್ಟುಕೊಂದರು. ಇವರೊಂದಿಗೆ ಅಜಾದ್, ಕುಂದನಲಾಲ ೨ ರಾಜಗುರು, ದತ್ತ ಮುಂತಾದ ಕ್ರಾಂತಿಕಾರಿ ನಾಯಕರೂ ಸೇರಿಕೊಂಡರು. ಮುಂದೆ ಈ ಗುಂಪು ಬ್ರಿಟಿಷ ಆಡಳಿತದ ಬಗ್ಗೆ , ರಾಷ್ಟ್ರದ ಜನತೆಯ ಜಿಗುಪ್ಪೆಯನ್ನು ಬಹಿರಂಗ ಪಡಿಸುವ ಯೋಜನೆಯೊಂದನ್ನು ರೂಪಿಸಿತು.
ಭಗತ್‌ಸಿಂಗ್‌ರ ಹೋರಾಟದ ಭದ್ರಬುನಾದಿ :
ಭಗತ್‌ಸಿಂಗ್‌ರು ೧೯೨೧ ರಲ್ಲಿ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದ್ದರು. ರಾಷ್ಟ್ರೀಯ ಭಾವನೆಗಳನ್ನು ಪ್ರಚೋದಿಸುತ್ತಿದ್ದ ಹಾಗೂ ಬ್ರಿಟಿಷರು ನಿಷೇಧಿಸಿದ್ದ ರಾಷ್ಟ್ರೀಯ ನಾಟಕ ಕೂಟದ ಸಕ್ರೀಯ ಕಾರ್ಯಕರ್ತರಾಗಿ ಹಲವಾರು ಪಾತ್ರಗಳನ್ನು ನಿರ್ವಹಿಸಿದರು. ಮನೆಯಲ್ಲಿ ಮದುವೆಗೆ ಒತ್ತಾಯ ಹೆಚ್ಚಾದಾಗ ಮನೆಬಿಟ್ಟು ಸ್ವಾತಂತ್ಯ ಸಂಗ್ರಾಮದಲ್ಲಿ ಪಾಲ್ಗೊಳ್ಳಲು ೧೯೨೪ ರಲ್ಲಿ ಕಾನೂರಕ್ಕೆ ತೆರಳಿದರು. ಅಲ್ಲಿ ಚಂದ್ರಶೇಖರ ಅಜಾದ್ , ಬಿ.ಕೆ. ದತ್ತ, ಜೆ.ಸಿ. ಚಟರ್ಜಿ ಮುಂತಾದವರ ಸಂಪರ್ಕ ಪಡೆದರು. ಈ ಸಂದರ್ಭದಲ್ಲಿ ಕ್ರಾಂತಿಕಾರಿ ಸಂಘಟನೆಯೆಂಬ ಹೆಗ್ಗಳಿಕೆಯಿಂದ ಕೆಲಸ ಮಾಡುತ್ತಿದ್ದ ಹಿಂದೂಸ್ಥಾನ್ ಗಣತಂತ್ರವಾದಿ ಸಂಘಟನೆಯ ಚಟುವಟಿಕೆಗಳನ್ನು ಹತ್ತಿರದಿಂದ ಗಮನಿಸುತ್ತಿದ್ದರು. ವಸಾಹತುಶಾಹಿ ಪ್ರಭುತ್ವವನ್ನು ಶಸ್ತ್ರಸಜ್ಜಿತ ಕ್ರಾಂತಿಯ ಮೂಲಕ ಕಿತ್ತೊಗೆಯಲು ಸಚೀಂದ್ರನಾಥ್ ಸನ್ಯಾಲ್, ಜೋಗೇಶ್‌ಚಂದ್ರ ಚಟರ್ಜಿ ಮತ್ತು ರಾಮಪ್ರಸಾದ್ ಬಿಸ್ಮಿಲ್ಲರವರ ನಾಯಕತ್ವದಡಿ ೧೯೨೪ ರ ಅಕ್ಟೋಬರ್‌ನಲ್ಲಿ ಹಿಂದೂಸ್ಥಾನ ಗಣತಂತ್ರ ಸಂಘಟನೆ ಸ್ಥಾಪಿತವಾಗಿತ್ತು.
ಕೇಂದ್ರ ವಿಧಾನಸಭೆಯಲ್ಲಿ ಬಾಂಬ್ ಸ್ಫೋಟ:
ಪೂರ್ವ ನಿರ್ಧಾರಿತ ಯೋಜನೆಯಂತೆ ಭಗತ್‌ಸಿಂಗ್ ಮತ್ತು ಬಟುಕೇಶ್ವರ ದತ್ತರು ೧೯೨೯ ರ ಏಪ್ರಿಲ್ ೮ ರಂದು ಕೇಂದ್ರ ವಿಧಾನಸಭೆಯಲ್ಲಿ ಬಾಂಬ್ ಸ್ಫೋಟಿಸಿ ತಮ್ಮ ಸಾಹಸವನ್ನು ಪ್ರದರ್ಶಿಸಿದರು. ತತ್‌ಕ್ಷಣವೇ ವಿಧಾನಸಭೆಯ ಕಾವಲು ಇದ್ದ ಸಶಸ್ತ್ರ ಪೊಲೀಸರು ಭಗತ್‌ಸಿಂಗ್‌ರನ್ನು ಬಂಧಿಸಿ, ಗಡಿಪಾರು ಮಾಡಿ, ಜೀವಾವಧಿ ಸೆರೆ ಮನೆವಾಸದ ಶಿಕ್ಷೆಯನ್ನು ವಿಧಿಸಿತು.
ಭಗತ್‌ಸಿಂಗ್‌ರನ್ನು ಗಲ್ಲಿಗೇರಿಸಿದ ಬ್ರಿಟಿಷ್ ಸರಕಾರ :
ಭಗತ್‌ಸಿಂಗ್‌ರು ಸೆರೆಮನೆಯಲ್ಲಿದ್ದಾಗಲೇ ಸ್ಯಾಂಡರ್ಸ್ ಹತ್ಯೆ, ಲಾರೋರ್ ಪಿತೂರಿ ಮೊಕದ್ದಮೆ, ಹೀಗೆ ಹಲವು ಅಪರಾಧಗಳ ಸರಣಿ ಪಟ್ಟಿಯಲ್ಲಿ ಸಿಲುಕಿಸಿ ಭಗತ್‌ಸಿಂಗ್‌ರನ್ನು ಮುಖ್ಯ ಆರೋಪಿಯನ್ನಾಗಿಸಿ ಮರಣದಂಡನೆಯ ಶಿಕ್ಷೆ ವಿಧಿಸಿತು. ಇಂಗ್ಲೆಂಡದ ನ್ಯಾಯವೇದಿಕೆಯಾದ ಪ್ರೀಎಕೌನ್ಸಿಲ್‌ಗೆ , ಬ್ರಿಟನ್ನಿನ ರಾಣಿ ಎಲಿಜಾಬೆತ್ ಅವರಿಗೆ ವಿಶೇಷ ಮನವಿ ಸಲ್ಲಿಕೆಗಳು ವಿಫಲವಾದವು. ಕೊನೆಗೆ ೧೯೩೧ ಮಾರ್ಚ್ ೨೩ ರಂದು ಭಗತ್‌ಸಿಂಗ್‌ರನ್ನು ಬ್ರಿಟಿಷ್ ಸರಕಾರ ಗಲ್ಲಿಗೇರಿಸಿತು. ಭಗತ್‌ಸಿಂಗ್ ಸಂಗಡಿಗರಾದ ಸುಖದೇವ್ ಮತ್ತು ರಾಜಗುರು ಅವರಿಗೂ ಭಗತ್‌ಸಿಂಗ್ ಜೊತೆಗೆ ಗಲ್ಲು ಶಿಕ್ಷೆ ವಿಧಿಸಲಾಯಿತು.
ಕ್ರಾಂತಿಕಾರಿಯ ಸಾವಿನ ಘಳಿಗೆಗಳು :
ಬಂಡೆಕಲ್ಲುಗಳನ್ನೇ ಪುಡಿಗಟ್ಟುವಷ್ಟು ತೀಕ್ಷ್ಣ ಶಕ್ತಿ ಹೊಂದಿದ್ದ ಭಗತ್‌ಸಿಂಗ್ ಸೆರೆಮನೆಯ ಸಂಕಷ್ಟ, ಯಾತನೆಗಳಿಂದಾಗಿ ಕೊನೆಕೊನೆಗೆ ಬಸವಳಿದು ಕೃಷವಾಗಿದ್ದ ದೇಹ ಎಂತಹವರಲ್ಲೂ ಕಣ್ಣೀರು ಹರಿಸುವಂತಿದ್ದು. ಅವರ ಕಣ್ಣುಗಳಲ್ಲಿನ ತೇಜಸ್ಸಿನ ಪ್ರಖರತೆ ಮತ್ತಷ್ಟು ಇಬ್ಬಡಿಗೊಳ್ಳುತ್ತಿತ್ತು. ಗಾಂಧೀಜಿಯವರ ಬಗ್ಗೆ ಭಗತ್‌ಸಿಂಗ್‌ರಿಗೆ ಗೌರವವಿದ್ದರೂ ತಮ್ಮ ಸೈದ್ಧಾಂತಿಕ ನಿಲುವಿನ ಕುರಿತು ಹೀಗೆ ತಿಳಿಸಿದ್ದಾರೆ. ’ ಗಾಂಧೀಜಿಯು ಒಬ್ಬ ಉದಾರ ಹೃದಯದ ಪರೋಪಕಾರಿ ಮನುಷ್ಯ, ನಮಗೆ ಅಗತ್ಯವಿರುವುದು ಪರೊಪಕಾರವಲ್ಲ, ಆದರೆ ಚಲನಾತ್ಮಕ ವೈಜ್ಞಾನಿಕ ಸಾಮಾಜಿಕ ಶಕ್ತಿ ಎಂಬುದಾಗಿ ತಿಳಿಸಿದರು. ನೌಜವಾನ್ ಭಾರತ್ ಸಭಾ, ಕೀರ್ತಿ ಕಿಸಾನ್ ಪಾರ್ಟಿ, ಹಿಂದೂಸ್ಥಾನ್ ಸಮಾಜವಾದಿ, ಗಣತಂತ್ರವಾದಿ ಸಂಸ್ಥೆ, ಭಾರತ ಸ್ವಾತಂತ್ರ್ಯ ಚಳುವಳಿ ಹೀಗೆ ಭಗತ್‌ಸಿಂಗ್‌ರು ಸಕ್ರೀಯವಾಗಿ ಭಾಗವಹಿಸಿ, ಹೋರಾಡಿ ಮಾರ್ಚ್ ೨೩, ೧೯೩೧ ರಂದು ತಮ್ಮ ೨೩ ನೇ ವಯಸ್ಸಿನಲ್ಲಿ ಲಾಹೋರ್‌ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದರು. ಇಂತಹ ದೇಶಭಕ್ತನ ನೆನಪು ನಮ್ಮ ಹೃದಯಗಳಲ್ಲಿ, ಕಾರ್ಯಗಳಲ್ಲಿ, ಸದಾ ಜೀವಂತವಾಗಿಸಿಕೊಂಡು ದೇಶಕಟ್ಟುವ ಕಾರ್ಯಗಳಲ್ಲಿ ನಾವು ನಮ್ಮ ಕಾರ್ಯದಲ್ಲಿ ಜವಾಬ್ದಾರಿಗಳನ್ನು ಅರಿಯೋಣವೆಂಬುದು ನನ್ನ ಬಯಕೆ.
ಡಾ|| ಗಂಗಾಧರಯ್ಯ ಹಿರೇಮಠ ಪ್ರಾಧ್ಯಾಪಕರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದಾವಣಗೆರೆ.