“ಭಾಷೆ ಬಳಸಿದಷ್ಟೂ ಬೆಳೆಯುತ್ತದೆ ” – ಹಿರಿಯ ಪತ್ರಕರ್ತ ಹೆಚ್. ಬಿ. ಮಂಜುನಾಥ

 

ದಾವಣಗೆರೆ: ಭಾಷೆ ಬಳಸಿದಷ್ಟೂ ಬೆಳೆಯುತ್ತದೆ ಹಾಗೂ ಉಳಿಯುತ್ತದೆ.ಹಾಗೆ ಬಳಸುವಾಗ ನಮ್ಮ ಭಾಷೆಯಲ್ಲಿ ಅನ್ಯಭಾಷೆಗಳ ಕಲಬೆರಕೆ ಆಗದಂತೆ ಆದಷ್ಟೂ ಜಾಗೃತಿ ವಹಿಸಬೇಕು ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಹೆಚ್. ಬಿ. ಮಂಜುನಾಥ ಅಭಿಪ್ರಾಯಪಟ್ಟರು. ಅವರು ನಗರದ ಆಂಜನೇಯ ಬಡಾವಣೆಯ ಬಸವೇಶ್ವರ ಉದ್ಯಾನದ ಯೋಗ ಮಂದಿರದಲ್ಲಿ ಸವಿಗಾನ ಸಂಗೀತ ವಿದ್ಯಾಲಯದ ವತಿಯಿಂದ ಏರ್ಪಾಡಾಗಿದ್ದ 66ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಕನ್ನಡ ಭಾಷೆ ಸಮೃದ್ಧವಾದ ಭಾಷೆ, ಅಷ್ಟೇ ಸುಂದರವಾದ ಭಾಷೆ,ಇದರಲ್ಲಿ ಪದಗಳಕೊರತೆಯಿಲ್ಲ. ಆದರೆ ನಾವು ಅನವಶ್ಯಕವಾಗಿ ಅನ್ಯ ಭಾಷಾ ಪದಗಳನ್ನು ನಮ್ಮ ಭಾಷಾ ಬಳಕೆಯಲ್ಲಿ ಕಲಬೆರಕೆ ಮಾಡುತ್ತಿರುವುದರಿಂದ ಕನ್ನಡ ಭಾಷಾ ಪದಗಳು ನಾಶವಾಗುತ್ತಿವೆ. ಅನಿವಾರ್ಯವಾದಾಗ ಅನ್ಯ ಭಾಷಾ ಪದಗಳ ಬಳಕೆಗೆ ಅಡ್ಡಿ ಇಲ್ಲ, ಆದರೆ ಅನವಶ್ಯಕವಾಗಿ ನಾವು ಅನ್ಯ ಭಾಷಾ ಪದಗಳನ್ನು ಕನ್ನಡ ಭಾಷೆಯೊಂದಿಗೆ ಕಲಬೆರಕೆ ಮಾಡಿ ಮಾತನಾಡುತ್ತಿದ್ದೇವೆ.

ನಮ್ಮ ಭಾಷೆಯ ಅವನತಿಗೆ ನಾವು ವೈಯಕ್ತಿಕವಾಗಿ ಎಷ್ಟು ಕಾರಣ ರಾಗಿದ್ದೇವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಸರಳವಾದ ಉದಾಹರಣೆ ಕೊಡಬೇಕೆಂದರೆ ನಾವೀಗ ಬಹುತೇಕ ಮನೆಯಲ್ಲಾಗಲೀ ಮಠಗಳಲ್ಲಾಗದು, ಕಲ್ಯಾಣ ಮಂಟಪಗಳಲ್ಲಾಗಲೀ, ಉಪಾಹಾರ ಗೃಹಗಳಲ್ಲಾಗಲೀ, ವಿದ್ಯಾರ್ಥಿನಿಲಯಗಳಲ್ಲಾಗಲೀ ಅನ್ನವನ್ನು ಸೇವಿಸುತ್ತೇವೇ ವಾದರೂ ‘ಅನ್ನ’ ವೆಂದು ಹೇಳದೆ ‘ರೈಸ್’ ಎಂದೇ ಹೇಳುತ್ತಿದ್ದೇವೆ. ಹೀಗೆ ಎಲ್ಲಿಯವರೆಗೆ ನಾವು ಅನ್ನವನ್ನು ‘ಅನ್ನ’ ಎನ್ನದೆ ‘ರೈಸ್’ ಎಂದು ಹೇಳುತ್ತೇವೆಯೋ ಅಲ್ಲಿಯವರೆಗೆ ನಮ್ಮ ಭಾಷೆಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ.

ಹೀಗೆ ಪ್ರತಿನಿತ್ಯವೂ ನಮ್ಮ ಆಡುಭಾಷೆ ಕನ್ನಡದಲ್ಲಿ ಹೆಚ್ಚಿನ ಮೊತ್ತದಲ್ಲಿ ಅನ್ಯ ಭಾಷಾ ಪದಗಳು ಅದರಲ್ಲೂ ಮುಖ್ಯವಾಗಿ ಆಂಗ್ಲ ಭಾಷಾ ಪದಗಳು ಅನವಶ್ಯಕವಾಗಿ ಬಳಕೆಯಾಗುತ್ತಿವೆ. ಇದನ್ನು ಮನಗಂಡು ಪ್ರತಿಯೊಬ್ಬರೂ ಸಾಧ್ಯವಾದಷ್ಟೂ ನಮ್ಮ ಮಾತೃಭಾಷಾ ಪದಗಳನ್ನೇ ಬಳಸುವ ಪ್ರಯತ್ನ ಮಾಡಬೇಕಿದೆ.ಹಾಗಾದಲ್ಲಿ ಮಾತ್ರ ನಮ್ಮ ಭಾಷೆ ಉಳಿಯಲು ಬೆಳೆಯಲು ಸಾಧ್ಯ ಎಂದರು. ಸ್ವಾತಂತ್ರ್ಯಾನಂತರವೂ ನಮ್ಮ ಕನ್ನಡದ ನೆಲವು ಮುಂಬೈ, ಮದ್ರಾಸ್, ಹೈದರಾಬಾದ್ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿತ್ತು.

ಅದನ್ನೆಲ್ಲಾ ಒಂದಾಗಿಸಿ ಏಕೀಕೃತ ವಿಶಾಲ ಮೈಸೂರು ರಾಜ್ಯವಾಗಿ 1956 ನವೆಂಬರ್ ಒಂದನೇ ತಾರೀಕು ಉದಯವಾಯಿತು. ಸಾವಿರ 1973 ರ ನವೆಂಬರ್ 1ನೇ ತಾರೀಕು ‘ಕರ್ನಾಟಕ’ವೆಂದು ನಾಮಕರಣವಾಯಿತು. ನಮ್ಮ ಮಾತೃಭಾಷೆಯಲ್ಲಿ ನಮ್ಮ ಸಂಸ್ಕೃತಿ ಬಿಂಬಿತವಾಗುತ್ತದೆ. ಅನ್ಯ ಭಾಷಾ ಬಳಕೆಯಲ್ಲಿ ಅನ್ಯ ಸಂಸ್ಕೃತಿ ಬಿಂಬಿತವಾಗುತ್ತದೆ. ಹಾಗಾಗಿ ನಮ್ಮ ಭಾಷೆಯ ಬಳಕೆಯಿಂದ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಬಹುದಾಗಿದೆ ಎಂಬುದನ್ನು ಎಚ್.ಬಿ.ಮಂಜುನಾಥ್ ಉದಾಹರಣೆಗಳ ಸಹಿತ ವಿವರಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆ ಭಾಗದ ಮಹಾನಗರ ಪಾಲಿಕೆ ಸದಸ್ಯೆ ಶ್ರೀಮತಿ ವೀಣಾ ನಂಜಪ್ಪ ಆಗಮಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ರೇಣುಕಾ ವಹಿಸಿದ್ದರು. ಸವಿಗಾನ ಸಂಗೀತ ವಿದ್ಯಾಲಯದ ಸಂಗೀತ ಶಿಕ್ಷಕರಾದ ಶ್ರೀಯುತ ಮಲ್ಲಿಕಾರ್ಜುನ ಶಾನುಭಾಗ್ ರವರ ನಿರ್ದೇಶನದಲ್ಲಿ ಪಿ. ಎನ್. ರವಿಚಂದ್ರ, ಗುರುನಾಥ ಅಣ್ವೇಕರ್, ಜಿ. ಮಾಧವಾಚಾರ್ಯ, ಶಶಿಧರ್, ರವಿಶಂಕರ್, ಶ್ರೀಮತಿ ವಿನೋದ, ಶ್ರೀಮತಿ ವಿಮಲಾ, ಕುಮಾರಿ ಪೂರ್ವಿಕ, ಕುಮಾರ ಅನಿರುದ್ಧ ಮುಂತಾದವರು ಕನ್ನಡ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು.

Leave a Reply

Your email address will not be published. Required fields are marked *

error: Content is protected !!