ಹಾಸನದಿಂದ ಭವಾನಿ ರೇವಣ್ಣ ಸ್ಪರ್ಧೆ

ಹಾಸನ: ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ಸೊಸೆ, ಮಾಜಿ ಸಚಿವ ಹೆಚ್.ಡಿ. ರೇವಣ್ಣ ಪತ್ನಿ ಭವಾನಿ ರೇವಣ್ಣ ಹಾಸನ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿದ್ದಾರೆ.
93 ಕ್ಷೇತ್ರಗಳ ಅಭ್ಯರ್ಥಿಗಳನ್ನು ಜೆಡಿಎಸ್ ಈಗಾಗಲೇ ಘೋಷಿಸಿದೆ. ಆದರೆ, ಹಾಸನ ಕ್ಷೇತ್ರದ ಅಭ್ಯರ್ಥಿಯನ್ನು ಇನ್ನೂ ಘೋಷಿಸಿರಲಿಲ್ಲ. ಆದರೆ ಈ ಬಾರಿ ನನ್ನನ್ನು ಹಾಸನ ಕ್ಷೇತ್ರದಿಂದ ಚುನಾವಣೆಗೆ ಇಳಿಸಲು ನಿರ್ಧರಿಸಲಾಗಿದೆ ಎಂದು ಸಭೆಯೊಂದರಲ್ಲಿ ಮಾತನಾಡಿದ ಅವರು ಹೇಳಿದರು.
ಜೆಡಿಎಸ್‌ನ ಹೆಚ್.ಪಿ. ಸ್ವರೂಪ್ ಸಹ ಈ ಕ್ಷೇತ್ರದಿಂದ ಕಣಕ್ಕಿಳಿಯಲು ಬಯಸಿದ್ದಾರೆ. ದೇವೇಗೌಡರ ಕುಟುಂಬದಿಂದ ಎಂಟು ಜನ ಈಗಾಗಲೇ ರಾಜಕೀಯದಲ್ಲಿದ್ದಾರೆ. ದೇವೇಗೌಡರು ರಾಜ್ಯಸಭಾ ಸದಸ್ಯರಾಗಿದ್ದರೆ, ಕುಮಾರಸ್ವಾಮಿ ಚನ್ನಪಟ್ಟಣದಿಂದ ಶಾಸಕರಾಗಿದ್ದಾರೆ.
ಕುಮಾರಸ್ವಾಮಿ ಪತ್ನಿ ಅನಿತಾ ರಾಮನಗರ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ. ಪುತ್ರ ನಿಖಿಲ್ ಜೆಡಿಎಸ್ ಯುವ ವಿಭಾಗದ ಅಧ್ಯಕ್ಷರಾಗಿದ್ದಾರೆ. ರೇವಣ್ಣ ಹೊಳೆನರಸೀಪುರ ಕ್ಷೇತ್ರದ ಶಾಸಕರು. ಅವರ ಮಗ ಪ್ರಜ್ವಲ್ ಹಾಸನದ ಸಂಸದ. ಸೂರಜ್ ಪರಿಷತ್ ಸದಸ್ಯರಾಗಿದ್ದಾರೆ. ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಹಾಗೂ ವಿಧಾನ ಪರಿಷತ್ತುಗಳಲ್ಲಿ ದೇವೇಗೌಡರ ಕುಟುಂಬದ ಸದಸ್ಯರಿರುವುದು ವಿಶೇಷವಾಗಿದೆ.