ಚನ್ನಗಿರಿಯಲ್ಲಿ ಬೈಕ್ ವ್ಹಿಲಿಂಗ್, ಇಬ್ಬರ ವಿರುದ್ದ ಪ್ರಕರಣ, ಎಚ್ಚರಿಕೆ ನೀಡಿದ ಎಸ್ ಪಿ
ದಾವಣಗೆರೆ: ದಿನಾಂಕ 30.08.2024 ರಂದು ಚನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಚನ್ನಗಿರಿ ಕಡೆಯಿಂದ ಆಜ್ಜಿಹಳ್ಳಿ ಗ್ರಾಮದ ಕಡೆಗೆ ಹೋಗುವ ರಸ್ತೆಯಲ್ಲಿ ಬೈಕ್ ವ್ಹಿಲಿಂಗ್ ಮಾಡಿದ್ದ ಇಬ್ಬರು ಯುವಕರ ವಿರುದ್ದ ಪ್ರಕರಣ ದಾಖಲು ಮಾಡಲಾಗಿದೆ.
ಚನ್ನಗಿರಿ ಕಡೆಯಿಂದ ಒಬ್ಬ ಬೈಕ್ ಸವಾರನು ತನ್ನ ಬೈಕಿನ ಹಿಂಬದಿಯಲ್ಲಿ ಇನ್ನೊಬ್ಬನನ್ನು ಕೂರಿಸಿಕೊಂಡು ಅತೀ ವೇಗವಾಗಿ ಚಾಲನೆ ಮಾಡುತ್ತಾ ಕೇಕೇ ಹಾಕುತ್ತಾ ಬೈಕ್ನ್ ಮುಂದಿನ ಗಾಲಿಯನ್ನು ಹಾರಿಸಿಕೊಂಡು ಹಿಂಬದಿಯ ಒಂದೇ ಗಾಲಿಯಲ್ಲಿ ಚಾಲನೆ (ಬೈಕ್ ವ್ಹಿಲಿಂಗ್ ) ಮಾಡುತ್ತಾ ರಸ್ತೆಯಲ್ಲಿ ಸಂಚರಿಸುವ ಇತರೆ ವಾಹನ ಸವಾರರಿಗೆ & ಸಾರ್ವಜನಿಕರಿಗೆ ತೊಂದರೆಯುಂಟಾಗುವ ರೀತಿಯಲ್ಲಿ ಬೈಕ್ ಸವಾರಿ ಮಾಡುತ್ತಿದ್ದವರನ್ನು ತಡೆದು ವಾಹನದ ದಾಖಲೆಗಳನ್ನು ವಿಚಾರಿಸಲಾಗಿದೆ.
ಯುವಕರು ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಯಾವುದೇ ದಾಖಲೆಗಳನ್ನು ನೀಡದೇ ಇದ್ದು, ಸಂಚಾರ ನಿಯಮಗಳನ್ನು ಉಲ್ಲಂಘನೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟು ಆಗುವಂತೆ ಬೈಕ್ ಸವಾರಿ ಮಾಡುತ್ತಿದ್ದ
1) ತೌಫಿಕ್ ಅಹಮದ್ 23 ವರ್ಷ, ವಿ.ಆರ್. ಬಡಾವಣೆ, ಚನ್ನಗಿರಿ ಚೌನ್,
2) ಮೊಹಮ್ಮದ ತಾಹೀದ್, 19 ವರ್ಷ, ವಿ.ಆರ್. ಬಡಾವಣೆ, ಚನ್ನಗಿರಿ ಟೌನ್, ದಾವಣಗೆರೆ ಜಿಲ್ಲೆ,
ಇವರಿಬ್ಬರ ವಿರುದ್ಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಠಾಣಾ ಗುನ್ನೆ ನಂ ; 391/2024 ರಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ದಾವಣಗೆರೆ ಎಸ್ ಪಿ ಉಮಾ ಪ್ರಶಾಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*ಜಿಲ್ಲಾ ಪೊಲೀಸ್ ವತಿಯಿಂದ ಯುವ ಜನತೆಗೆ ಸೂಚನೆ :
ಜಿಲ್ಲೆಯಲ್ಲಿ ಕೆಲವು ಕಡೆ ಹುಚ್ಚು ಕ್ರೇಜ್ ಗಾಗಿ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳನ್ನು ಹಾಕಲು ಸಂಚಾರ ನಿಯಮಗಳ ಉಲ್ಲಂಘನೆ ಮಾಡಿ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ತೊಂದೆರೆಯುಂಟಾಗುವ ರೀತಿಯಲ್ಲಿ ಹಾಗೂ ತಮ್ಮ ಜೀವಕ್ಕೆ ಹಾನಿಯಾಗುವಂತೆ ವಾಹನ ಚಾಲನೆ ಮಾಡುವಂತ ಯುವಕರು ಕಂಡುಬಂದಿದ್ದು, ಅತೀವೇಗವಾಗಿ, ಹೆಲ್ಮೇಟ್ ಧರಿಸದೇ, ಚಾಲನ ಪರವಾನಿಗೆ ಇಲ್ಲದೇ, ಸಂಚಾರ ನಿಯಮಗಳನ್ನು ಪಾಲನೆ ಮಾಡದೇ ಸಂಚರಿಸುವ ಬೈಕ್ ಸವಾರರಿಗೆ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವತಿಯಿಂದ ಎಚ್ಚರಿಕೆ ನೀಡಲಾಗಿದೆ