Bjp/Congress: ಯಶವಂತರಾವ್ ಜಾಧವ್ ಕೆರೆಗೊಡ್ಡ ಹಾವು: ಹೈಸ್ಕೂಲ್ ಮೈದಾನದಲ್ಲಿ ಬಹಿರಂಗ ಚರ್ಚೆಗೆ ಕಾಂಗ್ರೆಸ್ ಪಂಥಾಹ್ವಾನ

ದಾವಣಗೆರೆ : ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಧ್ಯೆ ಜಟಾಪಟಿ ನಡೆಯುತ್ತಿದ್ದು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರಿಗೆ ಪಂಥಾಹ್ವಾನ ನೀಡಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಹಗರಣಗಳನ್ನು ಮಾಡಿದೆ ಎಂದು ಆರೋಪಿಸುವ ಬಿಜೆಪಿಯವರು ಅದಕ್ಕೆ ತಕ್ಕ ದಾಖಲೆ ತಂದು ಸಾಬೀತು ಪಡಿಸಲಿ. ನಾವು ಸಹ ಬಿಜೆಪಿ ಮಾಡಿರುವ ಹಗರಣಗಳ ದಾಖಲೆ ತರುತ್ತವೇ. ಮುಕ್ತ ಚರ್ಚೆ ಮಾಡಲು ನಾವು ಸಿದ್ದ ಎಂದು ಎಚ್.ಬಿ.ಮಂಜಪ್ಪ ಬಹಿರಂಗ ಸವಾಲು ಹಾಕಿದರು. ಶಾಸಕ ಡಾ.ಶಾಮನೂರು ಶಿವಶಂಕರಪ್ಪರ ವಿರುದ್ಧ ಮರ್ನಾಲ್ಕು ಬಾರಿ ಸೋತು ಹತಾಶರಾಗಿರುವ ಯಶವಂತರಾವ್ ಜಾಧವ್ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ರಾಜಕೀಯದಲ್ಲಿ ನಾನು ಚಾಲ್ತಿಯಲ್ಲಿದ್ದೇನೆಂದು ತೋರಿಸಿಕೊಳ್ಳುತ್ತಿದ್ದಾರೆ. ಸಂಸದ ಜಿ.ಎಂ. ಸಿದ್ದೇಶ್ವರ ತಮ್ಮ ಮೈನ್ಸ್ ಹಗರಣದಲ್ಲಿ ಭಾಗಿಯಾದ್ದರು. ಬೇಲ್ ಮೇಲೆ ಹೊರಗಿದ್ದಾರೆ, ಇದು ತಪ್ಪಲ್ಲವೇ, ಹಗರಣದ ಬಗ್ಗೆ ತಮ್ಮ ಬಳಿ ದಾಖಲೆಗಳಿವೆ ಅಂತಾರೆ ಆರೋಪಿಸುವ ಬದಲು ಸಾಬೀತು ಪಡಿಸಲಿ. ಅದನ್ನು ಬಿಟ್ಟು, ಕಾಂಗ್ರೆಸ್ ಹಗರಣ ಮಾಡಿರುವ ಬಗ್ಗೆ ದಾಖಲೆ ಇದ್ದರೆ ನಾಳೆಯೇ ಬಿಡುಗಡೆ ಮಾಡಲಿ ಎಂದು ಹೇಳಿದರು.
ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಲಸಿಕೆ ನೀಡುವ ಮೂಲಕ ಹೇಳಿದಂತೆ ನಡೆದುಕೊಂಡಿದ್ದಾರೆ. ಆದರೆ, ಸಂಸದ ಸಿದ್ದೇಶ್ವರ ಸರ್ಕಾರದಿಂದ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಮಾತನಾಡುತ್ತಾರೆಯೇ ಹೊರತು, ಅವರು ವೈಯಕ್ತಿಕವಾಗಿ ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆಂಬುದನ್ನು ಬಹಿರಂಗ ಪಡಿಸಬೇಕು ಎಂದು ಹೇಳಿದರು.ಕೆಪಿಸಿಸಿ ವಕ್ತಾರ ಡಿ.ಬಸವರಾಜ ಮಾತನಾಡಿ, ಸಿದ್ದೇಶ್ವರ್ ಸ್ವಂತ ಹಣದಲ್ಲಿ ಲಸಿಕೆ ತಂದು ಜನರ ಜೀವ ಉಳಿಸಿ, ಶಾಮನೂರು ಜತೆ ಆರೋಗ್ಯಕರ ಪೈಪೋಟಿ ನಡೆಸಲಿ ಎಂದು ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಹೆಚ್.ದುಗ್ಗಪ್ಪ, ಕೆ.ಎಸ್.ಬಸವಂತಪ್ಪ, ಮಾಲತೇಶ್ ಜಾಧವ್, ದಿನೇಶ್ ಕೆ.ಶೆಟ್ಟಿ, ಅಯೂಬ್ ಪೈಲ್ವಾನ್, ಎ.ನಾಗರಾಜ್, ವಿನಾಯಕ ಪೈಲ್ವಾನ್, ಕೆ.ಜಿ.ಶಿವಕುಮಾರ್, ಬಿ.ಎಚ್.ಉದಯಕುಮಾರ್, ಸೀಮೆಎಣ್ಣೆ ಮಲ್ಲೇಶ್, ಯುವರಾಜ ಮತ್ತಿತರರು ಹಾಜರಿದ್ದರು.
ಬಿಜೆಪಿ ಯಶವಂತರಾವ್ ಜಾಧವ್ ಕೆರೆಗೊಡ್ಡ ಹಾವು. ಹಾವು ಇಟ್ಟುಕೊಂಡು ಹಾವು ಬಿಡ್ತಿನಿ ಅಂತಾ ಹೇಳುತ್ತಿದ್ದಾರೆ. ಅವರ ಬಳಿ ಯಾವ ದಾಖಲೆಯು ಇಲ್ಲದೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರ ವಿರುದ್ಧ ವಥಾ ಆರೋಪ ಮಾಡುತ್ತಿದ್ದಾರೆ. ತಮ್ಮ ಬೇಳೆಕಾಳು ಬೇಯಿಸಿಕೊಳ್ಳಲು ಅನಗತ್ಯ ಆರೋಪ ಮಾಡುವ ಮೂಲಕ ಒಂದು ಸುಳ್ಳನ್ನು ನೂರು ಬಾರಿ ಹೇಳಿ ಸತ್ಯ ಮಾಡಲು ಹೊರಟಿದ್ದಾರೆಂದು ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ ಆರೋಪಿಸಿದರು.