ಬೆಲೆ ಏರಿಕೆ ನಿಯಂತ್ರಿಸಲು ವಿಫಲವಾದ ಬಿಜೆಪಿ ಸರ್ಕಾರ! ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದಿಂದ ಪ್ರತಿಭಟನೆ

ದಾವಣಗೆರೆ: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆಲೆ ಏರಿಕೆ ನಿಯಂತ್ರಣ ಮಾಡದ ಬಿಜೆಪಿ ಸರ್ಕಾರದ ವಿರುದ್ದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಂಘಟನೆಯು ಇಂದು ಪ್ರತಿಭಟಿಸಿತು. ಪ್ರತಿಭಟನಾ ಮೆರವಣಿಗೆಯು ಅರಳಿಮರ ವೃತ್ತದಿಂದ ಆರಂಭವಾಗಿ ಚಾಮರಾಜಪೇಟೆ ವೃತ್ತದಲ್ಲಿ ಅಂತ್ಯಗೊಂಡಿತು. ಈ ವೇಳೆ ಬಿಜೆಪಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷರು ಮಾತನಾಡಿ, ಕೊರೊನಾ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಮೇಲೇಳಲು ಚಡಪಡಿಸುತ್ತಿರುವ ಜನಸಾಮಾನ್ಯರ ಸ್ಥಿತಿ ಚಿಂತಾಜನಕವಾಗಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಅಗತ್ಯ ವಸ್ತುಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಲೇ ಇರವುದರಿಂದ ಗಾಯದ ಮೇಲೆ ಬರ ಎಳೆದಂತಾಗಿದ್ದು ಬದುಕು ನಿರ್ವಹಣೆ ಹೇಗೆ ಎಂಬ ಚಿಂತೆ ಜನಸಾಮಾನ್ಯರಿಗೆ ಕಾಡುತ್ತಿದೆ.

ಬೆಲೆ ನಿಯಂತ್ರಣದ ವ್ಯವಸ್ಥೆ ಸರ್ಕಾರದ ಮಟ್ಟದಲ್ಲಿ ಜಾರಿಯಾಗದೆ ಹೋದರೆ ಅಥವಾ ಅಗತ್ಯ ವಸ್ತುಗಳ ಧಾರಣೆ ನಿಯಂತ್ರಣವಾಗದೆ ಹೋದರೆ ಮುಂದಿನ ದಿನಗಳಲ್ಲಿ ಭಾರತ ಶ್ರೀಲಂಕಾ ಮಾದರಿಯಲ್ಲಿ ಆರ್ಥಿಕ ಸಂಕಷ್ಟಕ್ಕೊಳಗಾಗುವ ಭಯಕಾಡಲಿದೆ. ಆದರೆ ಸರಕಾರ ಇದ್ಯಾವುದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಕ್ರಿಯೆಗೆ ಪ್ರತಿಕ್ರಿಯೆ ಹೇಳಿಕೆ ಮೂಲಕ ಕೋಮುದ್ವೇಷಕ್ಕೆ ನಿರಂತರ ಕುಮ್ಮಕ್ಕು ನೀಡುತ್ತಿದೆ. ಮಾತು ಮಾತಿಗೆ ಡಬಲ್ ಇಂಜಿನ್ ಸರಕಾರ ಎನ್ನುತ್ತಿರುವ ಬಿಜೆಪಿಯ ಅಧಿಕಾರದಲ್ಲಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮಾತ್ರವಲ್ಲದೆ ಬೆಲೆ ಏರಿಕೆಯ ಬಿಸಿ ಔಷಧಿ ಪದಾರ್ಥಗಳನ್ನೂ ಬಿಟ್ಟಿಲ್ಲ. ಇದೀಗ ಔಷಧಿಗಳ ಬೆಲೆಯೂ ಶೇಕಡ 10.76ರಷ್ಟು ಏರಿಕೆಯಾಗಿದೆ. ಇನ್ನು ಕೃಷಿ ವಲಯವೂ ಕೂಡ ಬೆಲೆ ಏರಿಕೆಯಿಂದ ತನ್ನನ್ನು ಕಾಪಾಡಿಕೊಳ್ಳಲು ಸಾಧ್ಯವಾಗಿಲ್ಲ.
ಪ್ರಧಾನಮಂತ್ರಿ ಮೋದಿಯವರು ರೈತರ ಆದಾಯ ಹೆಚ್ಚಿಸುತ್ತೇನೆ ಎಂದು ಬಡಾಯಿ ಕೊಚ್ಚಿಕೊಂಡಿದ್ದರು. ಆದರೆ ವಾಸ್ತವಂಶ ಬೇರೆನೇ ಹೇಳುತ್ತದೆ. ಕೀಟನಾಶಕಗಳ ಮೇಲೆ 18 %, ಕೃಷಿ ಯಂತ್ರೋಪಕರಣಗಳ ಮೇಲೆ 12 % ಮತ್ತು ರಸಗೊಬ್ಬರಗಳ ಮೇಲೆ 5 % ಜಿ.ಎಸ್.ಟಿ ವಿಧಿಸುವ ಮೂಲಕ ರೈತರಿಗೆ ಬರುತ್ತಿದ್ದ ಅಲ್ಪಸ್ವಲ್ಪ ಆದಾಯಕ್ಕೂ ಸರ್ಕಾರ ಅಡ್ಡಗಾಲು ಹಾಕಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯ ದುಷ್ಪರಿಣಾಮಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ದುರಾಡಳಿತವೇ ಪ್ರಮುಖ ಕಾರಣವಾಗಿದೆ. ಅಧಿಕಾರ ಲಭಿಸಿದ ದಿನದಿಂದ ಯಾವುದೇ ಅಭಿವೃದ್ಧಿ ಕಾರ್ಯ ಮಾಡದ ಬಿಜೆಪಿ ಸರ್ಕಾರ ತನ್ನ ವೈಫಲ್ಯಗಳನ್ನು ಮರೆಮಾಚಲು ಕೆಲ ದುಷ್ಟ ಶಕ್ತಿಗಳನ್ನು ಸಮಾಜದಲ್ಲಿ ಚೂಬಿಡುವ ಮೂಲಕ ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತಿ ಅರಾಜಕತೆ ಸೃಷ್ಟಿಸುತ್ತಿದೆ. ಜನಸಾಮಾನ್ಯರು ಮೂಕ ಪ್ರೇಕ್ಷಕರಾಗಿ ಚುನಾವಣೆಗೆ ಮುಂಚೆ ನೀಡಲಾಗಿದ್ದ ಭರವಸೆಯ ‘ ಅಚ್ಚೇ ದಿನ್ ” ಅಂದರೆ ಇದೇನಾ ಎಂದು ನೋಡುವಂತಾಗಿದೆ.
ಆರ್ಥಿಕ ಸಂಕಷ್ಟದಿಂದ ದೇಶವು ದಿವಾಳಿ ಆಗುವ ಮುಂಚೆ ಸರ್ಕಾರ ಎಚ್ಚೆತ್ತುಕೊಂಡು ಜನಸಾಮಾನ್ಯರ ಹಿತಾಸಕ್ತಿಗಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ತಕ್ಷಣ ಕಡಿವಾಣ ಹಾಕಬೇಕು ಎಂದು ಎಸ್.ಡಿ.ಪಿ.ಐ ದಾವಣಗೆರೆ ಜಿಲ್ಲಾ ಸಮಿತಿ ಒತ್ತಾಯಿಸಿದೆ.

 
                         
                       
                       
                       
                       
                       
                       
                      