SS meets BSY: ಬಿ ಎಸ್ ವೈ ಗೆ ತೊಂದರೆ ಮಾಡಿದರೆ ಬಿಜೆಪಿ ಇತಿಹಾಸ ಮುಗಿದಂತೆ: ಹೈಕಮಾಂಡ್ ಗೆ ಎಚ್ಚರಿಕೆ ನೀಡಿದ ಶಾಮನೂರು ಶಿವಶಂಕರಪ್ಪ

ದಾವಣಗೆರೆ: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ತೀವ್ರ ಸಂಚಲನ ಮೂಡಿಸಿದ್ದು, ಬಿ.ಎಸ್. ಯಡಿಯೂರಪ್ಪ ಅವರಿಗೆ ಪಕ್ಷಾತೀತವಾಗಿ ಬೆಂಬಲ ವ್ಯಕ್ತವಾಗುತ್ತಿದೆ.
ಇಂದು ದಾವಣಗೆರೆಯ ಕಾಂಗ್ರೆಸ್ ಹಿರಿಯ ಶಾಸಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಕೂಡ ಬೆಂಬಲ ವ್ಯಕ್ತಪಡಿಸಿದ್ದು, ಸಿಎಂ ಯಡಿಯೂರಪ್ಪ ರನ್ನ ಮನೆಯಲ್ಲಿ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಬಿಎಸ್ ವೈ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಬಿಜೆಪಿ ಕಥೆ ಮುಗಿದಂತೆ ಎಂದು ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡಿದ್ದಾರೆ.
ಯಡಿಯೂರಪ್ಪ ನಾಯಕತ್ವದಲ್ಲಿ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. ಅವರ ಪರವಾಗಿ ನಾವಿದ್ದೇವೆ ಎಂದು ಈ ಹಿಂದೆಯೂ ಶಾಮನೂರು ಬೆಂಬಲ ವ್ಯಕ್ತಪಡಿಸಿದ್ದರು.
ಯಡಿಯೂರಪ್ಪ ಅವರ ಬೆನ್ನಿಗೆ ವೀರಶೈವ ಲಿಂಗಾಯತ ಸಮುದಾಯ ನಿಲ್ಲುತ್ತದೆ. ಯಡಿಯೂರಪ್ಪ ಅವರ ಬದಲಾವಣೆ ಮಾಡಿದರೆ ಇತಿಹಾಸ ಮುಗಿಯಿತು ಎಂದರ್ಥ. ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಪದಚ್ಯುತಗೊಳಿಸಿದರೆ ಈ ಹಿಂದೆ ಜೆ ಎಚ್ ಪಟೇಲ್, ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ಎಸ್. ಆರ್. ಬೊಮ್ಮಾಯಿ ಬದಲಾವಣೆ ಸಂದರ್ಭದಲ್ಲಿ ಆದ ಇತಿಹಾಸ ಮರುಕಳಿಸುತ್ತದೆ ಎಂದು ಎಚ್ಚರಿಕೆ ನೀಡಿದರು.
ಎಂ.ಬಿ. ಪಾಟೀಲ್ ಅವರು ಹೇಳಿದ್ದು ಸರಿಯಾಗಿದ್ದು, ಹೈಕಮಾಂಡ್ ಯಡಿಯೂರಪ್ಪ ಅವರನ್ನು ಇಳಿಸುತ್ತಾರೆ ಅನ್ನೋದು ಸುಳ್ಳು. ಇಡೀ ರಾಜ್ಯದ ವೀರಶೈವ ಸಮುದಾಯ ಯಡಿಯೂರಪ್ಪ ಅವರ ಬೆನ್ನ ಹಿಂದಿದೆ ಎಂದು ಬಿಎಸ್ ವೈ ಗೆ ಬೆಂಬಲಿಸಿದರು.
ಕರ್ನಾಟಕದ ಸಿಎಂ ಆಗಿ ಯಡಿಯೂರಪ್ಪ ಅವರೇ ಮುಂದುವರೆಯಬೇಕು ಅನ್ನುವುದು ಸಮುದಾಯದ ಆಶಯ. ಯಡಿಯೂರಪ್ಪ ಅವರಿಗೆ ತೊಂದರೆ ಮಾಡಿದರೆ ಬಿಜೆಪಿ ಇತಿಹಾಸ ಮುಗಿದಂತೆ. ಬಿಜೆಪಿ ಹೈಕಮಾಂಡ್ ಅವರನ್ನು ಬದಲಾವಣೆ ಮಾಡಲಿ ಆಗ ನಾವು ಮಾತಾನಾಡುತ್ತೇವೆ ಎಂದರು.