ಬಿಜೆಪಿ ಕೆಡರ್ ಪಕ್ಷವಲ್ಲ, ‘ಕೋಮು ಬೇಸ್ ಪಕ್ಷ’ – ಕೆಪಿಸಿಸಿ ವಕ್ತಾರ ಡಿ ಬಸವರಾಜ್
ದಾವಣಗೆರೆ: ಬಿಜೆಪಿ ಕೇಡರ್ ಪಕ್ಷವಲ್ಲ ಅದೊಂದು ‘ಕೋಮು ಬೇಸ್’ ಪಕ್ಷ. ಬಿಜೆಪಿಗರು ತಾಲಿಬಾನಿಗಳಂತೆ ಹೆಣ್ಣುಮಕ್ಕಳನ್ನು ನಡೆಸಿಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಹಿನ್ನೆಲೆಯಲ್ಲಿ ಅಲ್ಲಿನ ವಿಶ್ವವಿದ್ಯಾಲಯದ ಕುಲಪತಿಗಳು ಒಂಟಿ ಮಹಿಳೆಯರು ಕಾಲೇಜ್ ಕ್ಯಾಂಪಸ್‌ನಲ್ಲಿ ಓಡಾಡುವಂತಿಲ್ಲ ಎಂಬ ಆದೇಶ ನೀಡುತ್ತಾರೆ. ಹಾಗಿದ್ದರೆ, ಮಹಿಳೆಯರಿಗೆ ಸ್ವಾತಂತ್ರ್ಯವಿಲ್ಲವೇ? ವಿದ್ಯಾರ್ಥಿನಿಯರಿಗೆ ರಕ್ಷಣೆ ನೀಡುವುದು ಇವರ ಕರ್ತವ್ಯವಲ್ಲವೇ? ಬಿಜೆಪಿ ಆಡಳಿತದಲ್ಲಿ ಮಹಿಳೆಯರ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗುತ್ತಿದೆ. ಹೆಣ್ಣುಮಕ್ಕಳಿಗೆ ರಕ್ಷಣೆ ನೀಡದ ಇವರು ತಾಲೀಬಾನ್ ಸಂಸ್ಕೃತಿ ಹೊಂದಿದವರು ಎಂದು ಹರಿಹಾಯ್ದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರು ಸೆ.1 ಮತ್ತು 2ರಂದು ದಾವಣಗೆರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಯ ಸಂಬAಧ ಎರಡು ದಿನಗಳ ಪ್ರವಾಸವನ್ನು ಹಮ್ಮಿಕೊಂಡಿದ್ದಾರೆ.
ಸೆ.1 ರಂದು ಮಧ್ಯಾಹ್ನ 3:30ಕ್ಕೆ ನಗರದ ಪೂಜಾ ಇಂಟರ್‌ನ್ಯಾಷನಲ್ ಹೋಟೇಲ್‌ನಲ್ಲಿ ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಯ ಸಭೆಯಲ್ಲಿ ಭಾಗವಹಿಸುವರು. ನಂತರ ಸಂಜೆ 6:30ಕ್ಕೆ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಭೇಟಿ ಮಾಡಲಿದ್ದಾರೆ. ಸೆ. 2 ರಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸೆ.2 ರಂದು ಸಿಎಂ ಬಸವರಾಜ್ ಬೊಮ್ಮಾಯಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸಲೀಂ ಅಹ್ಮದ್ ಅವರಿಗಾಗಿ ಸರ್ಕ್ಯೂಹೌಸ್‌ನಲ್ಲಿ ಕಾಯ್ದಿರಿಸಿದ್ದ ಕೊಠಡಿ ರದ್ಧು ಪಡಿಸಲಾಗಿರುವುದು ಖಂಡನಾರ್ಹ. ಅಧಿಕಾರಿ ವರ್ಗದವರು ಆಡಳಿತ ಪಕ್ಷದವರ ಕೈಗೊಂಬೆಯಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಹರಿಹಾಯ್ದರು.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಅಧಿಕಾರಿ ವರ್ಗದವರು ಆಗ ನಮ್ಮ ಕೈಕೆಳಗೆ ಕೆಲಸ ಮಾಡಬೇಕಾಗುತ್ತದೆ. ಅದನ್ನು ಎಚ್ಚರಿಕೆಯಿಂದ ಮನಗೊಂಡು ಕಾನೂನು ರೀತಿ ಕೆಲಸ ಮಾಡಬೇಕು. ಅಧಿಕಾರಿಗಳು ಯಾರ ಕೈಗೊಂಬೆಯಾಗದೆ ಕನಿಷ್ಟ ನ್ಯಾಯುತವಾಗಿ ನಡೆದುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಮುಖಂಡರುಗಳಾದ ಕೆ.ಎಂ. ಮಂಜುನಾಥ್, ಎಂ.ಕೆ. ಲಿಯಾಖತ್ ಅಲಿ, ಮಹ್ಮದ್ ಜಿಕ್ರಿಯಾ, ಡಿ. ಶಿವಕುಮಾರ್, ಸುರೇಶ್ ಜಾಧವ್ ಇತರರು ಇದ್ದರು.