ಬಿಜೆಪಿ ಶಾಸಕರನ್ನ ಕಾಂಗ್ರೆಸ್ ನವರು ಸಂಪರ್ಕಿಸಿದ್ದಾರೆ: ವಿರೋಧ ಪಕ್ಷದವರನ್ನ ಹಗುರವಾಗಿ ಪರಿಗಣಿಸಬೇಡಿ – ಬಿ ಎಸ್ ವೈ ಕಿವಿಮಾತು

ದಾವಣಗೆರೆ: ಡಿಕೆ ಶಿವಕುಮಾರ್ ನಮ್ಮ ಪಕ್ಷದವರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಡಿಕೆಶಿ ಸಫಲತೆ ಕಾಣುವುದಿಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ತ್ರಿಶೂಲ್ ಕಲಾಭವನದಲ್ಲಿ ನಡೆದ ಬಿಜೆಪಿ ರಾಜ್ಯಕಾರ್ಯಕಾರಿಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿಗರನ್ನ ಕಾಂಗ್ರೆಸ್ ನವರು ಸಂಪರ್ಕಿಸಿದ್ದು ನಿಜ. ಯಾರು ಬಿಜೆಪಿ ಬಿಟ್ಟು ಕಾಂಗ್ರೆಸ್ ಹೋಗುವ ಪ್ರಶ್ನೆಯೇ ಇಲ್ಲ. ಅನೇಕ ಕಾಂಗ್ರೆಸ್ ನವರು ಬಿಜೆಪಿಗೆ ಬರುತ್ತಿದ್ದಾರೆ ಎಂದರು.
ನಮ್ಮ ಪಕ್ಷದವರು ಕಾರ್ಯಕರ್ತರು, ಮುಖಂಡರು, ಶಾಸಕರು ಮತ್ತು ಸಚಿವರುಗಳು ಪಕ್ಷದ ಬಲವರ್ಧನೆ ಮುಂದಾಗಬೇಕು. ಪಕ್ಷದ ಎಸ್ ಸಿ, ಎಸ್ ಟಿ, ಓಬಿಸಿ ಘಟಕಗಳನ್ನು ಬಲಪಡಿಸಬೇಕು. ಕೇಂದ್ರ ಮತ್ತು ರಾಜ್ಯದ ಎಲ್ಲಾ ಯೋಜನೆಗಳನ್ನು ಜನರಿಗೆ ತಲುಪಿಸಬೇಕು. ಯಾವುದೇ ಕಾರಣಕ್ಕೂ ಪ್ರತಿಪಕ್ಷಗಳನ್ನು ಹಗುರವಾಗಿ ಕಾಣಬೇಡಿ ಎಂದು ಸಲಹೆ ನೀಡಿದರು.
ಪ್ರಧಾನಿ ಮೋದಿ ಅವರ ನಾಯಕತ್ವ ಮುಂದಿಟ್ಟುಕೊಂಡು ಚುನಾವಣೆ ನಡೆದು ಎದುರಿಸಿ ಗೆಲ್ಲುವುದು ಸುಲಭ. ಆದರೆ, ಅದಕ್ಕಿಂತ ಸರ್ಕಾರದ ಎಲ್ಲಾ ಯೋಜನೆಗಳನ್ನ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಕೆಲಸ ಮಾಡಿ ಚುನಾವಣೆಗೆ ಸನ್ನದ್ದರಾಗಿ. ಸದ್ಯಕ್ಕೆ ಸಿಂದಗಿ, ಹಾನಗಲ್ ಚುನಾವಣೆಯಿದ್ದು, ಹಗುರವಾಗಿ ತೆಗೆದುಕೊಳ್ಳಬೇಡಿ ಎಂದರು.
ಪ್ರಪಂಚದಲ್ಲಿಯೇ ಅಚ್ಚರಿ ಪಡುವ ನಾಯಕತ್ವ ಮೋದಿಯವರದು. ಮೈಸೂರಿನಲ್ಲಿ ಮೋದಿಯವರ ನೆನಪಿಸುವ ಉತ್ತಮ ಕಾರ್ಯಕ್ರಮ ನಡೆದಿದೆ ಎಂದ ಅವರು, ಬರುವ ವಿಧಾನಸಭಾ ಚುನಾವಣೆಯಲ್ಲಿ ನಾವು 140-140 ಸೀಟ್ ಗಳನ್ನ ಗೆಲ್ಲಬೇಕಿದೆ ಎಂದು ಕರೆನೀಡಿದರು.