“ಬೇಡರ ಕಿವಿಯಲ್ಲಿ ಕಮಲ” ಎಂಬ ಆಂದೋಲನ: ಬಿಜೆಪಿಯವರು ಆತ್ಮ ವಿಮರ್ಶೆ ಮಾಡಿಕೊಳ್ಳಿ – ಸಾಮಾಜಿಕ ಕಾರ್ಯಕರ್ತ ಅಂಜುಕುಮಾರ್‌ ಪಿ. ಬಿ.

Screenshot_20210917-171602_WhatsApp

ದಾವಣಗೆರೆ: ಕರ್ನಾಟಕದ 4ನೇ ದೊಡ್ಡ ಸಮುದಾಯವಾದ ವಾಲ್ಮೀಕಿ ನಾಯಕ ಸಮುದಾಯವನ್ನು ತಾವುಗಳು ನಿರಂತರ ನಿರ್ಲಕ್ಷ್ಯ ಮಾಡುತ್ತಿರುತ್ತೀರಿ. ಹೇಗೆಂದರೆ ಈ ಹಿಂದೆ ರಾಜನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಜಾತ್ರೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಅಂದಿನ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ನಮ್ಮ ಪರಿಶಿಷ್ಟ ಪಂಗಡಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಂವಿಧಾನ ಬದ್ಧವಾದ 7.5% ಮೀಸಲಾತಿಯನ್ನು ನೀಡುವುದಾಗಿ ವಾಲ್ಮೀಕಿ ಜಾತ್ರೆಯಲ್ಲಿ ಘೋಷಣೆ ಮಾಡಿದ್ದು, ಇಂದಿಗೂ ಮೀಸಲಾತಿ ಜಾರಿಗೊಳಿಸಿಲ್ಲ ಮತ್ತು ಬಿಜೆಪಿ ಅಧಿಕಾರಕ್ಕೆ ಬಂದರೆ ವಾಲ್ಮೀಕಿ ನಾಯಕ ಸಮುದಾಯಕ್ಕೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ಘೋಷಿಸಿದ್ದೀರಿ. ಆದರೆ ಇಂದಿಗೂ ನಮ್ಮ ಸಮುದಾಯಕ್ಕೆ ಉಪಮುಖ್ಯಮಂತ್ರಿ ಸ್ಥಾನ ನೀಡಿರುವುದಿಲ್ಲ.

ರಾಜ್ಯದ 4ನೇ ಅತಿದೊಡ್ಡ ಸಮುದಾಯವಾದ ವಾಲ್ಮೀಕಿ ನಾಯಕ ಸಮುದಾಯಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಸಚಿವ ಸಂಪುಟದಲ್ಲಿ ಮತ್ತೊಂದು ಸಚಿವ ಸ್ಥಾನ ನೀಡಬೇಕಿತ್ತು. ಆದರೆ ಸಂಪುಟದಲ್ಲಿ ಕೇವಲ ಒಂದೇ ಸಚಿವ ಸ್ಥಾನ ನೀಡಿದ್ದೀರಿ ಮತ್ತು ಚಿತ್ರದುರ್ಗದಲ್ಲಿ ಈ ಹಿಂದೆ ತಮ್ಮ ಪಕ್ಷದ ಕೇಂದ್ರ ಸಚಿವರಾದ ಅಮಿತ್‌ ಷಾರವರು ರಾಲಿಯ ವೇಳೆ ಮದಕರಿ ನಾಯಕರ 100 ಕೋಟಿ ವೆಚ್ಚದ ಥೀಮ್ ಪಾರ್ಕ್ ಮಾಡುವುದಾಗಿ ಘೋಷಿಸಿದ್ದರು. ಅದು ಇನ್ನೂ ಘೋಷಣೆಯಾಗಿಯೇ ಉಳಿದಿದೆ ಹಾಗೂ ಹಲವು ಜಾತಿಯ ಅಭಿವೃದ್ಧಿ ನಿಗಮಗಳಿಗೆ ತಲಾ 500 ಕೋಟಿಯಷ್ಟು ಅನುದಾನ ನೀಡಿ, ನಮ್ಮ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಕೇವಲ 47 ಕೋಟಿ ನೀಡಿ, ತಾರತಮ್ಯ ಮಾಡಿದ್ದೀರಿ.

ನಮ್ಮ ಸಮುದಾಯದ ಮೇಲಿನ ನಿರಂತರ ನಿರ್ಲಕ್ಷ್ಯ ಧೋರಣೆಯನ್ನು ಈ ಕೂಡಲೇ ನಿಲ್ಲಿಸಿ, ನಮ್ಮ ನ್ಯಾಯ ಸಮ್ಮತ ಈ ಮೇಲಿನ ಒತ್ತಾಯಗಳನ್ನು ಪರಿಗಣಿಸಿ, ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಶೀಘ್ರದಲ್ಲೇ “ಬೇಡರ ಕಿವಿಯಲ್ಲಿ ಕಮಲ” ಎಂಬ ಆಂದೋಲನ ರೂಪಿಸಿ, ನಮ್ಮ ಮಧ್ಯೆ ಕರ್ನಾಟಕದಿಂದಲೇ ವಿಭಿನ್ನ ಚಳುವಳಿ ಹಾಗೂ ನಮ್ಮ ನಾಯಕ ಸಮುದಾಯದವರಲ್ಲಿ ಸದರಿ ವಿಚಾರವಾಗಿ ಜಾಗೃತಿ ಮೂಡಿಸುವ ಅಭಿಯಾನ ಆರಂಭಿಸಲಾಗುತ್ತದೆ. ಹಾಗೂ ನಿರಂತರವಾಗಿ ವಿವಿಧ ಕನ್ನಡಪರ, ಹಿಂದೂಪರ, ದಲಿತಪರ ಮತ್ತು ವಿರೋಧ ಪಕ್ಷಗಳಿಗೆ ನಮ್ಮ ಸಮುದಾಯಕ್ಕೆ ಆಗಿರುವ ಎಲ್ಲಾ ಅನ್ಯಾಯವನ್ನು ವಿವರಿಸಿ. ನಮ್ಮ ನ್ಯಾಯಯುತ ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿ, ಎಲ್ಲಾ ಸಂಘಟನೆಗಳ ಬೆಂಬಲದೊಂದಿಗೆ ರಾಜ್ಯಾದ್ಯಂತ “ಬೇಡರ ಕಿವಿಯಲ್ಲಿ ಕಮಲ” ಎಂಬ ಬೃಹತ್ ಅಭಿಯಾನ ಆರಂಭಿಸಲಾಗುವುದು. ಆದ್ದರಿಂದ ದಯಮಾಡಿ, ಭಾರತೀಯ ಜನತಾ ಪಾರ್ಟಿಯ ವರಿಷ್ಠರು ಈ ಬಗ್ಗೆ ಗಂಭೀರವಾಗಿ ಯೋಚಿಸಿ, ನಮ್ಮ ಸಮುದಾಯಕ್ಕೆ ನ್ಯಾಯ ಒದಗಿಸಿ ಎಂದು ಒತ್ತಾಯ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!