Borewell: ಮನೆ ಬೋರ್ ವೆಲ್ ನೀರು ವಾಣಿಜ್ಯ ಉದ್ದೇಶಕ್ಕೆ ಬಳಕೆ, ಕ್ರಮ ಕೈಗೊಳ್ಳಲು ಸರಸ್ವತಿ ಬಡಾವಣೆ ನಿವಾಸಿಗಳ ಆಗ್ರಹ

ದಾವಣಗೆರೆ: (Borewell) ಅಂತರ್ಜಲ ಪ್ರಾಧಿಕಾರದ ನಿರಾಪೇಕ್ಷಣಾ ಪತ್ರವನ್ನು ಪಡೆಯದೆ ಮನೆಯ ಬೋರ್ ವೆಲ್ಲಿನಿಂದ ವಾಣಿಜ್ಯ ಉದ್ದೇಶಕ್ಕಾಗಿ ಸರತಿ ಸಾಲಿನಲ್ಲಿ ಸತತ ನಾಲ್ಕೈದು ವರ್ಷಗಳಿಂದ ಟ್ಯಾಂಕರ್ ಗಳ ಮೂಲಕ ದಿನಕ್ಕೆ 25 ರಿಂದ 50ಕ್ಕೂ ಹೆಚ್ಚು ಟ್ಯಾಂಕರ್ ನೀರನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸುತ್ತಿದ್ದು, ಈ ಬಗ್ಗೆ ಜಿಲ್ಲಾ ಅಂರ್ತಜಲ ಪ್ರಾಧಿಕಾರದ ಅಧ್ಯಕ್ಷರು, ಜಿಲ್ಲಾಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸರಸ್ವತಿ ನಗರ ‘ಸಿ’ ಬ್ಲಾಕ್ನ ಎಲ್ಲಾ ನಿವಾಸಿಗಳು ಒತ್ತಾಯಿಸಿದ್ದಾರೆ.
ಸರಸ್ವತಿ ನಗರ ಬ್ಲಾಕ್ನ ನಿವಾಸಿ ತಮ್ಮ ಮನೆಯ ಬೋರ್ ವೆಲ್ ನಿಂದ ಒಂದೇ ಸಮನೆ ಸತತವಾಗಿ 4-5 ವರ್ಷಗಳಿಂದ ಸರತಿ ಸಾಲಿನಲ್ಲಿ ಟ್ಯಾಂಕರ್ಗಳ ಮೂಲಕ ದಿನಕ್ಕೆ 25 ರಿಂದ 50ಕ್ಕೂ ಹೆಚ್ಚು ಬಾರಿ ವಾಣಿಜ್ಯ ಉದ್ದೇಶಕ್ಕಾಗಿ ತಮ್ಮ ಪ್ರಾಧಿಕಾರದ ಅನುಮತಿ ಪಡೆಯದೆ ನೀರಿನ ಮಾರಾಟ ಮಾಡುತ್ತಿರುತ್ತಾರೆ. ಈ ವಿಷಯವಾಗಿ ಜಿಲ್ಲಾಧಿಕಾರಿಗಳ ಆದೇಶದ ಅನ್ವಯ ಬೋರ್ ವೆಲ್ ಗಳಲ್ಲಿ ಕಛೇರಿಯ ಹಿರಿಯ ಭೂ ವಿಜ್ಞಾನಿಗಳು ಹಲವು ಬಾರಿ ನೋಟಿಸ್ ನೀಡಿದ್ದರೂ, ಅದನ್ನು ಲೆಕ್ಕಿಸದೆ ದಿನೇದಿನೇ ಹೆಚ್ಚುಹೆಚ್ಚು, ಟ್ಯಾಂಕರ್ ನೀರನ್ನು ಮಾರಾಟ ಮಾಡುತ್ತಿದ್ದಾರೆ.
ಈ ಕುರಿತು ಕಾಲೋನಿಯ ನಿವಾಸಿಗಳು ಪಾಲಿಕೆ ಸದಸ್ಯ ಕೆ.ಎಂ.ವೀರೇಶ್ ಜತೆಗೂಡಿ ಚಂದ್ರಶೇಖರಪ್ಪ ಅವರಲ್ಲಿ ಹಲವು ಬಾರಿ ವಿನಂತಿಸಿದರೂ, ಲೆಕ್ಕಿಸದೆ ತಮ್ಮ ನೀರಿನ ಮಾರಾಟದ ಅರ್ಭಟವನ್ನು ಮುಂದುವರಿಸಿದ್ದಾರೆ. ಇದರಿಂದಾಗಿ ಕಾಲೋನಿಯ ವಸತಿ ಪ್ರದೇಶದಿಂದ ಕೈಗಾರಿಕಾ ಪ್ರದೇಶವಾಗಿ ಮಾರ್ಪಟ್ಟಿದ್ದು, ಇಲ್ಲಿನ ಮಕ್ಕಳು ವೃದ್ಧರು ರಸ್ತೆಗಳಲ್ಲಿ ಓಡಾಡುವುದು ತುಂಬಾ ಕಷ್ಟವಾಗಿರುತ್ತದೆ, ಇದಲ್ಲದೇ ನಮ್ಮ ಕಾಲೋನಿಯ ಬೋರ್ ವೆಲ್ ಗಳಲ್ಲಿ ನೀರಿನ ಮಟ್ಟ ದಿನೇ-ದಿನೇ ಕುಸಿಯುತ್ತಿದ್ದು, ಮುಂದಿನ ದಿನಗಳಲ್ಲಿ ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಲಿದೆ ಎಂದು ಸ್ಥಳೀಯ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ರೀತಿ ದಾವಣಗೆರೆಯ ಬಹಳ ಕಾಲೋನಿಗಳಲ್ಲಿ ಮನೆ ಬೋರ್ ವೆಲ್ ಗಳಿಂದ ನೀರಿನ ಮಾರಾಟ ಹಲವು ವರ್ಷಗಳಿಂದ ನಡೆಯುತ್ತಿದೆ. ಆಯಾ ಕಾಲೋನಿಯ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಪ್ರಾಧಿಕಾರದ ಅನುಮತಿ ಪಡೆಯದೆ ವಾಣಿಜ್ಯ ಉದ್ದೇಶಕ್ಕಾಗಿ ನೀರು ಮಾರಾಟ ಮಾಡುತ್ತಿರುವ ಚಂದ್ರಶೇಖರಪ್ಪರ ವಿರುದ್ಧ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಬೇಕೆಂದು ಸರಸ್ವತಿ ನಗರ ‘ಸಿ’ ಬ್ಲಾಕಿನ ಎಲ್ಲಾ ನಿವಾಸಿಗಳು ಮನವಿ ಮಾಡಿದ್ದಾರೆ.