ಸಚಿವ ಜಾರಕಿಹೊಳಿ ಹೇಳಿಕೆಗೆ ರಾಜ್ಯ ಬಿಪಿಎಲ್ ಕಾರ್ಡುದಾರರ ಸಂಘ ಬೆಂಬಲ
ದಾವಣಗೆರೆ: ಸರ್ಕಾರದ ಮಹತ್ವಾಕಾಂಕ್ಷೆ ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಿಸುವ ಅಗತ್ಯವಿದೆ ಎಂಬ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರ ಹೇಳಿಕೆಯನ್ನು ರಾಜ್ಯ ಬಿಪಿಎಲ್ ಕಾರ್ಡುದಾರರ ಸಂಘವು ಬೆಂಬಲಿಸಿದೆ.
ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಯೋಜನವನ್ನು ಆರ್ಥಿಕವಾಗಿ ದುರ್ಬಲವಾಗಿರುವವರಿಗೆ ಮಾತ್ರ ನೀಡಬೇಕೆಂಬ ಸತೀಶ್ ಜಾರಕಿಹೊಳಿಯವರು ಅಭಿಪ್ರಾಯ ನ್ಯಾಯಸಮ್ಮತವಾಗಿದ್ದು ಸರ್ಕಾರ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಂಘದ ರಾಜ್ಯ ಸಂಚಾಲಕ ಪಿ.ಜಿ ಅಂಜುಕುಮಾರ್ ಆಗ್ರಹಿಸಿದ್ದಾರೆ.
ಸರ್ಕಾರ ಕೂಡಲೇ ಅನಧಿಕೃತ ಬಿಪಿಎಲ್ ಕಾರ್ಡ್ಗಳನ್ನು ಹಿಂದಿರುಗಿಸಲು ಒಂದು ತಿಂಗಳ ಕಾಲಾವಕಾಶ ನೀಡಿ, ಆದಾಗ್ಯೂ ಅನರ್ಹರು ಬಿಪಿಎಲ್ ಕಾರ್ಡುಗಳನ್ನು ಹೊಂದಿದ್ದರೆ ಅವರ ವಿರುದ್ಧ ಶಿಸ್ತಿನ ತನಿಖೆ ನಡೆಸಿ ಪತ್ತೆ ಹಚ್ಚಿ ದಂಡ ವಿಧಿಸಬೇಕು. ಸಾಧ್ಯವಾದರೆ ಈ ವಿಚಾರವಾಗಿ ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.