ಇಟ್ಟಿಗೆ ಸರ್ಕಾರಿ ಶಾಲೆ ಅವ್ಯವಸ್ಥೆ! ಅಭಿವೃದ್ಧಿ ಹರಿಕಾರರು ಗಮನ ಕೊಡಿ! ಗರುಡವಾಯ್ಸ್ ನೊಂದಿಗೆ ಮಾಹಿತಿ ಹಂಚಿಕೊಂಡ ಮುಖ್ಯ ಶಿಕ್ಷಕ
ದಾವಣಗೆರೆ : ಚನ್ನಗಿರಿ ತಾಲ್ಲೂಕಿನ ಇಟ್ಟಿಗೆ ಗ್ರಾಮ ಪಂಚಾಯಿತಿ ಪಕ್ಕದಲ್ಲಿ ಇರುವ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಅವ್ಯವಸ್ಥೆ ಕುರಿತು ವಿಡಿಯೋ ಮಾಡಿ ವಾಟ್ಸಪ್ ಗಳಲ್ಲಿ ಹರಿಬಿಟ್ಟಿದ್ದು ಅಭಿವೃದ್ಧಿ ಹರಿಕಾರರು ಎಂದು ಹೇಳಿಕೊಳ್ಳುವವರು ಇಟ್ಟಿಗೆ ಶಾಲೆ ಅಭಿವೃದ್ಧಿ ಕಡೆ ಗಮನ ಕೊಡಿ ಎಂದು ಸಲಹೆ ನೀಡಿದ್ದಾರೆ.
ಈ ವಿಡಿಯೋ ಜೊತೆಗೆ ಶಾಲೆ ಕುರಿತ ಮಾಹಿತಿ ಬರೆದು ಶೇರ್ ಮಾಡಿದ್ದು ಪ್ರಸ್ತುತ ಈ ಶಾಲೆಯಲ್ಲಿ ಒಟ್ಟು 145 ವಿದ್ಯಾರ್ಥಿಗಳಿದ್ದಾರೆ. 9 ಕೊಠಡಿಗಳಿವೆ, 9 ಕೊಠಡಿಯಲ್ಲಿ 1 ಕಛೇರಿ, ಇನ್ನುಳಿದ 8 ಕೊಠಡಿಯಲ್ಲಿ 6 ಕೊಠಡಿಗಳ ಹೆಂಚುಗಳು ಒಡೆದು ಮಳೆಯಿಂದ ನೀರು ಸೋರುತ್ತಿದೆಯಂತೆ. ಅಷ್ಟೇಅಲ್ಲದೇ ಮಳೆ ಸೋರುವ ಜಾಗದಲ್ಲಿ ಪಾತ್ರೆ, ಬಕೆಟ್ ಇಡಲಾಗಿದೆ., ಇನ್ನುಳಿದ 2 ಕೊಠಡಿಯಲ್ಲಿ 145 ಮಕ್ಕಳು ಕುಳಿತು ಓದುವ ಪರಿಸ್ಥಿತಿ ಇದೆ. ಸರ್ಕಾರಿ ಶಾಲೆಗಳಲ್ಲಿ ಸರಿಯಾದ ಮೂಲಭೂತ ಸೌಕರ್ಯಗಳು ಇರದ ಕಾರಣ ಪೋಷಕರು ದಿನದಿಂದ ದಿನಕ್ಕೆ ಖಾಸಗಿ ಶಾಲೆಗಳ ಕಡೆ ಮುಖ ಮಾಡಿದ್ದಾರೆ. ಇದು ಚನ್ನಗಿರಿ ಆಡಳಿತದ ನಿರ್ಲಕ್ಷ್ಯ ಧೋರಣೆಯಾಗಿದೆ ಎಂದು ತಿಳಿಸಿದ್ದಾರೆ.
ಚನ್ನಗಿರಿ ತಾಲ್ಲೂಕಿನ ಹಲವಾರು ಸರ್ಕಾರಿ ಶಾಲೆಗಳು ದಿನದಿಂದ ದಿನಕ್ಕೆ ಅಳಿವಿನಂಚಿಗೆ ತೆರಳುತ್ತಿವೆ. ಸರ್ಕಾರಿ ಶಾಲೆಗಳಿಗೆ ಬರುವ ಅನುದಾನಗಳನ್ನು ಖಾಸಗಿ ಶಾಲೆಗಳ ಲಾಬಿಯಿಂದಾಗಿ ತಡೆಹಿಡಿಯಲಾಗುತ್ತಿದೆಯೋ ತಿಳಿಯುತ್ತಿಲ್ಲ ಎಂದು ತಿಳಿಸಿರುವ ಅವರು ಜೀರ್ಣೊದ್ದಾರವಾಗಬೇಕಾಗಿರುವುದು ದೇವಾಲಯಗಳಲ್ಲ ಶಾಲೆಗಳು! ಶಾಲೆಯೇ ಎಲ್ಲಾ ಧರ್ಮಗಳಿಗೆ ಮೊದಲ ದೇವಾಲಯ. ಅಭಿವೃದ್ಧಿ ಹರಿಕಾರರು ಎಂದು ಹೇಳಿಕೊಳ್ಳುವವರು ಮೊದಲು ಶಾಲೆಗಳ ಕಡೆ ಗಮನ ಕೊಡಿ ಎಂದಿದ್ದಾರೆ.
ಈ ಕುರಿತು ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಸಂಬಂಧಪಟ್ಟ ಇಂಜಿನಿಯರ್ ಸೇರಿದಂತೆ ಮತ್ತಿತರರು ಶಾಲೆಗೆ ಆಗಮಿಸಿ ಶಾಲೆ ಅವ್ಯವಸ್ಥೆ ನೋಡಿಕೊಂಡು ಹೋಗಿದ್ದಾರೆ. ಅಷ್ಟೇ ಅಲ್ಲದೆ ಬಿಇಓ ಕೂಡ ಹೊಸದಾಗಿ ಎರಡು ಕೊಠಡಿ ನಿರ್ಮಾಣಕ್ಕೆ ಕ್ರಮಕೈಗೊಲ್ಲುವುದಾಗಿ ಭರವಸೆ ನೀಡಿದ್ದಾರೆ ಎಂದು ಇಟ್ಟಿಗೆ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಕರಿಸಿದ್ದಪ್ಪ ಅವರು ಗರುಡವಾಯ್ಸ್ ನೊಂದಿಗೆ ಮಾಹಿತಿ ಹಂಚಿಕೊಂಡರು.
garudavoice21@gmail.com 9740365719