ಬಿ ಎಸ್ ವೈ ಬೆಂಬಲಕ್ಕೆ ನಿಂತ ಶಾಮನೂರಿಗೆ ಟಾಂಗ್ ಕೊಟ್ಟ ಎಸ್ ಎ ರವೀಂದ್ರನಾಥ: ಎಂ ಬಿ ಪಾಟೀಲ್ ಗೆ ಏನು ಹೇಳಿದ್ರು.?

ದಾವಣಗೆರೆ: ಕಾಂಗ್ರೆಸ್‌ನಲ್ಲಿದ್ದುಕೊಂಡು ವೀರಶೈವರ ಮುಖ್ಯಮಂತ್ರಿಯ ಪರ ಮಾತನಾಡಿದರೆ ಹೇಗೆ? ಹಾಗೊಂದು ವೇಳೆ ಯಡಿಯೂರಪ್ಪ ಅವರನ್ನು ಬೆಂಬಲಿಸುವುದಾದರೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ನಂತರ ಮಾತನಾಡಲಿ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಎಂ. ಬಿ. ಪಾಟೀಲ್ ಗೆ ಸಲಹೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪ ಅಧಿಕಾರಕ್ಕೆ ಬರೋ ಮುಂಚೆ ಬೇರೆ ಪಕ್ಷದಲ್ಲಿದ್ದರಾ ಅಥವಾ ಬೇರೆ ಸಮಾಜದವರಾಗಿದ್ದರಾ? ಬೇರೆ ಪಕ್ಷದಲ್ಲಿದ್ದು ಯಡಿಯೂರಪ್ಪ ಅವರನ್ನು ಬೆಂಬಲಿಸುತ್ತೇವೆ ಅನ್ನುವುದು ನ್ಯಾಯಯುತವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಠಾಧೀಶರು ರಾಜಕೀಯ ಮಾಡುವುದು ಸರಿಯಲ್ಲ. ನಾನು ಕೂಡ ವೀರಶೈವ ಲಿಂಗಾಯತನೇ, ಜಗದೀಶ್ ಶೆಟ್ಟರ್, ನಿರಾಣಿ, ಉಮೇಶ್ ಕತ್ತಿ ಎಲ್ಲರೂ ಲಿಂಗಾಯತರೇ. ಆದರೆ, ಮಠಾಧೀಶರಾದವರು ಕೇವಲ ಒಬ್ಬರ ಬೆಂಬಲಕ್ಕೆ ನಿಲ್ಲುವುದು ಸರಿಯಾದ ಕ್ರಮವಲ್ಲ ಎಂದು ಬಿಎಸ್ ವೈ ಬೆನ್ನಿಗೆ ನಿಂತಿರುವ ವಿವಿಧ ಮಠಾಧೀಶರ ವಿರುದ್ಧ ಅಸಹನೆ ವ್ಯಕ್ತಪಡಿಸಿದರು.
ನಾವು ಕೂಡ ಮಠಾಧೀಶರ ಭಕ್ತರೆ. ನಮ್ಮ ಪರವಾಗಿ ಮಾತನಾಡದವರು ಈಗ ಯಡಿಯೂರಪ್ಪ ಅವರೊಬ್ಬರ ಬೆಂಬಲಕ್ಕೆ ನಿಂತಿದ್ದಾರೆ ಆಕ್ರೋಶ ವ್ಯಕ್ತಪಡಿಸಿದರು.