ಬಿ ಎಸ್ ವೈ ಕುಟುಂಬವೇ ಬ್ರಷ್ಟಾಚಾರದಲ್ಲಿದೆ: ಯಡಿಯೂರಪ್ಪ ಡಿ-ಜಿರೋ ಸಿಎಂ, ವಿಜಯೇಂದ್ರ ಡಿ-ಫ್ಯಾಕ್ಟರ್ ಸಿಎಂ – ಬಿ ಎಸ್ ವೈ ವಿರುದ್ದ ಸಿದ್ದು ಲೇವಡಿ

ದಾವಣಗೆರೆ: ಯಡಿಯೂರಪ್ಪ ಡಿ-ಜಿರೋ ಸಿಎಂ ಆದರೆ ವಿಜಯೇಂದ್ರ ಡಿ-ಫ್ಯಾಕ್ಟರ್ ಸಿಎಂ ಎಂದು ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕುಟುಕಿದ್ದಾರೆ.
ಹರಿಹರ ಶಾಸಕ ಎಸ್. ರಾಮಪ್ಪ ಅವರ ಪುತ್ರಿಯ ವಿವಾಹ ಸಮಾರಂಭಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ ಅವರು ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪನ ಮಗ, ಅಳಿಯ ಎಲ್ಲರೂ ಭ್ರಷ್ಟಾಚಾರಲ್ಲಿ ತೊಡಗಿದ್ದು, ಚೆಕ್ ಅಥವಾ ಆರ್‌ಟಿಜಿಎಸ್ ಮೂಲಕ ಭ್ರಷ್ಟಾಚಾರದ ಹಣ ಅವರಿಗೆ ತಲುಪುತ್ತದೆ. ಒಟ್ಟಾರೆ ಯಡಿಯೂರಪ್ಪ ಅವರ ಇಡೀ ಕುಟುಂಬವೇ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿದರು.
ಪ್ರಸ್ತುತ ಬಿಜೆಪಿ ಸರ್ಕಾರದಲ್ಲಿ ಪರ್ಸಂಟೇಜ್ ನೀಡದೇ ಯಾವುದೇ ಕೆಲಸಗಳು ನಡೆಯಲ್ಲ. ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಇದೊಂದು 20-25% ನ ಸರ್ಕಾರ. ಅಲ್ಲಿ ಲಂಚವಿಲ್ಲದೇ ಏನೂ ನಡೆಯಲ್ಲ. ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದಂತೂ ಸತ್ಯ ಎಂದು ವಾಗ್ದಾಳಿ ನಡೆಸಿದರು.
ಕರೋನಾದಿಂದ ಸಾವನ್ನಪ್ಪಿದವರಿಗೆ ವಿಪತ್ತು ನಿರ್ವಹಣೆ ಯೋಜನೆಯಡಿ 5 ಲಕ್ಷ ಪರಿಹಾರ ಕೊಡಲು ಅವಕಾಶವಿದ್ದು, ನಮ್ಮ ಪಕ್ಷದಿಂದ ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದೆವು. ಈಗ ಸರ್ವೋಚ್ಛ ನ್ಯಾಯಾಲಯವು ಸಹ ಅದನ್ನೇ ಹೇಳಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಸಚಿವರ ಪಿಎ ಭ್ರಷ್ಟಾಚಾರ ಮಾಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಆ ಬಗ್ಗೆ ಈಗಾಗಲೇ ಬಿ.ವೈ. ವಿಜಯೇಂದ್ರ ದೂರು ನೀಡಿದ್ದಾರೆ. ದಾಖಲೆ ಸಂಗ್ರಹಿಸಿ ಬಂಧನ ಮಾಡಿದ್ದಾರೆ. ಆ ಕುರಿತು ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲವಿಲ್ಲ. ನಾವೆಲ್ಲಾ ಒಗ್ಗಟ್ಟಾಗಿದ್ದೆ. ನಮ್ಮ ಕಾಂಗ್ರೆಸ್‌ನಲ್ಲಿ ಶಿಸ್ತಿದೆ. ಚುನಾವಣೆ ಆದ ನಂತರ, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಸಿಎಲ್‌ಪಿ ನಾಯಕನ ಆಯ್ಕೆ ಆಗಿತ್ತದೆ. ಅದರ ಆಧಾರದಲ್ಲಿ ಸಿಎಂ ಆಯ್ಕೆ ಆಗುತ್ತಾರೆ ಎಂದು ಸ್ಪಷ್ಟಪಡಿಸಿದರು.