ಇಹಲೋಕ ತ್ಯಜಿಸುವ ಮುನ್ನವೇ ಜೀವಂತ ಸಮಾಧಿ ನಿರ್ಮಾಣ : ಬದುಕಿದ್ದಾಗಲೇ ತನ್ನ ಸಮಾಧಿ ತಾನೇ ನಿರ್ಮಿಸಿಕೊಂಡ ವ್ಯಕ್ತಿ?
ದಾವಣಗೆರೆ : ಒಬ್ಬ ವ್ಯಕ್ತಿ ತಾನು ಬದುಕಿದ್ದಾಗಲೇ ತನ್ನ ಸಮಾಧಿ ತಾನೇ ನಿರ್ಮಿಸಿಕೊಂಡಿದ್ದಾನೆ ಎಂದರೆ ನಂಬಲು ಸ್ವಲ್ಪ ಕಷ್ಟವೆನಿಸಬಹುದು. ಆದರೂ ನಂಬಲೇಬೇಕಾಗುತ್ತದೆ. ಇಹಲೋಕ ತ್ಯಜಿಸುವ ಮುನ್ನ ತನ್ನ ಜೀವಂತ ಸಮಾಧಿ ತಾನೇ ನಿರ್ಮಿಸಿಕೊಂಡ ಅಪರೂಪದ ವ್ಯಕ್ತಿ ಬಹುಶ ಬೇರೆಲ್ಲೂ ಸಿಗಲಾರರು. ಇಂತಹ ವ್ಯಕ್ತಿ ಇರುವ ವಿಚಾರ ತಿಳಿದರೆ ಕೊಂಚ ಹೊತ್ತು ನಮ್ಮ ಮೇಲೆ ನಮಗೆ ಅನುಮಾನ ಕಾಡಬಹುದು. ಆದರೆ ಇಂತಹ ವ್ಯಕ್ತಿಯೊಬ್ಬರು ಇದ್ದಾರೆ.
ಹರಿಹರ ತಾಲೂಕಿನ ಜರೇಕಟ್ಟೆ ಗ್ರಾಮದ ನಿವಾಸಿ ತಿಪ್ಪಣ್ಣರಾವ್ ಎಂಬುವವರು ಜೀವನದಲ್ಲಿ ಬೇಸರಗೊಂಡು ಸಾವಿನ ಮೊದಲೇ ಸಮಾಧಿ ನಿರ್ಮಾಣ ಮಾಡಿಕೊಂಡಿದ್ದಾರೆ. ೭೦ ವರ್ಷದ ತಿಪ್ಪಣ್ಣ ಕಳೆದ ಹದಿನೈದು ವರ್ಷಗಳ ಹಿಂದೆಯೇ ಈ ಸಮಾಧಿಯನ್ನು ನಿರ್ಮಾಣ ಮಾಡಿದ್ದು, ಅದಕ್ಕೆ ಮರಳಿ ಮಣ್ಣಿಗೆ ಎಂದು ಹೆಸರಿಟ್ಟಿದ್ದಾರೆ. ಇನ್ನೊಬ್ಬರ ಹಂಗಿಗಾಗಿ ಕೈಚಾಚುವ ಬದಲು ಸಾಯುವುದೇ ಮೇಲು ಎಂಬ ಮಾತನ್ನು ಪಾಲಿಸುತ್ತಿರುವ ತಿಪ್ಪಣ್ಣರಾವ್, ಯಾರೊಬ್ಬರ ಬಳಿಯೂ ಹಣ ಪಡೆಯದೆ ತಾವೇ ದುಡಿದು ಸಮಾಧಿ ನಿರ್ಮಾಣ ಮಾಡಿಕೊಂಡಿದ್ದಾರೆ. ತಾನು ಅಸು ನೀಗಿದ್ರೆ ಇದೇ ಸಮಾಧಿಯಲ್ಲಿ ಹೂಳುವಂತೆ ತಮ್ಮ ಮಕ್ಕಳಿಗೆ ಹೇಳಿದ್ದಾರೆ.
ಇದೇ ಸಮಾಧಿ ಮುಂದೆ ಪುಟ್ಟ ದೇವಾಲಯವನ್ನೂ ನಿರ್ಮಾಣ ಮಾಡಿ ಬರುವವರಿಗೆ ವಿಶ್ರಾಂತಿ ಪಡೆಯಲು ತಂಗುದಾಣ ಮಾಡಿದ್ದಾರೆ. ಜರೇಕಟ್ಟೆ ಗ್ರಾಮದವರಾಗಿರುವ ಇವರು ಇತ್ತೀಚಿಗೆ ದಾವಣಗೆರೆಯಲ್ಲಿ ಮನೆ ಮಾಡಿಕೊಂಡು ಅಲ್ಲೇ ಜೀವನ ಸಾಗಿಸುತ್ತಿದ್ದು, ಸಮಯ ಸಿಕ್ಕಾಗ ಮರಳಿಮಣ್ಣಿಗೆ ಎಂಬ ಜೀವಂತ ಸಮಾಧಿ ಇರುವ ಸ್ಥಳಕ್ಕಾಗಮಿಸಿ ವಿಶ್ರಾಂತಿ ಪಡೆಯುತ್ತಾರೆ. ಪ್ರತಿದಿನ ಇಲ್ಲಿಗೆ ಭೇಟಿ ನೀಡುವ ಇವರು ಅಸಹಾಯಕ ಜನರು ಹಾಗೂ ಪ್ರಾಣಿಗಳಿಗೆ ಹಣ್ಣು -ಹಂಪಲು ನೀಡಿ ಕಾಲ ಕಳೆಯುತ್ತಾರೆ.