ಕೋವಿಡ್ ಅವ್ಯವಹಾರ ತನಿಖೆಗೆ ಎಸ್.ಐ.ಟಿ, ಡಿ ಕೆ ಶಿ ನೇತೃತ್ವದಲ್ಲಿ ಸಂಪುಟ ಉಪಸಮಿತಿ ನೇಮಕ

ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ವೈದ್ಯಕೀಯ ಉಪಕರಣಗಳಿಗೆ ಸಂಬಂಧ ನೇಮಿಸಲಾದ ಜಸ್ಟೀಸ್ ಮೈಕಲ್ ಡಿ ಕುನ್ಹಾ ರವರ ವಿಚಾರಣಾ ಆಯೋಗದ ಮಧ್ಯಂತರ ಅವಧಿಯ ಸತ್ಯಸಂಶೋಧನಾ ವರದಿಯ ಕುರಿತು ತನಿಖೆ ಮತ್ತು ಕ್ರಮಗಳನ್ನು ಮುಂದುವರೆಸಲು ವಿಶೇಷ ತನಿಖಾ ತಂಡ ನೇಮಿಸಲು (ಎಸ್ಐಟಿ) ರಾಜ್ಯ ಸಚಿವ ಸಂಪುಟ ಇಂದು ನಿರ್ಧರಿಸಿದೆ.

ಸಚಿವ ಸಂಪುಟದ ನಿರ್ಣಯಗಳನ್ನು ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ ಪಾಟೀಲ ರವರು ಸತ್ಯಸಂಶೋಧನಾ ವರದಿಯ ನಂತರ ಯಾರ ಪಾತ್ರ ಏನು ಎಂಬುದನ್ನು ತನಿಖೆ ಮಾಡಿ ಎಸ್.ಐ.ಟಿ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

• ಕುನ್ಹಾ ಆಯೋಗವು 11 ಸಂಪುಟಗಳಲ್ಲಿ ವರದಿ ಸಲ್ಲಿಸಿದ್ದು, ರೂ.7223.64 ಕೋಟಿಗಳ ಮೊತ್ತದ ವೈದ್ಯಕೀಯ ಉಪಕರಣಗಳ ಖರೀದಿಯ ಅವ್ಯವಹಾರದ ಕುರಿತು ತನಿಖೆ ನಡೆಸಿದೆ.
• ರೂ.500.00 ಕೋಟಿಗಳ ಮೊತ್ತದ ವಸೂಲಾತಿ ಶಿಫಾರಸ್ಸು ಮಾಡಿದೆ. ಬಿ.ಬಿ.ಎಂ.ಪಿ 4 ವಲಯಗಳ ಮತ್ತು ರಾಜ್ಯದ ಎಲ್ಲಾ 31 ಜಿಲ್ಲೆಗಳ ವರದಿ ಸಲ್ಲಿಕೆ ಬಾಕಿಯಿದೆ. 55000 ಕಡತಗಳನ್ನು ಸಂಬಂಧಪಟ್ಟ ಇಲಾಖೆಗಳಿಂದ ಪಡೆದು ಪರಿಶೀಲಿಸಿ ಆಯೋಗವು ವರದಿ ಸಲ್ಲಿಸಿದೆ.

ಈ ತನಿಖೆ ಮತ್ತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಿರಂತರವಾಗಿ ಮೇಲ್ವಿಚಾರಣೆ ನಡೆಸಲು ಸಚಿವ ಸಂಪುಟದ ಉಪಸಮಿತಿಯನ್ನು ರಚಿಸಲು ತೀರ್ಮಾನಿಸಲಾಗಿದೆ. ಸಚಿವ ಸಂಪುಟದ ಉಪಸಮಿತಿಯ ಸದಸ್ಯರನ್ನು ಅಂತಿಮಗೊಳಿಸಲು ಮುಖ್ಯಮಂತ್ರಿಯವರಿಗೆ ಅಧಿಕಾರ ನೀಡಲಾಗಿದೆ ಎಂದು ಮಾನ್ಯ ಸಚಿವರು ವಿವರಿಸಿದರು.

ರೂ.500.00 ಕೋಟಿಗಳ ಮೊತ್ತದ ವಸೂಲಾತಿ ಕುರಿತು ಪ್ರಕ್ರಿಯೆಯನ್ನು ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ವಿವರಿಸಿದರು. ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಸಾರ್ವಜನಿಕರ ಹಣದ ದುರುಪಯೋಗ ಮತ್ತು ಅಧಿಕಾರ ದುರುಪಯೋಗ ಬಗ್ಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ನೀಡಿದ ವರದಿಯನ್ನು ದಿನಾಂಕ: 17.07.2023 ರಂದು 15ನೇ ವಿಧಾನಸಭೆಯಲ್ಲಿ ಮಂಡಿಸಲಾಗಿರುತ್ತದೆ. ಈ ವರದಿಯ ಆಧಾರದ ಮೇಲೆ ಸತ್ಯಸಂಶೋಧನೆ ಮಾಡಿ ವರದಿ ನೀಡಲು ಕುನ್ಹಾ ಆಯೋಗವನ್ನು ನೇಮಿಸಲಾಗಿತ್ತು. ಈ ಆಯೋಗವು 12 ವಿಶ್ಲೇಷಣಾ ವರದಿಗಳನ್ನು ನೀಡಿದೆ ಎಂದು ಸಚಿವರು ವಿವರಿಸಿದರು.

Leave a Reply

Your email address will not be published. Required fields are marked *

error: Content is protected !!