ಗ್ರಾಹಕರ ವಂಚನೆ ತಡೆಗೆ ಜಾಗೃತಿ ಮೂಡಿಸಲು ಕರೆ – ಮಹಾಂತೇಶ್ ಈರಪ್ಪ ಶಿಗ್ಲಿ
ದಾವಣಗೆರೆ: ಗ್ರಾಹಕರನ್ನು ಜಾಗೃತಗೊಳಿಸಲು ನಗರ ಮತ್ತು ಗ್ರಾಮೀಣ ಪ್ರದೇಶದ ಪ್ರತಿ ಮನೆ ಮನೆಗೂ ಗ್ರಾಹಕ ಸಂರಕ್ಷಣಾ ಕಾಯ್ದೆ ಕುರಿತು ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಮಹಾಂತೇಶ್ ಈರಪ್ಪ ಶಿಗ್ಲಿ ಅವರು ಹೇಳಿದರು.
ಜಿಲ್ಲಾಡಳಿತ ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಹಯೋಗದಲ್ಲಿ ಸೋಮವಾರ ನಗರದ ಜನತಾಬಜಾರ್ ಸಭಾಂಗಣದಲ್ಲಿ ಜರುಗಿದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯ ಹುಟ್ಟಿನಿಂದ ಸಾವಿನವರೆಗೆ ಪ್ರತಿದಿನ ಒಂದಿಲ್ಲೊಂದು ವಸ್ತು ಕೊಳ್ಳುವ ಅಥವಾ ಸೇವೆಗಳನ್ನು ಪಡೆಯುವ ಗ್ರಾಹಕನಾಗಿದ್ದಾನೆ. ಗ್ರಾಹಕರು ದೈನಂದಿನ ವ್ಯಾಪಾರ ವಹಿವಾಟಿನಲ್ಲಿ ಅಳತೆ, ತೂಕದಲ್ಲಿ, ಪದಾರ್ಥಗಳ ಗುಣಮಟ್ಟ, ಕಲಬೆರಿಕೆ ಸೇರಿದಂತೆ ಹಲವು ವಿಷಯಗಳಲ್ಲಿ ಮೋಸಕ್ಕೆ ಒಳಗಾಗುತ್ತಾರೆ. ಮೋಸಕ್ಕೊಳಗಾದ ಗ್ರಾಹಕರು ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರು ದಾಖಲಿಸುವ ಮೂಲಕ ನ್ಯಾಯ ಪಡೆದುಕೊಳ್ಳಬಹುದು ಎಂದರು.
ಗ್ರಾಹಕರ ಆಯೋಗಕ್ಕೆ ದೂರು ದಾಖಲಿಸಲು ತಾವು ವಸ್ತು ಹಾಗೂ ಸೇವೆಗೆ ಕಡ್ಡಾಯವಾಗಿ ರಸೀದಿ ಪಡೆಯಬೇಕು. ಅಂದಾಗ ಮಾತ್ರ ಗ್ರಾಹಕರ ಆಯೋಗದಲ್ಲಿ ದೂರು ದಾಖಲಿಸಲು ಸಾಧ್ಯ ಎಂದು ಹೇಳಿದರು.
ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಿಕಿ ನಜ್ಮಾ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಹಕರು ಎಚ್ಚೆತ್ತುಕೊಳ್ಳಬೇಕು. ತಾವು ಖರೀದಿಸಿದ ವಸ್ತು ಅಥವಾ ಸೇವೆಗೆ ಬಿಲ್ ಪಡೆಯಬೇಕು. ತಮಗೆ ಮೋಸವಾದಲ್ಲಿ ಜನಸಾಮಾನ್ಯರು ವಕೀಲರ ಸಹಾಯವಿಲ್ಲದೇ ತಾವೇ ಖುದ್ದು ಒಂದು ಹಾಳೆಯಲ್ಲಿ ತಮ್ಮ ಅಹವಾಲನ್ನು ಕೈ ಬರಹದಲ್ಲಿ ವಿವರವಾಗಿ ಬರೆದು ಗ್ರಾಹಕರ ವೇದಿಕೆಗೆ ಅರ್ಜಿ ಸಲ್ಲಿಸಿ ಪರಿಹಾರ ಪಡೆದುಕೊಳ್ಳಬಹುದು ಎಂದರು.
ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಹೆಚ್.ಎಸ್.ರಾಜು ಮಾತನಾಡಿ,. ತೂಕ ಮತ್ತು ಅಳತೆಗೆ ಸಂಬಂಧಿಸಿದಂತೆ ಕಾನೂನು ಮಾಪನಶಾಸ್ತ್ರ ಇಲಾಖೆಗೆ ದೂರು ಸಲ್ಲಿಸಬಹುದು. ಶಾಲಾ ವಿದ್ಯಾರ್ಥಿಗಳಿಗೆ ಈ ಬಗ್ಗೆ ಜಾಗೃತಿ ಮೂಡಿಸಿದರೆ ಅನುಕೂಲವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಅಧ್ಯಕ್ಷರಾದ ಹೆಚ್ ಅನಿತಾ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಸಂಚಾಲಕರಾದ ಬಿ.ಟಿ.ಪ್ರಕಾಶ್, ಇತರೆ ಪದಾಧಿಕಾರಿಗಳು ಇದ್ದರು.