ಬಸ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು, ಪ್ರಾಣ ಉಳಿಸಿದ ಡ್ರೈವರ್
ಬೆಂಗಳೂರು: ಕಾರೊಂದು ಬಿಎಂಟಿಸಿ ಬಸ್‌ಗೆ ಡಿಕ್ಕಿ ಹೊಡೆದು ಸುಟ್ಟು ಕರಕಲಾದ ಘಟನೆ ಬೆಂಗಳೂರಿನ ಚಂದ್ರಾ ಲೇಔಟ್ ಸಮೀಪದ ನಾಗರಬಾವಿ ರಿಂಗ್ ರಸ್ತೆಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಘಟನೆಯಲ್ಲಿ ಕಾರು ಬಸ್ಸಿಗೆ ಅಂಟಿಕೊಂಡು ಬಸ್‌ಗೂ ಬೆಂಕಿ ಹತ್ತಿಕೊಂಡಿತ್ತು. ಆದರೆ, ಬಸ್‌ನ ಚಾಲಕ ಪ್ರಯಾಣಿಕರನ್ನು ಇಳಿಸಿ ರಕ್ಷಿಸಿದ್ದಲ್ಲದೆ, ಅತ್ಯಂತ ಚಾಲಾಕಿತನ ಮತ್ತು ಸಮಯಪ್ರಜ್ಞೆ ಮೆರೆದು ಬಸ್ ನಿಂದ ಕಾರನ್ನು ಬೇರ್ಪಡಿಸಿದ್ದಾರೆ. ಬಸ್ ಕೂಡಾ ಸಂಪೂರ್ಣ ಸುಟ್ಟು ಹೋಗುವುದನ್ನು ತಪ್ಪಿಸಿದ್ದಾರೆ.
ಸೋಮವಾರ ಬೆಳಗ್ಗೆ 9 ಗಂಟೆಗೆ ಹೊತ್ತಿಗೆ ನಗರದ ಚಂದ್ರಾ ಲೇಔಟ್ ನಿಲ್ದಾಣದ ಬಳಿ ಘಟನೆ ನಡೆದಿದೆ. ಯಶವಂತಪುರದಿಂದ ನಾಯಂಡಹಳ್ಳಿ ಕಡೆ ತೆರಳುತ್ತಿದ್ದ ಬಸ್ ಚಂದ್ರಾ ಲೇಔಟ್ ಬಳಿ ನಿಂತಿತ್ತು. ಆಗ ಹಿಂಬದಿಯಿಂದ ವೇಗವಾಗಿ ಬಂದ ಕಾರೊಂದು ಬಸ್‌ಗೆ ಡಿಕ್ಕಿ ಹೊಡೆಯಿತು. ಅತ್ಯಂತ ರಭಸದಿಂದ ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಕ್ಷಣಾರ್ಧದಲ್ಲಿಯೇ ಬೆಂಕಿ ಹತ್ತಿಕೊಂಡಿದೆ. ಆಗ ಕಾರಿನ ಪ್ರಯಾಣಿಕರು ಕೂಡಲೇ ಇಳಿದು ಜೀವ ರಕ್ಷಿಸಿಕೊಂಡರು.
ಅದರ ಜತೆಗೆ ಬಸ್ ಚಾಲಕ ಕೂಡಾ ಎಲ್ಲ ಪ್ರಯಾಣಿಕರನ್ನು ಇಳಿಸಿದರು. ಇಷ್ಟರ ನಡುವೆ ಕಾರು ಬಸ್ಸಿಗೆ ಅಂಟಿಕೊಂಡು ಹೊತ್ತಿ ಉರಿಯತೊಡಗಿತ್ತು. ಬಸ್ಸನ್ನು ಸ್ವಲ್ಪ ಮಂದೆ ಕೊಂಡು ಹೋಗಲು ಪ್ರಯತ್ನಿಸಿದಾಗ ಅದು ಅಂಟಿಕೊಂಡಿದ್ದು ಗೊತ್ತಾಯಿತು. ಅದನ್ನು ಹೇಗಾದರೂ ಬೇರ್ಪಡಿಸಬೇಕು ಎಂದು ಯೋಚಿಸಿದ ಬಿಎಂಟಿಸಿ ಚಾಲಕ ಭಾರಿ ಡೇಂಜರಸ್ ಪ್ರಯೋಗಕ್ಕೆ ಮುಂದಾದರು.
ಕಾರು ಹೊತ್ತಿ ಉರಿಯುತ್ತಿದ್ದಂತೆಯೇ ಬಸ್ಸನ್ನು ಮುಂದಕ್ಕೆ ಚಲಾಯಿಸಿದರು ಚಾಲಕ. ಬಸ್ಸು ಮುಂದಕ್ಕೆ ಚಲಿಸಿದಾಗ ಕಾರು ಕಳಚಿಕೊಳ್ಳಬಹುದು ಎನ್ನುವುದು ಅವರ ಯೋಚನೆಯಾಗಿತ್ತು. ಆದರೆ, ಅದು ಕಳಚಿಕೊಳ್ಳಲಿಲ್ಲ. ಬದಲಾಗಿ ಗಾಳಿಯ ವೇಗಕ್ಕೆ ಬೆಂಕಿ ಇನ್ನಷ್ಟು ಧಗಧಗಿಸಿತು.
ಈ ವೇಳೆ ಚಾಲಕ ಬಸ್ಸನ್ನು ಸ್ವಲ್ಪ ದೂರ ಹೋಗಿ ನಿಲ್ಲಿಸಿ ಇನ್ನೊಂದು ಪ್ಲ್ಯಾನ್ ಮಾಡಿದರು. ಇದೊಂದು ಡಬಲ್ ರೋಡ್ ಆಗಿದ್ದು, ಒಂದು ಭಾಗದಲ್ಲಿ ತಡೆಗೋಡೆ ಇದೆ. ಚಾಲಕ ಬಸ್ಸನ್ನು ಆ ತಡೆಗೋಡೆಗೆ ಡಿಕ್ಕಿ ಹೊಡೆಸಿ ಕಾರನ್ನು ಕದಲಿಸುವ ಪ್ರಯತ್ನವನ್ನು ಮಾಡಿದರು. ಆದರೆ, ಕಾರು ಬಿಡಿಸಿಕೊಳ್ಳಲೇ ಇಲ್ಲ.
ಈ ನಡುವೆ, ಕಾರು ಸುಟ್ಟು ಹೋಗುವ ವೇಗ ಜಾಸ್ತಿಯಾಯಿತು. ಪೆಟ್ರೋಲ್ ಟ್ಯಾಂಕ್ ಕೂಡಾ ಸಿಡಿಯಿತು. ಬಸ್ಸಿಗೂ ಬೆಂಕಿ ಹತ್ತಿಕೊಳ್ಳುವ ವೇಗ ಜಾಸ್ತಿಯಾಯಿತು. ಇಷ್ಟಾದರೂ ಚಾಲಕ ತನ್ನ ಪ್ರಯತ್ನವನ್ನು ಬಿಡಲಿಲ್ಲ, ವ್ಯವಧಾನವನ್ನು ಕಳೆದುಕೊಳ್ಳಲಿಲ್ಲ. ಇದು ಡಬಲ್ ರೋಡ್ ಆಗಿದ್ದರಿಂದ ನಡುವೆ ಸಣ್ಣ ರಸ್ತೆ ವಿಭಾಜಕ ಇತ್ತು. ಇತ್ತು. ಚಾಲಕ ಬಸ್ಸನ್ನು ತಿರುಗಿಸಿ ಆ ತಡೆಗೋಡೆಯ ಮೇಲೆ ಕಾರನ್ನು ಹಾರಿಸಿದ. ಆಗ ಅಂಟಿಕೊಂಡಿದ್ದ ಕಾರು ಕಳಚಿಕೊಂಡಿತು. ಈ ನಡುವೆ, ಕಾರು ಸಂಪೂರ್ಣ ಸುಟ್ಟು ಹೋದರೆ, ಬಸ್ ಗೆ ಅಲ್ಲಿದ್ದವರೆಲ್ಲ ಸ್ವಲ್ಪ ಸ್ವಲ್ಪ ನೀರು ತಂದೇ ಸಿಂಪಡಿಸಿ ಬೆಂಕಿ ಆರಿಸಿದರು.
ಬಸ್ಸಿನ ಹಿಂದಿನ ಎರಡು ಸೀಟುಗಳಿಗೆ ಸೀಮಿತವಾಗಿ ಬೆಂಕಿ ಹತ್ತಿಕೊಂಡಿದೆ. ಚಾಲಕನ ಸಮಯ ಪ್ರಜ್ಞೆಯಿಂದಾಗಿ ಇದು ಸಾಧ್ಯವಾಗಿದೆ. ಅಲ್ಲಿ ಸೇರಿದವರೆಲ್ಲ ಬೆಂಕಿ ಆರಿಸುವಲ್ಲಿ ಚಾಲಕನಿಗೆ ನೆರವಾಗಿದ್ದಲ್ಲದೆ, ಅವರನ್ನು ಹಾಡಿ ಹೊಗಳಿ ಬೆನ್ನು ತಟ್ಟಿದರು.