ಕ್ಯಾನ್ಸರ್ ರೋಗಿಗಳನ್ನು ಪ್ರೀತಿ ಮತ್ತು ಜಾಗ್ರತೆಯಿಂದ ಆರೈಕೆ ಮಾಡಿ:ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕ್ಯಾನ್ಸರ್ ಅಂದರೆ ಸಾವಲ್ಲ, ಅದು ಒಂದು ರೋಗ

ಬೆಂಗಳೂರು, ಫೆಬ್ರವರಿ 4, ಶುಕ್ರವಾರ ಕ್ಯಾನ್ಸರ್ ಪದದ ಅರ್ಥ ಸಾವು ಎಂದಲ್ಲ, ಇದೊಂದು ರೋಗದ ಹೆಸರು. ಕ್ಯಾನ್ಸರ್ ಬಂದಾಕ್ಷಣ ಸಾವು ಬಂದಿದೆ ಎಂಬ ಆತಂಕವನ್ನು ದೂರ ಮಾಡಲು ಜಾಗೃತಿ ಅಗತ್ಯ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಬೆಂಗಳೂರಿನಲ್ಲಿ ಕ್ಯಾನ್ಸರ್ ದಿನದ ಪ್ರಯುಕ್ತ, ಕ್ಯಾನ್ಸರ್ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಶ್ವದಾದ್ಯಂತ ಕ್ಯಾನ್ಸರ್ ದಿನ ಆಚರಣೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಲಹೆಯಂತೆ ಒಂದು ವಾರ ಕ್ಯಾನ್ಸರ್ ಸಪ್ತಾಹ ವಿನೂತನವಾಗಿ ನಡೆಯಲಿದೆ ಎಂದು ತಿಳಿಸಿದರು.
ವಿಶ್ವ ಸಂಸ್ಥೆಯ ಪ್ರಕಾರ ಶಿಕ್ಷಣದ ಕೊರತೆ, ಬಡತನ ಇರುವ ರಾಷ್ಟ್ರಗಳಲ್ಲಿ ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಬಡತನ ರೇಖೆಗಿಂತ ಕೆಳಗಿರುವವರಿಗೆ ಕ್ಯಾನ್ಸರ್ ಶಿಬಿರ ಹಮ್ಮಿಕೊಂಡಿದೆ. ಕಿದ್ವಾಯಿ ಸಂಸ್ಥೆ , ಅನೇಕ ಸಂಘ ಸಂಸ್ಥೆಗಳು ಮತ್ತು ಆಸ್ಪತ್ರೆಗಳು ಇದಕ್ಕೆ ಕೈ ಜೋಡಿಸಿವೆ. ಎಷ್ಟು ಬೇಗ ಕ್ಯಾನ್ಸರ್ ಪತ್ತೆಯಾಗುತ್ತದೋ ಅಷ್ಟು ಬೇಗ ಗುಣಪಡಿಸಬಹುದು. ಕ್ಯಾನ್ಸರ್ ರೋಗಿಗಳನ್ನು ಪ್ರೀತಿ ಮತ್ತು ಎಚ್ಚರಿಕೆಯಿಂದ ಆರೈಕೆ ಮಾಡಿ ಎಂದು ಹೇಳಿದರು.
ಕ್ಯಾನ್ಸರ್ ಪದ ಕೇಳಿದ ಕೂಡಲೇ ಜನ ಭಯಭೀತರಾಗುತ್ತಾರೆ. ಈ ಭಯದಿಂದ ದೇಹದಲ್ಲಿ ಬದಲಾವಣೆ ಆಗುತ್ತಿದ್ದರೂ ಜನರು ಆಸ್ಪತ್ರೆಗಳಿಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳುತ್ತಿಲ್ಲ. 21ನೇ ಶತಮಾನದಲ್ಲಿ ತಂತ್ರಜ್ಞಾನ, ಸಂಶೋಧನೆ ಮತ್ತು ಆವಿಷ್ಕಾರಗಳ ಫಲದಿಂದ ಔಷಧಿ ಬಂದಿದೆ. 1 ಮತ್ತು 2ನೇ ಹಂತದ ಕ್ಯಾನ್ಸರ್ ಇದ್ದರೆ ಅದರಿಂದ ಗುಣಮುಖರಾಗಬಹುದು ಎಂದು ಹೇಳಿದರು.
ವಿಶ್ವದಲ್ಲಿ ವರ್ಷದಲ್ಲಿ ಸುಮಾರು 1 ಕೋಟಿ ಜನರು ಕ್ಯಾನ್ಸರ್ ನಿಂದ ಸಾವನ್ನಪ್ಪುತ್ತಾರೆ. ಭಾರತದಲ್ಲಿ 12 ರಿಂದ 13 ಲಕ್ಷ ಜನರು, ರಾಜ್ಯದಲ್ಲಿ 20 ರಿಂದ 25 ಸಾವಿರ ಜನರಲ್ಲಿ ಪ್ರತೀ ವರ್ಷ ಕ್ಯಾನ್ಸರ್ ಹೊಸದಾಗಿ ಪತ್ತೆಯಾಗುತ್ತದೆ. 30 ವರ್ಷ ಮೇಲ್ಪಟ್ಟ ಮಹಿಳೆಯರು ಜಾಗೃತರಾಗಿರಬೇಕು. ಗರ್ಭಕೋಶ ಮತ್ತು ಸ್ತನ ಕ್ಯಾನ್ಸರ್ ನಿಂದ 30% ರಿಂದ 40% ಮಹಿಳೆಯರು ಸಾವನ್ನಪ್ಪುತ್ತಾರೆ. ಆದರೆ ಇದು ಸಾಮಾನ್ಯ ಕ್ಯಾನ್ಸರ್. 5 ವರ್ಷಕ್ಕೊಮ್ಮೆ ತಪಾಸಣೆ ಮಾಡಿಸಿಕೊಂಡರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಪುರುಷರು ಶ್ವಾಸಕೋಶ ಹಾಗೂ ಬಾಯಿಯ ಕ್ಯಾನ್ಸರ್ ಗೆ ಬಲಿಯಾಗುತ್ತಿದ್ದಾರೆ. ಪೌಷ್ಠಿಕ ಆಹಾರ, ದೈಹಿಕ ಚಟುವಟಿಕೆ ಜೊತೆ ದುಶ್ಚಟಗಳಿಂದ ದೂರ ಇರುವುದು ಕ್ಯಾನ್ಸರ್ ತಡೆಯಲು ಸಹಕಾರಿ ಎಂದು ಹೇಳಿದರು.
ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಕ್ಯಾನ್ಸರ್ ತಪಾಸಣೆಗೆ ವ್ಯವಸ್ಥೆ ಇದೆ. ಇದನ್ನು ತಾಲೂಕು ಆಸ್ಪತ್ರೆಗಳಿಗೂ ವಿಸ್ತರಣೆ ಮಾಡಲಾಗಿದೆ. ಸಮುದಾಯ ಆರೋಗ್ಯ ಕೇಂದ್ರಕ್ಕೂ ಇದನ್ನು ಶೀಘ್ರದಲ್ಲೇ ವಿಸ್ತರಣೆ ಮಾಡಲಾಗುವುದು. ಮೈಸೂರು ಮತ್ತು ತುಮಕೂರಿನಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಹುಬ್ಬಳ್ಳಿಯಲ್ಲೂ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಮಾಡಲು ಸರ್ಕಾರ ತಯಾರಿ ಮಾಡಿಕೊಳ್ಳುತ್ತಿದೆ ಎಂದು ಸಚಿವರು ತಿಳಿಸಿದರು.

 
                         
                       
                       
                       
                       
                      