ರೇವ್ ಪಾರ್ಟಿ ಮೇಲೆ ಸಿಸಿಬಿ ದಾಳಿ- ಅಪಾರ ಪ್ರಮಾಣದ ಮಾದಕ ವಸ್ತುಗಳು ಪತ್ತೆ

ಬೆಂಗಳೂರು: ನಗರದ ಎಲೆಕ್ಟ್ರಾನಿಕ್ ಸಿಟಿ ಹೊರಭಾಗದ ಸಿಂಗೇನಾ ಅಗ್ರಹಾರದ ಫಾರಂ ಹೌಸ್‍ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಸಿಸಿಬಿ (CCB) ಅಧಿಕಾರಿಗಳು ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಮಾದಕ ವಸ್ತುಗಳು ಪತ್ತೆಯಾಗಿವೆ. ಪಾರ್ಟಿಯಲ್ಲಿ ತೆಲುಗು ನಟ-ನಟಿಯರು, ಮಾಡೆಲ್‍ಗಳು ಹಾಗೂ ಟೆಕ್ಕಿಗಳು ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.
ಕಾನ್ ಕಾರ್ಡ್ ಮಾಲೀಕ ಗೋಪಾಲ ರೆಡ್ಡಿ ಎಂಬವರಿಗೆ ಸೇರಿದ ಜಿ.ಆರ್ ಫಾರಂ ಹೌಸ್‍ನಲ್ಲಿ ಹೈದರಾಬಾದ್ ಮೂಲದ ವಾಸು ಎಂಬಾತ ರೇವ್ ಪಾರ್ಟಿ ಆಯೋಜಿಸಿದ್ದ. ಪಾರ್ಟಿಯಲ್ಲಿ ಆಂಧ್ರಪ್ರದೇಶ ಹಾಗೂ ಬೆಂಗಳೂರು ಮೂಲದ 100ಕ್ಕೂ ಅಧಿಕ ಮಂದಿ ಯುವಕ ಯುವತಿಯರಿದ್ದರು. ಖಚಿತ ಮಾಹಿತಿ ಆಧರಿಸಿ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅವಧಿ ಮೀರಿ ಪಾರ್ಟಿ ನಡೆದಿದ್ದಲ್ಲದೇ ಪಾರ್ಟಿಯಲ್ಲಿ ಎಂಡಿಎಂಎ, ಕೋಕೆನ್ ಸೇರಿ ಹಲವು ಮಾದರಿಯ ಮಾದಕ ವಸ್ತುಗಳು ಪತ್ತೆಯಾಗಿವೆ.
ಖಚಿತ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ರೇವ್ ಪಾರ್ಟಿ ಮೇಲೆ ದಾಳಿ ನಡೆಸುತ್ತಿದ್ದಂತೆ ಎಚ್ಚೆತ್ತ ಪಾರ್ಟಿ ಪ್ರಿಯರು ಡೂರ್ ಲಾಕ್ ಮಾಡಿದ್ದಾರೆ. ಆದರೆ ಪೊಲೀಸರು ಬಲವಂತವಾಗಿ ಡೂರ್ ಲಾಕ್ ತೆಗೆಸಿ ಒಳಹೋಗಿದ್ದಾರೆ. ಪೊಲೀಸರು ಡೂರ್ ತೆಗೆದು ಒಳನುಗ್ಗುತ್ತಿದ್ದಂತೆ ತಮ್ಮಲ್ಲಿದ್ದ ಎಂಡಿಎಂಎ, ಕೊಕೇನ್ ಇನ್ನಿತರ ಮಾದಕ ವಸ್ತುಗಳ ಎಸೆಯಲು ಯತ್ನಿಸಿದ್ದಾರೆ. ಅಷ್ಟೆ ಅಲ್ಲದೇ ತಮ್ಮಲ್ಲಿದ್ದ ಟ್ಯಾಬ್ಲೆಟ್‌ಗಳನ್ನ ಬಾತ್ ರೂಂ ಕಮೋಡ್‌ನಲ್ಲಿ ಹಾಕಿ ಫ್ಲಶ್ ಮಾಡಿದ್ದಾರೆ. ಸದ್ಯ ಫಾರ್ಮ್‌ಹೌಸ್‌ನ ಇಂಚಿಂಚು ಸಿಸಿಬಿ ಪೊಲೀಸರು ಜಾಲಾಡಿದ್ದಾರೆ.