ಕೇಂದ್ರಸರ್ಕಾರ ವಿದ್ಯುತ್ ಖಾಸಗೀಕರಣ ನಿರ್ಧಾರವನ್ನ ಹಿಂಪಡೆಯಬೇಕು – ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಒಕ್ಕೂಟದಿಂದ ಒತ್ತಾಯ

ದಾವಣಗೆರೆ: ವಿದ್ಯುತ್ ಖಾಸಗೀಕರಣದ ತಿದ್ದುಪಡಿ ಮಸೂದೆ ೨೦೨೧ ರ ಹೆಸರಲ್ಲಿ ವಿದ್ಯುತ್ ಖಾಸಗೀಕರಣ ಮಾಡುತ್ತಿರುವ ಕೇಂದ್ರ ಸರ್ಕಾರದ ನಡೆಯನ್ನು ರಾಜ್ಯ ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಯುವ ಒಕ್ಕೂಟದ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಹುಲ್ಮನಿ ಮತ್ತು ಒಕ್ಕೂಟದ ಯುವಘಟಕದ ಅಧ್ಯಕ್ಷ ಜೀವನ್ ಖಂಡಿಸಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲೇ `ವಿದ್ಯುತ್ ಮಸೂದೆ-೨೦೨೧’ ಮಂಡಿಸಲು ಕೇಂದ್ರಸರ್ಕಾರ ಸಿದ್ಧತೆ ನಡೆಸಿದೆ. ಆಗಸ್ಟ್ ೧೩ರವರೆಗೂ ನಡೆಯಲಿರುವ ಸಂಸತ್ ಅಧಿವೇಶನದಲ್ಲಿ ವಿದ್ಯುತ್ ಮಸೂದೆ-೨೦೨೧ (ತಿದ್ದುಪಡಿ) ಮಂಡನೆಯಾಗಲಿದೆ. ಒಂದು ವೇಳೆ ಕಾಯಿದೆಗೆ ಅಂಗೀಕಾರ ದೊರೆತರೆ ರಾಜ್ಯದಲ್ಲೂ ವಿದ್ಯುತ್ ಸರಬರಾಜು ವ್ಯವಸ್ಥೆ ಖಾಸಗಿಯವರಿಗೆ ವಹಿಸಲು ಅವಕಾಶ ದೊರೆತಂತಾಗಲಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೃಷಿಕರಿಗೆ ಬೆಸ್ಕಾಂ ನಿಂದ ನೀಡುತ್ತಿರುವ ಉಚಿತ ವಿದ್ಯುತ್ನಿಂದಲೇ ಯಾವುದೇ ಲಾಭ ಸಿಗುತ್ತಿಲ್ಲ. ಇಂತಹ ಹೊತ್ತಲ್ಲಿ ಈ ಮಸೂದೆ ಜಾರಿಯಾದರೆ ರೈತರು ಕೃಷಿಗಾಗಿ ವಿದ್ಯುತ್ ಉಪಯೋಗಿಸಲು ಹೆಚ್ಚು ಹಣ ತೆರುವ ಸ್ಥಿತಿ ನಿರ್ಮಾಣವಾಗುತ್ತದೆ. ಬಡವರು ರೈತಾಪಿ ವರ್ಗದವರಿಗೆ ಬೆಸ್ಕಾಂ ಇಲಾಖೆಯಿಂದ ದೊರೆಯುವ ಯಾವ ಸವಲತ್ತುಗಳು ಸಿಗದೇ ವಂಚಿತರಾಗಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ನ ಹೊಸ ನೀತಿಯಿಂದ ಬಂಡವಾಳ ಷಾಹಿಗಳಿಗೆ ಅನುಕೂಲವಾಗುತ್ತದೆ. ಆದರೆ, ಬಡಜನರಿಗೆ ರೈತರಿಗೆ, ಕಾರ್ಮಿಕ ವರ್ಗವದರಿಗೆ ಇದರಿಂದ ಅನ್ಯಾಯವಾಗುತ್ತದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ವಿದ್ಯುತ್ ಕೂಡ ಖಾಸಗೀಕರಣ ಮಾಡಿದರೆ ಅದರ ಬಿಲ್ ಹೆಚ್ಚಳವಾಗಿ ಜನಸಾಮಾನ್ಯರಿಗೆ ಹೊರೆಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ, ಕೂಡಲೇ ಕೇಂದ್ರಸರ್ಕಾರ ವಿದ್ಯುತ್ ಖಾಸಗೀಕರಣ ನಿರ್ಧಾರವನ್ನು ಹಿಂಪಡೆಯಬೇಕೆAದು ಒತ್ತಾಯಿಸಿದ್ದಾರೆ.
