ಕೇಂದ್ರ ಬಜೆಟ್ ಒಂದಿಷ್ಟು ಮಾಹಿತಿ
ಕೋವಿಡ್ ಅಲೆಗಳ ಬಿಕ್ಕಟ್ಟಿನಿಂದ ತತ್ತರಿಸಿದ್ದ ದೇಶದ ಆರ್ಥಿಕತೆ ಇದೀಗ ಚೇತರಿಕೆಯ ಹಂತದಲ್ಲಿದೆ. ಹಣದುಬ್ಬರ, ಸಾಮಾನ್ಯ ಜನರ ನಿರೀಕ್ಷೆಗಳು, ಉದ್ಯಮಿಗಳ ಕೋರಿಕೆಗಳ ಮಧ್ಯೆ ಈ ಬಾರಿಯ ಬಜೆಟ್ ಬಹಳ ಪ್ರಮುಖವಾಗಿದೆ. ಕಾರ್ಪೋರೇಟ್ಗಳಿಂದ ಹಿಡಿದು ಷೇರು ಮಾರುಕಟ್ಟೆಯವರೆಗೆ, ಜನಸಾಮಾನ್ಯರಿಂದ ಹಿಡಿದು ರೈತರವರೆಗೆ ಎಲ್ಲರ ದೃಷ್ಟಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸುವ ಬಜೆಟ್ನತ್ತ ನೆಟ್ಟಿದೆ.
ಫೆಬ್ರುವರಿ ಒಂದರಂದು ಮೋದಿ ಸರ್ಕಾರದ ಎರಡನೇ ಅವಧಿಯ ನಾಲ್ಕನೆ ಬಜೆಟ್ ಮಂಡನೆಯಾಗಲಿದೆ. ಹಣಕಾಸು ಸಚಿವರಾಗಿ ನಿರ್ಮಲಾ ಸೀತಾರಾಮನ್ ಅವರು ನಾಲ್ಕನೆ ಬಾರಿಗೆ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಕೋವಿಡ್ ಸಮಯದಲ್ಲಿ ಮಂಡಿಸುತ್ತಿರುವ ಬಜೆಟ್ ಇದಾಗಿದ್ದು, ಎಲ್ಲರಲ್ಲೂ ಕುತೂಹಲ ಮೂಡಿಸಿದೆ.
ಆರ್ಥಿಕತೆ, ಮತ್ತು ಸಾಮಾನ್ಯ ಜನರ ನಿರೀಕ್ಷೆಗಳ ಮಧ್ಯೆ ಈ ಬಾರಿಯ ಬಜೆಟ್ ಪ್ರಮುಖವಾಗಿದ್ದು, ಯಾವ ಕ್ಷೇತ್ರಕ್ಕೆ ಎಷ್ಟು ಲಾಭ ಸಿಗಲಿದೆ ಎಂದು ಫೆಬ್ರವರಿ 1ರಂದು ತಿಳಿಯಲಿದೆ. ಈ ಸಂದರ್ಭದಲ್ಲಿ ದೇಶದ ಕೇಂದ್ರ ಬಜೆಟ್ ಕುರಿತಂತೆ ತಿಳಿಯಲೇಬೇಕಾದ ಕೆಲವು ಸ್ವಾರಸ್ಯಕರ ಸಂಗತಿಗಳು ಇಲ್ಲಿವೆ.
ಬಜೆಟ್ ಆರಂಭವಾಗಿದ್ದು ಯಾವಾಗ?
ಕೇಂದ್ರ ಸರಕಾರದ ವಾರ್ಷಿಕ ಹಣಕಾಸು ವರದಿಯನ್ನು ‘ಸಾಮಾನ್ಯ ಬಜೆಟ್’ ಎನ್ನಲಾಗುತ್ತದೆ. ಭಾರತದ ಮೊದಲ ಬಜೆಟ್ ಅನ್ನು 1860ರ ಏಪ್ರಿಲ್ 7 ರಂದು ಮಂಡಿಸಲಾಯಿತು. ಅಂದರೆ ಭಾರತದ ಕೇಂದ್ರ ಬಜೆಟ್ಗೆ 162 ವರ್ಷಗಳ ಇತಿಹಾಸವಿದೆ. ಮೊದಲ ಬಜೆಟ್ ಅನ್ನು ಬ್ರಿಟಿಷ್ ಸರ್ಕಾರದ ಅಂದಿನ ಹಣಕಾಸು ಸಚಿವರಾಗಿದ್ದ ಜೇಮ್ಸ್ ವಿಲ್ಸನ್ ಮಂಡಿಸಿದ್ದರು.
ಸ್ವಾತಂತ್ರ್ಯ ನಂತರ ಮೊದಲು ಮಂಡನೆಯಾಗಿದ್ದು ಯಾವಾಗ?
ಸ್ವಾತಂತ್ರ್ಯ ನಂತರ ಸಂವಿಧಾನದ 112ನೇ ವಿಧಿಯಡಿ ಆಯ-ವ್ಯಯ (ಬಜೆಟ್) ಮಂಡಿಸಲು ಅವಕಾಶ ನೀಡಲಾಗಿದೆ. ಸ್ವಾತಂತ್ರ್ಯದ ನಂತರ ಮೊದಲ ಹಣಕಾಸು ಸಚಿವರಾಗಿದ್ದ ಆರ್.ಕೆ.ಶಣ್ಮುಖಂ ಚೆಟ್ಟಿ ಅವರು 1947ರ ನವೆಂಬರ್ 26 ರಂದು ಸ್ವತಂತ್ರ ಭಾರತದ ಮೊದಲ ಬಜೆಟ್ ಮಂಡಿಸಿದರು. ಸಂವಿಧಾನ ಜಾರಿಯಾದ ನಂತರದ ಮೊದಲ ಬಜೆಟ್ಅನ್ನು 1950ರ ಫೆಬ್ರವರಿ 28 ರಂದು ಮಂಡಿಸಲಾಯಿತು.
ಬಜೆಟ್ ರಜೆನೆಗೆ ಯಾರೆಲ್ಲ ಬೇಕು?
ಯೋಜನಾ ಆಯೋಗ, ಕಂಟ್ರೋಲರ್ ಮತ್ತು ಲೆಕ್ಕಪರಿಶೋಧಕ ಜನರಲ್, ಆಡಳಿತ ಸಚಿವಾಲಯ, ಹಣಕಾಸು ಸಚಿವಾಲಯ ಈ ಎಲ್ಲ ಏಜೆನ್ಸಿಗಳು ಸೇರಿ ಬಜೆಟ್ ರಚಿಸುತ್ತವೆ.
ಬಜೆಟ್ನ ಇತರೆ ಆಸಕ್ತಿಕರ ಸಂಗತಿಗಳು ಯಾವುವು?
ಹಣಕಾಸು ಸಚಿವರ ಭಾಷಣವು ಸುರಕ್ಷಿತ ದಾಖಲೆಯಾಗಿದೆ.ಸಚಿವರ ಭಾಷಣ ಪ್ರತಿಯನ್ನು ಬಜೆಟ್ಗೆ ಎರಡು ದಿನಗಳ ಮೊದಲು ಮುದ್ರಿಸಲು ಕಳುಹಿಸಲಾಗುತ್ತದೆ.ಹಣಕಾಸು ಸಚಿವಾಲಯದ ಎಲ್ಲ ಅಧಿಕಾರಿಗಳು ಮತ್ತು ನೌಕರರು ಕಚೇರಿಯಲ್ಲೇ ಇರುತ್ತಾರೆ.ಕುಟುಂಬದೊಂದಿಗೆ ಮಾತನಾಡಲು ಸಹ ಸಿಬ್ಬಂದಿಗೆ ಅವಕಾಶವಿಲ್ಲ.ಬಜೆಟ್ನ ತಯಾರಿಕೆಯಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಸೇರಿದಂತೆ ಬಜೆಟ್ಗೆ ಸಂಬಂಧಿಸಿದ ಪ್ರತಿ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತದೆ.
ಬಜೆಟ್ಅನ್ನು ಯಾರು ಅನುಮೋದಿಸುತ್ತಾರೆ ?
ಹಣಕಾಸು ಸಚಿವರಿಗೆ ಬಜೆಟ್ನ ಮೊದಲ ಕರಡು ಪ್ರತಿ ನೀಡಲಾಗುತ್ತದೆ.ಬಜೆಟ್ ಮಂಡಿಸುವ ಮೊದಲು ರಾಷ್ಟ್ರಪತಿಗಳ ಅನುಮೋದನೆ ಪಡೆಯಬೇಕು. ರಾಷ್ಟ್ರಪತಿಗಳ ಅನುಮೋದನೆಯ ನಂತರ ಕ್ಯಾಬಿನೆಟ್ ಮುಂದೆ ಬಜೆಟ್ ಮಂಡಿಸಲಾಗುತ್ತದೆ.ಕ್ಯಾಬಿನೆಟ್ ಅನುಮೋದನೆಯ ನಂತರ, ಇದನ್ನು ಸಂಸತ್ತಿನ ಉಭಯ ಸದನಗಳಲ್ಲಿ (ಮೊದಲು ಲೋಕಸಭೆಯಲ್ಲಿ ನಂತರ ರಾಜ್ಯಸಭೆ) ಮಂಡಿಸಲಾಗುತ್ತದೆ.
ಆಯವ್ಯಯ (ಬಜೆಟ್) ಎಂದರೇನು?
ಮುಂಬರುವ ಆರ್ಥಿಕ ವರ್ಷದ (ಕೇಂದ್ರ/ ರಾಜ್ಯ) ಸರಕಾರದ ನಿರೀಕ್ಷಿತ ಆದಾಯ ಮತ್ತು ವೆಚ್ಚಗಳನ್ನು ಕುರಿತು ತಯಾರಿಸಿದ ಅಂದಾಜು ಪಟ್ಟಿಯನ್ನು ಮುಂಗಡ ಪತ್ರ (ಬಜೆಟ್) ಎಂದು ಕರೆಯುತ್ತೇವೆ. ಮನೆಯಲ್ಲಿ ಹಿರಿಯರು ತಮ್ಮ ಆದಾಯಕ್ಕನುಗುಣವಾಗಿ ಸಂಸಾರ ತೂಗಿಸಿಕೊಂಡು ಹೋಗಲು ಮಾಡುವ ಯೋಜನೆಯಂತೆಯೇ ಇದು ದೇಶ ತೂಗಿಸಿಕೊಂಡು ಹೋಗಲು ಮಾಡುವ ಯೋಜನೆ. ಮುಂಗಡ ಪತ್ರವು ಸರಕಾರದ ವಾರ್ಷಿಕ ಆಯ-ವ್ಯಯವಾಗಿದ್ದು, ಸರಕಾರದ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿರುತ್ತದೆ. ಸರಕಾರವು ವಿವಿಧ ಮೂಲಗಳಿಂದ (ಕಂದಾಯ ಹಾಗೂ ತೆರಿಗೆ ಆದಾಯ) ಗಳಿಸುವ ವರಮಾನವನ್ನು ಸಾರ್ವಜನಿಕ ಆದಾಯ ಎಂದು ಕರೆಯಲಾಗುತ್ತದೆ.
ಏನಿರುತ್ತದೆ ಬಜೆಟ್ನಲ್ಲಿ?
ಹಿಂದಿನ ವರ್ಷದ ನೈಜ ಆದಾಯ ವೆಚ್ಚಗಳು, ಪ್ರಸ್ತುತ ವರ್ಷದ ನೈಜ ಆದಾಯ ವೆಚ್ಚಗಳು, ಪ್ರಸ್ತುತ ವರ್ಷದ ಪರಿಷ್ಕೃತ ಅಂದಾಜು ಆದಾಯ ವೆಚ್ಚಗಳು, ಮುಂಬರುವ ವರ್ಷದ ಮುಂಗಡ ಅಂದಾಜು ಆದಾಯ ವೆಚ್ಚಗಳು ಎಂಬ ನಾಲ್ಕು ಭಾಗಗಳನ್ನು ಮುಂಗಡ ಪತ್ರವು ಒಳಗೊಂಡಿರುತ್ತದೆ. ಬಜೆಟ್ನಲ್ಲಿ ಆದಾಯ, ವೆಚ್ಚ, ಆದಾಯ ಮತ್ತು ವೆಚ್ಚದ ನಡುವಣ ವ್ಯತ್ಯಾಸವನ್ನೂ ನಮೂದಿಸಲಾಗಿರುತ್ತದೆ
ಇಡೀ ಭಾರತ ದೇಶದ ಸಾಮಾನ್ಯ ವರ್ಗದ ಜನರ ನಿರೀಕ್ಷೆಯ ಹಾಗೆ ಹಣಕಾಸು ಸಚಿವರು ಬಜೆಟ್ ಮಂಡಿಸಲಿ .
ವೆಂಕಟೇಶ್ ಬಾಬು. ಎಸ್
ಸಹಾಯಕ ಪ್ರಾಧ್ಯಾಪಕರು ದಾವಣಗೆರೆ