ಕೇಂದ್ರ ಸರ್ಕಾರದಿಂದ 2000 ಸಾವಿರ ಸಾಮರ್ಥ್ಯದ ಆಕ್ಸಿಜನ್ ಜನರೇಟರ್ ಮಂಜೂರು
ದಾವಣಗೆರೆ: ನಗರದ ಜಿಲ್ಲಾ ಚಿಗಟೇರಿ ಸಾರ್ವಜನಿಕ ಆಸ್ಪತ್ರೆಗೆ ಪ್ರತಿ ನಿಮಿಷಕ್ಕೆ 2000 ಲೀಟರ್ ಸಾಮರ್ಥ್ಯದ ಆಕ್ಸಿಜನ್ ಜನರೇಟರ್ ಹಾಗೂ ನಗರದ ನಿಟ್ಟುವಳ್ಳಿಯಲ್ಲಿರುವ ಇ.ಎಸ್.ಐ. ಆಸ್ಪತ್ರೆಗೆ ಪ್ರತಿ ನಿಮಿಷಕ್ಕೆ 500 ಲೀಟರ್ ಸಾಮರ್ಥ್ಯದ ಆಕ್ಸಿಜನ್ ಜನರೇಟರ್‌ಗಳನ್ನು ಕೇಂದ್ರ ಸರ್ಕಾರವು ಮಂಜೂರು ಮಾಡಿದೆ ಎಂದು ಸಂಸದ ಡಾ. ಜಿ.ಎಂ.ಸಿದ್ದೇಶ್ವರ ತಿಳಿಸಿದ್ದಾರೆ.
ಎರಡೂ ಆಸ್ಪತ್ರೆಗಳ ಬಳಿ ಈಗಾಗಲೇ ಆಕ್ಸಿಜನ್ ಜನರೇಟರ್ ಅಳವಡಿಸಲು ಜಾಗ ಗುರುತಿಸಲಾಗಿದ್ದು, ಮುಂದಿನ ಹದಿನೈದು ದಿನಗಳ ಒಳಗಾಗಿ ಸಿವಿಲ್ ಕಾಮಗಾರಿಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರದವರು ಕೈಗೊಳ್ಳಲಿದ್ದಾರೆ. ನಂತರ ಆಕ್ಸಿಜನ್ ಜನರೇಟರ್‌ಗಳನ್ನು ರಕ್ಷಣಾ ಸಂಶೋಧನಾ ಅಭಿವೃಧ್ದಿ ಸಂಸ್ಥೆ ಯವರು ಅಳವಡಿಸಲಿದ್ದಾರೆ.
ದಾವಣಗೆರೆ ನಗರದ ಆಸ್ಪತ್ರೆಗಳಿಗೆ ಆಕ್ಸಿಜನ್ ಜನರೇಟರ್‌ಗಳನ್ನು ಮಂಜೂರು ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿಯವರಿಗೆ ಕ್ಷೇತ್ರದ ಸಾರ್ವಜನಿಕರ ಪರವಾಗಿ ಹಾಗೂ ವೈಯಕ್ತಿಕವಾಗಿ ಸಂಸದರು ಕೃತಜ್ಞತೆ ಸಲ್ಲಿಸಿದ್ದಾರೆ.