CEO ZP: ಬಿತ್ತನೆ ಬೀಜ, ರಸಗೊಬ್ಬರ ಹೆಚ್ಚಿನ ಬೆಲೆಗೆ ಮಾರಾಟವಾಗದಂತೆ ಅಂಗಡಿ ತಪಾಸಣೆ ಹೆಚ್ಚಿಸಲು ಸೂಚನೆ – ಜಿಪಂ ಸಿಇಓ

1752846480646
ದಾವಣಗೆರೆ:( CEO ZP) ಜಿಲ್ಲೆಯಲ್ಲಿನ ಖಾಸಗಿ ಮಾರಾಟಗಾರರಿಂದ ಹೆಚ್ಚಿನ ಬೆಲೆಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ, ಕೀಟನಾಶಕ ಮಾರಾಟವಾಗಂತೆ ಅಂಗಡಿಗಳನ್ನು ತಪಾಸಣೆ ಮಾಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್ ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಆತ್ಮ ಚಾಲನಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಿತ್ತನೆ ಅವಧಿ ಮತ್ತು ಬೆಳೆಗಳಿಗೆ ಮೇಲುಗೊಬ್ಬರವನ್ನು ಹಾಕುವಾಗ ಹೆಚ್ಚು ಬೇಡಿಕೆ ಇರುವ ಸಮಯದಲ್ಲಿ ಖಾಸಗಿ ಮಾರಾಟಗಾರರು ಅಧಿಕ ಬೆಲೆಗೆ ಮಾರಾಟ ಮಾಡುವುದನ್ನು ಗಮನಿಸಲಾಗಿದೆ. ಹೆಚ್ಚಿನ ಬೆಲೆಯನ್ನು ತೆಗೆದುಕೊಳ್ಳುವವರು ನೈಜ ಬಿಲ್ಲನ್ನು ನೀಡದೇ ಬಿಳಿಹಾಳೆಯಲ್ಲಿ ಮತ್ತು ಕೊನೆಯಲ್ಲಿ ಒಟ್ಟು ಮೊತ್ತದಲ್ಲಿ ಬಿಲ್ಲನ್ನು ಸೇರಿಸುವುದನ್ನು ಗಮನಿಸಲಾಗಿದೆ. ಇದಕ್ಕಾಗಿ ಕೃಷಿ ಇಲಾಖೆಯಲ್ಲಿನ ಜಾಗೃತದಳದವರು ಅಂಗಡಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಲು ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ವೇಳೆ ಜಂಟಿ ಕೃಷಿ ನಿರ್ದೇಶಕರಾದ ಜಿಯಾವುಲ್ಲಾ ಕೆ.ಮಾತನಾಡಿ ಜಿಲ್ಲೆಯಲ್ಲಿ ಕೃಷಿಗೆ ಸಂಬಂಧಿಸಿದಂತೆ ರಸಗೊಬ್ಬರ, ರಾಸಾಯಿನಿಕ, ಬಿತ್ತನೆ ಬೀಜ ಮಾರಾಟ ಮಾಡಲು 3569 ಖಾಸಗಿ ಅಂಗಡಿಯವರಿಗೆ ಪರವಾನಗಿ ನೀಡಲಾಗಿದೆ. ಕೃಷಿ ಜಾಗೃತ ದಳವಿದ್ದು 24/7 ಮಾದರಿಯಲ್ಲಿ ತಪಾಸಣೆ ಮಾಡುವರು. ಈ ತಂಡಕ್ಕೆ ತಪಾಸಣೆ ಮಾಡಿ ತಪ್ಪು ಕಂಡುಬಂದಲ್ಲಿ ದಂಡವಿಧಿಸಲು ಅಧಿಕಾರ ನೀಡಿದ್ದು ತಿಂಗಳಿಗೆ ನಿರ್ಧಿಷ್ಟ ಗುರಿ ನಿಗದಿ ಮಾಡಲಾಗಿದೆ ಎಂದರು.
ರೈತ ಸಂಪರ್ಕ ಕೇಂದ್ರಗಳಲ್ಲಿ ದರಪಟ್ಟಿ ಪ್ರದರ್ಶನಕ್ಕೆ ಸೂಚನೆ; ಜಿಲ್ಲೆಯಲ್ಲಿನ 20 ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ, ಗೊಬ್ಬರ, ರಾಸಾಯಿಕವನ್ನು ರಿಯಾಯಿತಿ ದರದಲ್ಲಿ ರೈತರಿಗೆ ಮಾರಾಟ ಮಾಡಲಾಗುತ್ತಿದೆ. ದರಪಟ್ಟಿಯನ್ನು ಎಲ್ಲಾ ಆರ್.ಎಸ್.ಕೆ.ಗಳಲ್ಲಿ ರೈತರಿಗೆ ಕಾಣುವಂತೆ ಪ್ರದರ್ಶನ ಮಾಡಬೇಕೆಂದು ಸೂಚನೆ ನೀಡಿ ಅನಿರೀಕ್ಷಿತ ಭೇಟಿ ನೀಡಿದಾಗ ಇವೆಲ್ಲವನ್ನು ಪರಿಶೀಲನೆ ನಡೆಸಲಾಗುತ್ತದೆ ಎಂದರು.

ಜಿಲ್ಲೆಗೆ ಅಗತ್ಯವಿರುವ ರಸಗೊಬ್ಬರವನ್ನು ದಾಸ್ತಾನಿಡಲು ಸೂಚನೆ ನೀಡಿ ಈಗ ರೈತರು ಮೆಕ್ಕೆಜೋಳಕ್ಕೆ ಯೂರಿಯಾ ಬಳಕೆ ಮಾಡುವರು ಎಂದಾಗ 10 ಸಾವಿರ ಮೆಟ್ರಿಕ್ ಟನ್ ಯೂರಿಯಾ ಬೇಡಿಕೆ ಇದ್ದು 7666 ಮೆಟ್ರಿಕ್ ಟನ್ ದಾಸ್ತಾನಿದೆ. ಇನ್ನೂ ರೇಖ್ ಬರಬೇಕಾಗಿದೆ. ರೈತರಿಗೆ ಡಿಎಪಿ ಮತ್ತು ಯೂರಿಯಾ ಮೇಲಿನ ಅವಲಂಭನೆ ತಗ್ಗಿಸಲು ನ್ಯಾನೋ ಯೂರಿಯಾ, ಕಾಂಪೋಸ್ಟ್ ಗೊಬ್ಬರ ಬಳಕೆಗೆ ಶಿಫಾರಸು ಮಾಡಲಾಗುತ್ತಿದೆ ಎಂದರು.

ಸಭೆಯಲ್ಲಿ ಉಪ ಕಾರ್ಯದರ್ಶಿ ಮಮತ ಹೊಸಗೌಡರ್, ಕೃಷಿ ಇಲಾಖೆ ಅಧಿಕಾರಿಗಳು ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿಗಳು

error: Content is protected !!