ಚಿತ್ರಸಂತೆ’ ಲಾಂಛನ ಬಿಡುಗಡೆ: ಜನವರಿ 30 ರಂದು ದಾವಣಗೆರೆಯಲ್ಲಿ ‘ಚಿತ್ರಸಂತೆ’ ಆಯೋಜನೆ- ಬಿ ಜಿ ಅಜಯ ಕುಮಾರ್

ದಾವಣಗೆರೆ: ಮುಂದಿನ ವರ್ಷ ಜನವರಿ 30 ರಂದು ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ‘ಚಿತ್ರಸಂತೆ’ ಆಯೋಜಿಸುವುದಾಗಿ ಚಿತ್ರಸಂತೆ ಸ್ವಾಗತ ಸಮಿತಿ ಅಧ್ಯಕ್ಷ ಬಿ.ಜಿ. ಅಜಯ ಕುಮಾರ್ ಹೇಳಿದರು.
ದೃಶ್ಯಕಲಾ ಮಹಾವಿದ್ಯಾನಿಲಯದಲ್ಲಿ ಹಮ್ಮಿಕೊಂಡಿದ್ದ ಚಿತ್ರಸಂತೆ ಲಾಂಛನ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚಿತ್ರ ಕಲಾವಿದರಿಗೆ ಒಂದು ಉತ್ತಮ ವೇದಿಕೆ ಕಲ್ಪಿಸುವ ಚಿತ್ರಸಂತೆ ಕೇವಲ ಬೆಂಗಳೂರಿಗಷ್ಟೇ ಸೀಮಿತಗೊಂಡಿದ್ದು, ಮಧ್ಯ ಕರ್ನಾಟಕದ ಕೇಂದ್ರಬಿಂದುವಾಗಿರುವ ದಾವಣಗೆರೆ ನಗರದಲ್ಲಿಯೂ ಕೂಡ ಆಯೋಜನೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಹಲವು ವರ್ಷಗಳಿಂದ ಚಿತ್ರಸಂತೆಯನ್ನು ಬೆಂಗಳೂರು ಹೊರತು ಪಡಿಸಿ, ಉಳಿದಂತೆ ರಾಜ್ಯದ ಬೇರೆ ಯಾವ ಜಿಲ್ಲೆಗಳಲ್ಲೂ ಇಂಥ ಕಾರ್ಯಕ್ರಮ ಆಯೋಜನೆ ಮಾಡಿಲ್ಲ. ಹೀಗಾಗಿ, ದಾವಣಗೆರೆಯಲ್ಲಿ ಈ ಕಾರ್ಯಕ್ರಮ ಮಾಡುವ ಮೂಲಕ ಕಲಾವಿದರ ನೆರವಿಗೆ ಬರಬೇಕೆಂಬ ಉದ್ದೇಶದಿಂದ ಮಾಡುತ್ತಿದ್ದೇವೆ ಎಂದು ಹೇಳಿದರು.
ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಚಿತ್ರಸಂತೆ ಲಾಂಛನ ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ, ಪ್ರತಿಭಾವಂತ ಕಲಾವಿದರಿಗೆ ಚಿತ್ರಸಂತೆ ಉತ್ತಮ ವೇದಿಕೆಯಾಗಿದ್ದು,
ಅನ್ನುವ ಕಲ್ಪನೆ ದೊಡ್ಡ ವೇದಿಕೆಯಾಗಿದೆ. ಆ ಮೂಲಕ ಕಲಾವಿದರು ತಮ್ಮ ಚಿತ್ರಗಳನ್ನು ಮಾರುಕಟ್ಟೆ ಮಾಡಲು ಅನುಕೂಲ ಆಗಲಿದೆ ಎಂದರು. ಪ್ರತಿಯೊಬ್ಬರು ಭಾಗವಹಿಸಿ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ದೃಶ್ಯಕಲಾ ಮಹಾವಿದ್ಯಾನಿಲಯದ ಸಂಯೋಜನಾಧಿಕಾರಿ ಡಾ. ಸತೀಶ್ ಕುಮಾರ್ ಪಿ. ವಲ್ಲೇಪುರೆ ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಕಾರ್ಯದರ್ಶಿ ಶೇಷಾಚಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೇಮಲತಾ, ಮಧು ಪ್ರಾರ್ಥಿಸಿದರು. ದತ್ತಾತ್ರೇಯ ಭಟ್ ಕಾರ್ಯಕ್ರಮ ನಿರೂಪಿಸಿದರು.