ಕೈ ಗೆಲುವಿನ ತೆರೆ ಹಿಂದೆ ಕೆಲಸ ಮಾಡಿದ ಚಾಣಕ್ಯ ‘ಜೆಆರ್‌ಎಸ್’
ದಾವಣಗೆರೆ : ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದರೂ ಕಳೆದ ಬಾರಿ ಚುನಾವಣೆಯಲ್ಲಿ ಸೋತಿದ್ದ ಎಸ್‌ಎಸ್ ಮಲ್ಲಿಕಾರ್ಜುನ್, ಶಾಮನೂರು ವಿರುದ್ಧ ತೊಡೆ ತಟ್ಟಿದ್ದ ಕಾಂಗ್ರೆಸ್ ಬಿ ಟೀಂ ನಡುವೆ ಇಲ್ಲೊಬ್ಬ ವ್ಯಕ್ತಿ ಎಸ್‌ಎಸ್, ಎಸ್ಸೆಸ್ಸೆಂ ಪರ ತೆರೆ ಹಿಂದೆ ಕೆಲಸ ಮಾಡಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಡಿಸಿಸಿ ಬ್ಯಾಂಕ್ ಹಾಲಿ ನಿರ್ದೇಶಕ , ಮಾಜಿ ಅಧ್ಯಕ್ಷ ಜೆ.ಆರ್.ಷಣ್ಮುಖಪ್ಪ ತೆರೆ ಹಿಂದೆ ಕೆಲಸ ಮಾಡಿದ್ದಾರೆ. ಜೆ.ಎಚ್.ಪಟೇಲ್ ಕಾಲದ ಇವರು ಶಾಮನೂರು ಕುಟುಂಬದ ಆಪ್ತ, ಹಾಗೆಯೇ ರಾಜಕೀಯ ಮುತ್ಸದ್ದಿ. ಸಹಕಾರ ಕ್ಷೇತ್ರದಲ್ಲಿ ಸಾಕಷ್ಟು ಅನುಭವವಿರುವ ಇವರು ರಾಜಕೀಯ ಚಾಣಕ್ಯ ಕೂಡ ಆಗಿದ್ದಾರೆ. ಅಂತೆಯೇ ಅಪ್ಪ-ಮಕ್ಕಳ ಗೆಲುವಿಗಾಗಿ ಇವರು ಕೆಲಸ ಮಾಡಿದ್ದು, ಅವರ ಶ್ರಮ ಫಲಕೊಟ್ಟಿದೆ ಎನ್ನಬಹುದಾಗಿದೆ.
ಡಿಸಿಸಿ ಬ್ಯಾಂಕ್ ಹಾಲಿ ನಿರ್ದೇಶಕ ಕಾಂಗ್ರೆಸ್ ಕಟ್ಟಾಳಾಗಿದ್ದು, ಈ ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಅಧಿಕಾರ ಬರಬೇಕೆಂದು ಪಣ ತೊಟ್ಟ ಜೆಆರ್‌ಎಸ್ ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಹೊನ್ನಾಳಿಯ ಶಾಂತನಗೌಡ, ಮಾಯಕೊಂಡದ ಬಸವಂತಪ್ಪ ಪರ ವೈಯಕ್ತಿಕವಾಗಿ ಪ್ರಚಾರ ನಡೆಸಿದರು. ತಮ್ಮದೇ ಆದ ಪಡೆಯನ್ನು ಕಟ್ಟಿಕೊಂಡ ಷಣ್ಮುಖಪ್ಪ ತಮ್ಮ ಜತೆಗಿದ್ದ ಆಪ್ತರನ್ನು ನೇಮಿಸಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚಿಸಿದರು. ಅಲ್ಲದೇ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಊರಿನ ಹಿರಿಯ ಮುಖಂಡರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಕಾಂಗ್ರೆಸ್‌ಗೆ ಮತ ಹಾಕುವಂತೆ ಮನವೊಲಿಸಿದರು. ಗ್ರಾಮಗಳಲ್ಲಿ ಹಳೆ ತಲೆಗಳನ್ನು ಸಂಪರ್ಕಿಸಿದರು. ಅವರ ಹಿಂದೆ ಇದ್ದ ಜನರನ್ನು ಕಾಂಗ್ರೆಸ್‌ಗೆ ಸೆಳೆಯುವಂತೆ ಮಾಡಿದರು. ಗುಪ್ತ ಸ್ಥಳದಲ್ಲಿ ಕಾಂಗ್ರೆಸ್ ವಿರೋಧಿಗಳನ್ನು ಭೇಟಿ ಮಾಡಿ ಆ ಮತಗಳನ್ನು ಕಾಂಗ್ರೆಸ್‌ಗೆ ಬರುವಂತೆ ತಮ್ಮತ್ತ ಸೆಳೆದರು. ಅಲ್ಲದೇ ಎಲ್ಲ ಜಾತಿಗಳನ್ನು ತಮ್ಮಡೆಗೆ ತೆಗೆದುಕೊಂಡ ಜೆಆರ್‌ಎಸ್, ಒಡೆದು ಹೋಗಿದ್ದ ಕೆಲ ಲಿಂಗಾಯಿತ ಸಮುದಾಯದ ನಾಯಕರನ್ನು ಸಂಪರ್ಕಿಸಿ ಮತಗಳನ್ನು ಒಂದೆಡೆ ಸೇರುವಂತೆ ಮಾಡಿದರು.
ಇನ್ನು ಆನಗೋಡು, ಕುಕ್ಕುವಾಡ, ಕಲ್ಪನಹಳ್ಳಿ, ದಾವಣಗೆರೆ ದಕ್ಷಿಣ, ದಾವಣಗೆರೆ ಉತ್ತರ, ದೊಡ್ಡ ಬಾತಿ ಹೀಗೆ ಅನೇಕ ಹಳ್ಳಿಗಳಲ್ಲಿನ ಮಹಿಳಾ ಸಂಘ ಸಂಸ್ಥೆಗಳನ್ನು ಒಟ್ಟುಗೂಡಿಸಿ ಸಭೆ ನಡೆಸಿದರು. ಅಲ್ಲಿಗೆ ಮಾಜಿ ಸಚಿವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್‌ರನ್ನು ಕರೆಸಿ ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಶಾಸಕ ಎಸ್.ಎಸ್.ಮಲ್ಲಿಕಾರ್ಜುನ್ ಮಾಡಿದ ಅಭಿವೃದ್ಧಿ ಕೆಲಸಗಳು, ಮುಂದೆ ಮಾಡಬೇಕಾದ ಕೆಲಸಗಳ ಬಗ್ಗೆ ತಿಳಿಸಿದರು. ಈ ಮೂಲಕ ಮತ ಕೊಯ್ಲು ಮಾಡಿದ ಷಣ್ಮುಖಪ್ಪ ಕಾಂಗ್ರೆಸ್‌ಗೆ ಮತ ಹಾಕುವಂತೆ ಮನವೊಲಿಸಿದರು. ಇನ್ನು ತನ್ನ ಆಪ್ತರನ್ನು ಕರೆಸಿ ಬೃಹತ್ ಸಭೆ ನಡೆಸಿದರು. ಅಲ್ಲಿ ಕಾಂಗ್ರೆಸ್ ಸರಕಾರ ಬಂದ್ರೆ ಜಿಲ್ಲೆಗೇನೂ ಉಪಯೋಗ ಎಂಬುದರ ಬಗ್ಗೆ ಅರಿವು ಮೂಡಿಸಿದಲ್ಲದೇ , ದಾವಣಗೆರೆಗೆ ಬಿಜೆಪಿ ಮಾಡಿದ ಕೆಲಸಗಳೇನೂ, ಸ್ಮಾರ್ಟ್‌ಸಿಟಿ ಕಾಮಗಾರಿ, ಪ್ರತ್ಯೇಕ ಹಾಲು ಒಕ್ಕೂಟ, ಬ್ಯಾಂಕುಗಳ ವಿಲೀನ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು. ಒಟ್ಟಾರೆ ವೈಯಕ್ತಿಕವಾಗಿ ತನ್ನದೇ ಚುನಾವಣೆ ಎಂದು ತಿಳಿದುಕೊಂಡ ಜೆಆರ್‌ಎಸ್ ಅಂತಿಮವಾಗಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ದಡ ಸೇರಿಸಲು ನಾವಿಕರಾಗಿದ್ದಾರೆ ಎನ್ನಬಹುದು.