ಚನ್ನಗಿರಿ : 15 ದಿನ ಬಾಳಿಕೆ ಬರದ 70 ಲಕ್ಷ ವೆಚ್ಚದ ರಸ್ತೆ ! ಸೋಮಶೆಟ್ಟಿಹಳ್ಳಿ-ಸಿದ್ದಾಪುರ ರಸ್ತೆ ಕಳಪೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್

ದಾವಣಗೆರೆ : 70 ಲಕ್ಷ ವೆಚ್ಚ ಮಾಡಿ ನಿರ್ಮಿಸಲಾಗಿದ್ದ ಡಾಂಬರು ರಸ್ತೆಯೊಂದು ಕೇವಲ 15 ದಿನಗಳ ಕಾಲ ಬಾಳಿಕೆ ಬರಲಿಲ್ಲ ಎಂಬ ಆರೋಪ ಹೊತ್ತು ಕಾಮಗಾರಿ ಕೈಗೊಂಡ ಸಂಸ್ಥೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಚನ್ನಗಿರಿ ತಾಲೂಕು ವ್ಯಾಪ್ತಿಯ ಸೋಮಶೆಟ್ಟಿಹಳ್ಳಿ – ಸಿದ್ದಾಪುರ ಗ್ರಾಮದ ಸುಮಾರು 2 ಕಿಲೋ ಮೀಟರ್ ರಸ್ತೆಯನ್ನು ಕೆಆರ್‌ಐಡಿಎಲ್ ವತಿಯಿಂದ ನಿರ್ಮಾಣ ಮಾಡಲಾಗಿತ್ತು. ಡಾಂಬರು ರಸ್ತೆ ಮಾಡಿದ ಕೇವಲ 15 ದಿನಗಳಲ್ಲೇ ರಸ್ತೆ ಹಾಳಾಗಿದ್ದು, ಇದಕ್ಕೆ ಹೊಣೆ ಯಾರು? ಸಾರ್ವಜನಿಕರ ತೆರಿಗೆ ಹಣ ವ್ಯರ್ಥವಾಗಿದೆ ಎಂದು ಸಾಮಾಜಿಕ ಜಾಲತಾಣ ಗಳಲ್ಲಿ ಪೋಸ್ಟ್ ಮಾಡಲಾಗಿದೆ. ಜನರು ತಾವು ಕೊಳ್ಳುವ ಪ್ರತಿಯೊಂದು ವಸ್ತುಗಳ ಮೇಲೆ ತೆರಿಗೆ ವಿಧಿಸಿ ಸರ್ಕಾರದ ಬೊಕ್ಕಸವನ್ನು ತುಂಬಿಸುತ್ತದೆ. ಜನರ ತೆರಿಗೆ ಹಣದಿಂದಲೇ ಇಂತಹ ಕಾಮಗಾರಿ ನಡೆಸುವ ಸರ್ಕಾರ ಗುಣಮಟ್ಟದ ಕಾಮಗಾರಿ ನಡೆಸುವುದಿಲ್ಲ. ಕಾಮಗಾರಿ ನಡೆದ ನಂತರ ಅದರ ಗುಣಮಟ್ಟ ಪರೀಕ್ಷಿಸಿ ವರದಿ ಸಲ್ಲಿಸುವುದಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಕಳಪೆ ಕಾಮಗಾರಿ ಮಾಡಲಾಗಿದೆ ಎನ್ನಲಾದ ಸೋಮಶೆಟ್ಟಿಹಳ್ಳಿ-ಸಿದ್ದಾಪುರ ರಸ್ತೆ ಕುರಿತು ಇಂಜಿನಿಯರ್ ಪ್ರಕಾಶ್ ಮಾತನಾಡಿ, ರಸ್ತೆ ಇನ್ನೂ ಸಂಪೂರ್ಣವಾಗಿಲ್ಲ, ರಸ್ತೆ ನಿರ್ಮಾಣದ ವೇಳೆ ಮಳೆ ಬಂದು ಕೊಚ್ಚಿಕೊಂಡು ಹೋಗಿದೆ, ರಸ್ತೆ ಪಕ್ಕದಲ್ಲಿ ಚರಂಡಿ ಇರದ ಕಾರಣದಿಂದ ಮಳೆ ನೀರು ರಸ್ತೆ ಮೇಲೆ ಹರಿದು ರಸ್ತೆ ಮೇಲೆ ಹಾಕಲಾಗಿದ್ದ ಡಾಂಬರು ಕಿತ್ತು ಹೋಗಿದೆ ಎಂದು ಹೇಳುತ್ತಿದ್ದಂತೆ ದೂರವಾಣಿ ಸಂಪರ್ಕ ಕಡಿತವಾಯಿತು. ಮತ್ತೆ ಪ್ರಯತ್ನಿಸಿದಾಗ ನಾನು ಬೆಂಗಳೂರು ನಗರದಲ್ಲಿದ್ದು ದಾವಣಗೆರೆಗೆ ಬಂದು ಮಾಹಿತಿ ಹೇಳುವೆ, ಇಲ್ಲಿ ಸರಿಯಾದ ಮಾಹಿತಿ ಸಿಗುವುದಿಲ್ಲ ಎಂದರು. ಒಟ್ಟಾರೆ ಸೋಮಶೆಟ್ಟಿಹಳ್ಳಿ-ಸಿದ್ದಾಪುರ ರಸ್ತೆ ಕಳಪೆ ಕಾಮಗಾರಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು ಸಂಬಂಧಪಟ್ಟ ಕೆಆರ್‌ಐಡಿಎಲ್ ಅಧಿಕಾರಿಗಳು ಯಾವ ಕ್ರಮಕೈಗೊಳ್ಳಲಿದ್ದಾರೆ ಕಾದು ನೋಡಬೇಕು.