ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ ಬೈಲಾ ತಿದ್ದುಪಡಿಗೆ ಮುಖ್ಯಮಂತ್ರಿ ಸೂಚನೆ
ಬೆಂಗಳೂರು: ಗಣಿಗಾರಿಕೆ ವಲಯಗಳ ಸಮಗ್ರ ಅಭಿವೃದ್ಧಿ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಆದ್ಯತೆ ನೀಡಬೇಕು ಹಾಗೂ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ ಬೈಲಾ ತಿದ್ದುಪಡಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ.
ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮವು ಗಣಿಬಾಧಿತ ಜಿಲ್ಲೆಗಳಲ್ಲಿ ಸುಪ್ರೀಂ ಕೋರ್ಟ್ ಅನುಮೋದನೆಯಂತೆ ಗಣಿಗಾರಿಕೆಯ ಪ್ರಭಾವಕ್ಕೆ ಒಳಗಾದ ವಲಯಗಳ ಸಮಗ್ರ ಅಭಿವೃದ್ಧಿ ಯೋಜನೆಯ (CEPMIZ) ಕ್ರಿಯಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅನುವಾಗುವಂತೆ ಪರಿಣಾಮಕಾರಿಯಾಗಿಸಲು ನಿಗಮದ ಬೈಲಾ ತಿದ್ದುಪಡಿ ಮಾಡಿ ಮುಖ್ಯಮಂತ್ರಿಯವರನ್ನು ಆಡಳಿತ ಮಂಡಳಿ ಅಧ್ಯಕ್ಷರನ್ನಾಗಿ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದರು.
ಅವರು ಇಂದು ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ ಕಾರ್ಯಚಟುವಟಿಕೆಗಳ ಪರಿಶೀಲನೆ ನಡೆಸಿದರು. ರಾಜ್ಯದ ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಮತ್ತು ತುಮಕೂರು- ಈ 4 ಜಿಲ್ಲೆಗಳ 466 ಗ್ರಾಮಗಳನ್ನು ಗಣಿ ಬಾಧಿತ ಎಂದು ಘೋಷಿಸಲಾಗಿದ್ದು, ಈ ಗ್ರಾಮಗಳ ಅಭಿವೃದ್ಧಿಗೆ ಸುಪ್ರೀಂ ಕೋರ್ಟು 24,996.71 ಕೋಟಿ ರೂ. ಅಂದಾಜು ವೆಚ್ಚದ ಕ್ರಿಯಾ ಯೋಜನೆಯನ್ನು ಅನುಮೋದಿಸಿದೆ. ಸುಪ್ರೀಂ ಕೋರ್ಟಿನ ಆದೇಶದಂತೆ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶ ಶ್ರೀ ಸುದರ್ಶನ ರೆಡ್ಡಿ ಅವರನ್ನು ಮೇಲುಸ್ತುವಾರಿ ಪ್ರಾಧಿಕಾರವಾಗಿ ನೇಮಕ ಮಾಡಲಾಗಿದ್ದು, ಯೋಜನೆಗಳ ಅನುಮೋದನೆ ಮತ್ತು ಅನುಷ್ಠಾನದ ಮೇಲುಸ್ತುವಾರಿಯನ್ನು ನೀಡಲಾಗಿದೆ. ಈ ಪ್ರಾಧಿಕಾರವು ಈ ವರೆಗೆ 4 ಜಿಲ್ಲೆಗಳಲ್ಲಿ ಒಟ್ಟು 7634.96 ಕೋಟಿ ರೂ. ಮೊತ್ತದ 317 ಪ್ರಸ್ತಾವನೆಗಳನ್ನು ಅನುಮೋದಿಸಿದೆ. ಉಳಿದ ಪ್ರಸ್ತಾವನೆಗಳನ್ನು ತ್ವರಿತವಾಗಿ ಸಿದ್ಧಪಡಿಸಿ ಅನುಮೋದನೆ ಪಡೆಯಲು ಅನುವಾಗುವಂತೆ ಈ ನಾಲ್ಕು ಜಿಲ್ಲೆಗಳಲ್ಲಿ ಎಂಜಿನಿಯರಿಂಗ್ ಕೋಶವನ್ನು ಸ್ಥಾಪಿಸಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ತ್ವರಿತವಾಗಿ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಸೂಚಿಸಿದರು.
ಈ ಯೋಜನೆಯನ್ನು ಸದ್ಬಳಕೆ ಮಾಡುವ ಮೂಲಕ ಗಣಿಬಾಧಿತ ಗ್ರಾಮಗಳನ್ನು ಅಭಿವೃದ್ಧಿ ಪಡಿಸಲು ವಿಪುಲ ಅವಕಾಶವಿದ್ದು, ಕಾಮಗಾರಿಗಳ ಗುಣಮಟ್ಟ ಕಾಯ್ದುಕೊಳ್ಳಲು ಆದ್ಯತೆ ನೀಡಬೇಕೆಂದು ಮುಖ್ಯಮಂತ್ರಿಗಳು ಸೂಚಿಸಿದರು.
ಸಭೆಯಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ, ತೋಟಗಾರಿಕೆ ಮತ್ತು ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್ . ಮಲ್ಲಿಕಾರ್ಜುನ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಗಳಾದ ಡಾ.ಕೆ. ಗೋವಿಂದರಾಜು, ನಸೀರ್ ಅಹ್ಮದ್ ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತ ಡಾ. ಈ. ವಿ. ರಮಣ ರೆಡ್ಡಿ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.