ದೇಶದಲ್ಲಿ ಬಾಲಕಾರ್ಮಿಕ ಪದ್ಧತಿ ಹೆಚ್ಚಾಗಲು ಬಡತನವೇ ಮೂಲ ಕಾರಣ – ಡಿಸಿ ಮಹಾಂತೇಶ್ ಬೀಳಗಿ
ದಾವಣಗೆರೆ: ದೇಶದಲ್ಲಿ ಬಾಲಕಾರ್ಮಿಕ ಪದ್ಧತಿ ಹೆಚ್ಚಾಗಲು ಬಡತನವೇ ಮೂಲ ಕಾರಣವಾಗಿದ್ದು, ಅನಕ್ಷರಸ್ಥ ಮತ್ತು ಬಡ ಕುಟುಂಬಗಳಲ್ಲಿ ಬಾಲಕಾರ್ಮಿಕ ಪದ್ಧತಿ ಹೆಚ್ಚಾಗಿದೆ. ೧೪ ವರ್ಷ ವಯೋಮಾನದೊಳಗಿನ ಮಕ್ಕಳನ್ನು ಕಾರ್ಖಾನೆ ಅಥವಾ ಇತರೆ ಕೆಲಸಗಳಿಗೆ ದುಡಿಮೆಗೆ ಬಳಸಿಕೊಳ್ಳುವುದು ಅಪರಾಧ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಹಾಗೂ ನಿಯಂತ್ರಣ) ಕಾಯ್ದೆ ಅಡಿಯಲ್ಲಿ ನೇಮಕವಾದ ವಿವಿಧ ಇಲಾಖೆಗಳ ನಿರೀಕ್ಷಕರುಗಳಿಗೆ ಹಾಗೂ ಸಮೀಕ್ಷೆಯಲ್ಲಿ ಭಾಗವಹಿಸುವ ಸ್ವಯಂ ಸೇವಾ ಸಂಸ್ಥೆಗಳ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಬಾಲ ಕಾರ್ಮಿಕ ಪದ್ಧತಿ ಪಿಡುಗನ್ನು ತೊಲಗಿಸಲು ಎಲ್ಲಾ ಇಲಾಖೆಗಳು ಕೈಜೋಡಿಸಬೇಕು. ಬಾಲ ಕಾರ್ಮಿಕ ಮಕ್ಕಳು ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿ, ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಮಕ್ಕಳ ಕುರಿತು ಸಮೀಕ್ಷೆ ಕೈಗೊಂಡ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಯಾವುದೇ ಮಕ್ಕಳು ಬಾಲಕಾರ್ಮಿಕ ಪದ್ಧತಿಗೆ ಒಳಪಟ್ಟಿಲ್ಲ ಎಂಬುದನ್ನು ದೃಢೀಕರಿಸಿಕೊಳ್ಳಬೇಕು ಎಂದು ತಿಳಿಸಿದರು.
ಅನಿವಾರ್ಯವಾಗಿ, ಮನೆಯ ಪೂರಕ ಸ್ಥಿತಿಗತಿಗಳಿಗೆ ಅನುಗುಣವಾಗಿ ಕೆಲ ಮಕ್ಕಳು ದುಡಿಮೆಯಲ್ಲಿ ತೊಡಗಿಕೊಳ್ಳುವುದು ಸಹಜ. ಅಂತಹ ಬಡ ಮಕ್ಕಳಿಗೆ ಪೂರಕ ವ್ಯವಸ್ಥೆ ಕಲ್ಪಿಸಿಕೊಟ್ಟು, ಆರೋಗ್ಯಕರ ಸೇವೆ ಮಾಡಬೇಕು. ಅಪಾಯಕಾರಿ ಹಾಗೂ ಹಾನಿಕಾರಕ ಉದ್ಯಮಗಳಲ್ಲಿ ಪಾಲ್ಗೊಂಡ ಮಕ್ಕಳ ರಕ್ಷಣೆಗೆ ಕ್ರಮ ತೆಗೆದುಕೊಂಡು, ಶಿಕ್ಷಣ ನೀಡುವ ವ್ಯವಸ್ಥೆಗೆ ಸೂಕ್ತ ಕ್ರಮವಹಿಸಿ ಎಂದು ತಿಳಿಸಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಇಬ್ರಾಹಿಂ ಸಾಬ್ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಸ್ಥಾಪಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಮೂಲಕ ಹಾಗೂ ರಾಜ್ಯ ಮಟ್ಟದಲ್ಲಿ ರಾಜ್ಯ ಬಾಲಕಾರ್ಮಿಕ ನಿರ್ಮೂಲನಾ ಯೋಜನಾ ಸೊಸೈಟಿ ಮಾಡಿದ್ದು, ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸಲು ಕ್ರಮವಹಿಸಲಾಗುತ್ತಿದೆ ಎಂದರು.
೨೦೦೧ ರಲ್ಲಿ ರಾಜ್ಯ ಸರ್ಕಾರವು ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ರಾಜ್ಯ ಬಾಲ ಕಾರ್ಮಿಕ ನಿರ್ಮೂಲನಾ ಕ್ರಿಯಾ ಯೋಜನೆ ಜಾರಿಗೆ ತಂದ ಪ್ರಥಮ ರಾಜ್ಯವಾಗಿದ್ದು, ವಿದ್ಯಾಭ್ಯಾಸದಿಂದ ವಂಚಿತರಾದ, ಸಾಮಾಜಿಕ ಸಂಕೋಲೆಗಳಲ್ಲಿ ತೊಡಗಿಕೊಂಡಿರುವ ಮಕ್ಕಳನ್ನು ರಕ್ಷಿಸುವಂತಹ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಬಳ್ಳಾರಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರಾದ ವೀಣಾ ಎಸ್.ಆರ್ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಕೌಸರ್ ರೇಷ್ಮಾ.ಜಿ., ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಆರ್ ಪರಮೇಶ್ವರಪ್ಪ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.