ಭಾರತದಲ್ಲಿ ಚೀನಾ ಎರಡು ಗ್ರಾಮಗಳ ನಿರ್ಮಾಣ: ಕೇಂದ್ರದ ವಿರುದ್ಧ ಖರ್ಗೆ ಕೆಂಡಾಮಂಡಲ
ನವದೆಹಲಿ: ಭಾರತಕ್ಕೆ ಸೇರಿರುವ ಪ್ರದೇಶದಲ್ಲಿ ಚೀನಾ ಎರಡು ಗ್ರಾಮಗಳನ್ನು ನಿರ್ಮಿಸಿದೆ ಎಂದು ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅರುಣಾಚಲ ಪ್ರದೇಶದ 15 ಸ್ಥಳಗಳಿಗೆ ಚೀನಾ ಮರುನಾಮಕರಣ ಮಾಡಿರುವುದಷ್ಟೆ ಅಲ್ಲದೇ, ನಮ್ಮ ಪ್ರದೇಶದಲ್ಲಿ ಚೀನಾ ಎರಡು ಗ್ರಾಮಗಳನ್ನು ನಿರ್ಮಿಸಿದೆ ಎಂದು ಉಪಗ್ರಹ ಚಿತ್ರಗಳು ಇತ್ತೀಚೆಗೆ ಬಯಲು ಮಾಡಿವೆ ಎಂದು ಖರ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ಕೇಂದ್ರ ಸರ್ಕಾರದ ಮೌನ ವಹಿಸಿರುವ ಬಗ್ಗೆ ಅಸಹನೆ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ಮತ್ತು ಬೀಜಿಂಗ್ ಜನತಾ ಪಕ್ಷದ (ಬಿಜೆಪಿ) ನಾಯಕರು ಚೀನಾದ ಹೆಸರು ಹೇಳಲೂ ಹಿಂಜರಿಯುತ್ತಾರೆ! ಚೀನಾ ಮಾಡಿರುವ ಭೂ ಅತಿಕ್ರಮಣದ ವಿಚಾರವನ್ನು ನಿರಾಕರಿಸುವ, ಆ ವಿಚಾರವನ್ನು ಚರ್ಚೆಯಿಂದ ದೂರ ಉಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಭಾರತದೊಳಗೆ ಚೀನಾ ಅತಿಕ್ರಮಣ ಮಾಡುತ್ತಿರುವುದನ್ನು ಕಾಂಗ್ರೆಸ್ ನಾಯಕರು ಮೊದಲಿನಿಂದಲೂ ಪ್ರಶ್ನಿಸುತ್ತಲೇ ಬಂದಿದ್ದಾರೆ. ನವೆಂಬರ್‌ನಲ್ಲಿ ರಾಹುಲ್ ಗಾಂಧಿಯವರು ಈ ಕುರಿತು ಪ್ರಶ್ನಿಸಿದ್ದರು. ‘ಒಕ್ಕೂಟ ಸರ್ಕಾರವು ಚೀನಾದ ವಿರುದ್ದ ಯಾವುದೇ ತಂತ್ರವನ್ನು ಹೊಂದಿಲ್ಲದಿರುವುದರಿಂದ, ಭಾರತದ ರಾಷ್ಟ್ರೀಯ ಭದ್ರತೆಯು ‘ಕ್ಷಮಿಸಲಾಗದಷ್ಟು ರಾಜಿಯಾಗಿದೆ” ಎಂದು ರಾಹುಲ್ ವಾಗ್ದಾಳಿ ನಡೆಸಿದ್ದರು. ಅದರಂತೆ ಬಿಜೆಪಿ ನಡೆದುಕೊಂಡಿರುವುದು ಈ ಮೂಲಕ ಬಹಿರಂಗವಾಗಿದೆ ಎಂದವರು ಕಿಡಿಕಾರಿದ್ದಾರೆ.
‘ದಕ್ಷಿಣ ಟಿಬೆಟ್’ ಎಂದು ಕರೆಯಲ್ಪಡುವ ಅರುಣಾಚಲ ಪ್ರದೇಶ ರಾಜ್ಯದಲ್ಲಿ ಇರುವ ವಸತಿ ಪ್ರದೇಶಗಳು, ಪರ್ವತಗಳು, ನದಿಗಳು ಮತ್ತು ಮೌಂಟೇನ್ ಪಾಸ್ ಸೇರಿದಂತೆ 15 ಸ್ಥಳಗಳಿಗೆ ಚೀನಾ ಗುರುವಾರ ‘ಮರುನಾಮಕರಣ’ ಮಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದು, ‘ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಭೂ ಗಡಿ ಕಾನೂನು’ ಜನವರಿ 1ರಿಂದ ಜಾರಿಗೆ ಬರಲಿದ್ದು, ಇದಕ್ಕೆ ಮುಂಚಿತವಾಗಿ ಈ ಬೆಳವಣಿಗೆ ಆಗಿರುವುದು ಆತಂಕ ತಂದಿದೆ. ಗಡಿ ನಿಯಂತ್ರಣವನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಕಾನೂನು ಇದಾಗಿದ್ದು, ಚೀನಾದೊಂದಿಗೆ ಭೂ ಗಡಿಯನ್ನು ಹಂಚಿಕೊಳ್ಳುವ ದೇಶಗಳಿಗೆ ಈ ಕಾನೂನು ನೇರವಾಗಿ ಸಂಬಂಧಿಸಿದೆ ಎಂದು ವರದಿಗಳಾಗಿವೆ ಎಂದಿದ್ದಾರೆ.