ಸಿಎಂ ಬದಲಾವಣೆ.! ಬೆಂಗಳೂರು ಮಠಾಧೀಶರ ಬೃಹತ್ ಸಮಾವೇಶ

ಬೆಂಗಳೂರು: ಇಂದು ಸಿಎಂ ಬದಲಾವಣೆ ಆಗುವ ಬಗ್ಗೆ ಖಚಿತ ಮಾಹಿತಿ ಬಿಜೆಪಿ ಹೈಕಮಾಂಡ್ ನಿಂದ ಹೊರಬೀಳುವ ಸಾಧ್ಯತೆ ಇರುವ ಬೆನ್ನಲೇ ರಾಜ್ಯದ ವಿವಿಧ ಮಠಾಧೀಶರು ಬಿ.ಎಸ್. ಯಡಿಯೂರಪ್ಪ ಅವರಿಂದ ರಾಜೀನಾಮೆ ಪಡೆಯದಂತೆ ಒತ್ತಾಯಿಸಿ, ಅವರನ್ನೇ ಇನ್ನೆರಡು ವರ್ಷಗಳ ಕಾಲ ಸಿಎಂ ಆಗಿ ಮುಂದುವರೆಸುವಂತೆ ರಣಕಹಳೆ ಊದಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಠಾಧೀಶರು ಬೃಹತ್ ಸಮಾವೇಶ ನಡೆಸುತ್ತಿದ್ದು, ಈ ಹಿಂದೆ ಯಾವುದೇ ಮುಖ್ಯಮಂತ್ರಿಗೂ ಈ ಮಟ್ಟದ ಬೆಂಬಲವನ್ನು ಮಠಾಧೀಶರು ಕೊಟ್ಟಿದ್ದು ಇತಿಹಾಸದಲ್ಲಿ ಕಂಡಿರಲಿಲ್ಲ. ಆದರೆ, ಯಡಿಯೂರಪ್ಪ ಅವರು ಒಬ್ಬ ಉತ್ತಮ ನಾಯಕತ್ವ ಹೊಂದಿದ್ದು, ಅವರು ಎಲ್ಲಾ ವರ್ಗದ ಜನರಿಗೂ ನ್ಯಾಯ ನೀಡುತ್ತಾರೆ. ಹಾಗಾಗಿ, ಅವರನ್ನೇ ಇನ್ನೆರಡು ವರ್ಷ ಸಿಎಂ ಆಗಿ ಮುಂದುವರೆಸಬೇಕೆಂದು ರಾಜ್ಯದ ಹಲವು ಮಠಾಧೀಶರು ಒಕ್ಕೊರಲಿನಿಂದ ಬೆಂಬಲ ಸೂಚಿಸುತ್ತಿದ್ದಾರೆ.
ಇಂದು ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ ಮಠಾಧೀಶರ ಸಮಾವೇಶಕ್ಕೆ ರಾಜ್ಯದ 5 ನೂರಕ್ಕೂ ಹೆಚ್ಚು ಮಠಾಧೀಶರು ಪಾಲ್ಗೊಳ್ಳುತ್ತಿದ್ದಾರೆ. ಯಡಿಯೂರಪ್ಪ ನಾಯಕತ್ವದಿಂದ ಹಿಂದೆ ಸರಿದರೆ ರಾಜ್ಯದಲ್ಲಿ ಬಿಜೆಪಿಗೆ ಉಳುಗಾಲವಿಲ್ಲ ಎಂಬ ಸಂದೇಶವನ್ನೂ ಅವರು ರವಾನಿಸಿದ್ದಾರೆ.
ಇಂದು ಹೈಕಮಾಂಡ್ ನಾಯಕತ್ವ ಬದಲಾವಣೆ ಕುರಿತು ಅಧಿಕೃತವಾಗಿ ತನ್ನ ನಿಲುವನ್ನು ಬಹಿರಂಗ ಪಡಿಸಲಿದ್ದು, ಇದಕ್ಕಾಗಿ ಮಠಾಧೀಶರು ಸಮಾವೇಶ ಹಮ್ಮಿಕೊಳ್ಳುವ ಮೂಲಕ ಹೈಕಮಾಂಡ್ ಮೇಲೆ ಯಡಿಯೂರಪ್ಪ ಅವರನ್ನೇ ಮುಂದುವರೆಸಲು ಒತ್ತಾಯ ಹೇರುತ್ತಿದೆ.
ಈಗಾಗಲೇ ಬಿಎಸ್ ವೈ ಟ್ವೀಟ್ ಮೂಲಕ ತಮಗೆ ಪಕ್ಷ ತಾಯಿಯಿದ್ದಂತೆ. ಕೇಂದ್ರದ ಯಾವುದೇ ನಿರ್ಧಾರಕ್ಕೆ ಬದ್ದವಾಗಿದ್ದು, ಯಾರೂ ಕಾನೂನು ವ್ಯಾಪ್ತಿ ಮೀರಿ ಪ್ರತಿಭಟನೆ ನಡೆಸದಂತೆ ಅವರು ಮನವಿ ಮಾಡಿದ್ದರು. ಆದರೆ, ಮಠಾಧೀಶರು ಮಾತ್ರ ಸಮಾವೇಶ ನಡೆಸಿ ಯಡಿಯೂರಪ್ಪ ನಾಯಕತ್ವಕ್ಕೆ ಜೈಕಾರ ಹಾಕುತ್ತಿದ್ದಾರೆ. ಮಠಾಧೀಶರ ಈ ಸಮಾವೇಶ ಎಷ್ಟರ ಮಟ್ಟಿಗೆ ಫಲಪ್ರದವಾಗುವುದೊ ಕಾದು ನೋಡಬೇಕಿದೆ.