ಜಿಎಂಐಟಿಯಲ್ಲಿ ಪಿಯು ವಿಜ್ಞಾನ ಕಾಲೇಜಿನ ಪ್ರಾಂಶುಪಾಲರುಗಳಿಗೆ ಅಭಿನಂದನಾ ಸಮಾರಂಭ

ದಾವಣಗೆರೆ: ನಗರದ ಪ್ರತಿಷ್ಠಿತ ಜಿ.ಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೇ. 20ರಂದು “ಮೀಟ್ ಅಂಡ್ ಗ್ರೀಟ್” ಪಿಯು ವಿಜ್ಞಾನ ಕಾಲೇಜಿನ ಪ್ರಾಂಶುಪಾಲರುಗಳಿಗೆ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು. ದಾವಣಗೆರೆ ಜಿಲ್ಲೆಯ ವಿವಿಧ ಪಿಯು ವಿಜ್ಞಾನ ಕಾಲೇಜಿನ ಪ್ರಾಂಶುಪಾಲರುಗಳು ಭಾಗವಹಿಸಿ ಸಮಾರಂಭವನ್ನು ಯಶಸ್ವಿಗೊಳಿಸಿದರು ಎಂದು ಜಿಎಂಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ವೈ. ವಿಜಯಕುಮಾರ್ ತಿಳಿಸಿದರು.

ಸುಮಾರು 30ಕ್ಕೂ ಹೆಚ್ಚು ವಿವಿಧ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರುಗಳು ಭಾಗವಹಿಸಿ ತಮ್ಮ ಅಭಿಪ್ರಾಯವನ್ನು ಹಂಚಿಕೊ0ಡರು. ದಾವಣಗೆರೆಯಲ್ಲಿ ತಾಂತ್ರಿಕ ಶಿಕ್ಷಣಕ್ಕೆ ಬೇಕಾದ ಎಲ್ಲಾ ರೀತಿಯ ಸೌಲಭ್ಯಗಳಿದ್ದು, ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕ ವರ್ಗದವರಿಗೆ ಅರಿವು ಮೂಡಿಸಬೇಕಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಸರಿಸುಮಾರು ಆರು ಸಾವಿರಕ್ಕೂ ಹೆಚ್ಚು ವಿಜ್ಞಾನ ವಿದ್ಯಾರ್ಥಿಗಳು ಪ್ರತಿ ವರ್ಷ ತೇರ್ಗಡೆಗೊಳ್ಳುತ್ತಿದ್ದು, ಹೆಚ್ಚಿನ ವಿದ್ಯಾರ್ಥಿಗಳು ಶಿಕ್ಷಣವನ್ನು ಬೆಂಗಳೂರಿನಲ್ಲಿ ಆಯ್ಕೆ ಮಾಡಿಕೊಳ್ಳುತ್ತಿರುವುದು ಕಂಡುಬರುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿ ತಾಂತ್ರಿಕ ಶಿಕ್ಷಣವು ಬಲಗೊಂಡಿದ್ದು, ಅನೇಕ ಪ್ರತಿಷ್ಠಿತ ಕಂಪನಿಗಳು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಜಿಲ್ಲೆಯು ಕರ್ನಾಟಕದ ಮಧ್ಯಭಾಗದಲ್ಲಿದ್ದು, ಎಲ್ಲಾ ರೀತಿಯ ಸೌಲಭ್ಯಗಳನ್ನು ಒಳಗೊಂಡಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಬೆಳವಣಿಗೆಯನ್ನು ಕಾಣಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಾಫ್ಟ್ವೇರ್ ಕಂಪನಿಗಳು ದಾವಣಗೆರೆಯತ್ತ ಒಲವನ್ನು ಹೊಂದಿದ್ದು ಅದಕ್ಕೆ ಪೂರಕವಾಗಿ ಟೆಕ್ನಾಲಜಿ ಪಾರ್ಕ್ ಉದ್ಘಾಟನೆಗೊಳ್ಳುತ್ತಿರುವುದು ಸಂತೋಷದಾಯಕವಾಗಿದೆ.

ಕಾರ್ಯಕ್ರಮದಲ್ಲಿ ಈ ಎಲ್ಲಾ ವಿಷಯಗಳ ಬಗ್ಗೆ ಪಿಯು ವಿಜ್ಞಾನ ಕಾಲೇಜಿನ ಪ್ರಾಂಶುಪಾಲರುಗಳೊಡನೆ ಸುದೀರ್ಘವಾದ ಚರ್ಚೆಯನ್ನು ನಡೆಸಿದ್ದು ಆ ಮೂಲಕ ವಿದ್ಯಾರ್ಥಿಗಳಿಗೂ ಇದರ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದು ತೀರ್ಮಾನಿಸಲಾಯಿತು. ನಂತರ ನಡೆದ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರುಗಳಿಗೆ ಅಭಿನಂದನೆಯನ್ನು ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಜಿಎಂಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ. ವಿಜಯಕುಮಾರ್, ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ತೇಜಸ್ವಿ ಕಟ್ಟಿಮನಿ ಟಿ.ಆರ್, ಇನ್ಫಾರ್ಮೆಶನ್ ಸೈನ್ಸ್ ಅಂಡ್ ಇಂಜಿನಿಯರಿ0ಗ್ ವಿಭಾಗದ ಮುಖ್ಯಸ್ಥರಾದ ಡಾ. ಸುನಿಲ್‌ಕುಮಾರ್, ಡಾ. ಓಂಕಾರಪ್ಪ, ಡಾ. ಸಂತೋಷ್, ಡಾ. ಪವನ್, ಡಾ. ಮಂಜುಳಾ, ಡಾ. ಮುರುಗೇಂದ್ರಪ್ಪ, ವಿವಿಧ ವಿಭಾಗಗಳ ಮುಖ್ಯಸ್ಥರುಗಳು ಭಾಗವಹಿಸಿದ್ದರು.

 

Leave a Reply

Your email address will not be published. Required fields are marked *

error: Content is protected !!