Congress: ನಾಲಗೆ ಮೇಲೆ ಹಿಡಿತವಿಟ್ಟುಕೊಂಡು ಬಿ. ಪಿ. ಹರೀಶ್ ಮಾತನಾಡಲಿ: ಕಾಂಗ್ರೆಸ್ ಯುವ ಮುಖಂಡರಿಂದ ತರಾಟೆ

ದಾವಣಗೆರೆ: (CONGRESS vs BJP) ತನ್ನದ ಪಕ್ಷದ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರ ಬಗ್ಗೆಯೇ ಭ್ರಷ್ಟಾಚಾರಿ, ಅಸಮರ್ಥ ಎಂಬ ಹೇಳಿಕೆ ನೀಡಿದ್ದ ಶಾಸಕ ಬಿ. ಪಿ. ಹರೀಶ್ ಅವರು ಶಾಮನೂರು ಶಿವಶಂಕರಪ್ಪರ ಮನೆತನದ ಬಗ್ಗೆ ನಾಲಗೆ ಮೇಲೆ ಹಿಡಿತವಿಟ್ಟುಕೊಂಡು ಮಾತನಾಡಬೇಕು ಎಂದು ಜವಾಹರ್ ಬಾಲ್ ಮಂಚ್ ಜಿಲ್ಲಾಧ್ಯಕ್ಷ ಮೊಹಮ್ಮದ್ ಜಿಕ್ರಿಯಾ ಹಾಗೂ ವೀರಶೈವ ಮಹಾಸಭೆಯ ದಾವಣಗೆರೆ ಯುವ ಘಟಕದ ಜಿಲ್ಲಾಧ್ಯಕ್ಷರಾದ ಶಿವರಾಜ್ ಶಾಸಕರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಶಾಮನೂರು ಮನೆತನದವರ ಪೊಮೆರೇನಿಯನ್ ನಾಯಿಗಳ ರೀತಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮಹಾನಗರ ಪಾಲಿಕೆ ಆಯುಕ್ತೆ ಸೇರಿದಂತೆ ಅಧಿಕಾರಿಗಳು ನಡೆದುಕೊಳ್ಳುತ್ತಾರೆ ಎಂಬ ಮಾತು ಹೇಳುವ ಮೂಲಕ ತಮ್ಮ ನೈತಿಕ ಅಧಃಪತನವನ್ನೇ ತಾವೇ ತೋರ್ಪಡಿಸಿಕೊಂಡಿದ್ದಾರೆ. ಇಂಥ ಜನಪ್ರತಿನಿಧಿಗಳಿಂದ ಜನರು ನಿರೀಕ್ಷಿಸುವುದಾದರೂ ಏನು ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ, ಕಾಂಗ್ರೆಸ್, ಕೆಜೆಪಿ ಪಕ್ಷಗಳಿಗೆ ಹೋಗಿ ಬಂದಿರುವ ಇದೇ ಬಿ. ಪಿ. ಹರೀಶ್ ಪಕ್ಷ ನಿಷ್ಠೆ ಬಗ್ಗೆ ಮಾತನಾಡುತ್ತಾರೆ. ಬಿ. ವೈ. ವಿಜಯೇಂದ್ರ ಬಗ್ಗೆ ಏನೆಲ್ಲಾ ಮಾತನಾಡಿದ್ದಾರೆ ಎಂಬುದು ಕರ್ನಾಟಕವೇ ನೋಡಿದೆ. ಒಂದು ಕಾಲದಲ್ಲಿ ಜಿ. ಎಂ. ಸಿದ್ದೇಶ್ವರ ವಿರೋಧಿ ಬಣದಲ್ಲಿದ್ದ ಬಿ. ಪಿ. ಹರೀಶ್ ಇಂದು ಅವರ ವಕ್ತಾರರಂತೆ ವರ್ತನೆ ಮಾಡುತ್ತಿದ್ದಾರೆ. ಶಾಮನೂರು ಶಿವಶಂಕರಪ್ಪರ ರಾಜಕೀಯ ಏಳಿಗೆ ಸಹಿಸದೇ, ಅಭಿವೃದ್ಧಿ ಕಾರ್ಯಗಳಿಂದ ಹೊಟ್ಟೆ ಉರಿಯಿಂದ ಹೇಳಿಕೆ ನೀಡುತ್ತಿರುವ ಬಿ. ಪಿ. ಹರೀಶ್ ರಾಜ್ಯ ಸರ್ಕಾರದ ಜನಪ್ರಿಯತೆಯಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ವರ್ತಿಸುತ್ತಿರುವುದು ಶಾಸಕರಿಗೆ ಶೋಭೆ ತರುವಂಥದ್ದಲ್ಲ ಎಂದು ಹೇಳಿದ್ದಾರೆ.
ದಾವಣಗೆರೆಗೆ ಬಿಜೆಪಿ ಕೊಡುಗೆ ಏನು? ಅಧಿಕಾರದಲ್ಲಿದ್ದಾಗ ಆಗಿನ ಸಚಿವರು, ಸಿಎಂ ಅಧಿಕಾರಿಗಳನ್ನು ಕೂರಿಸಿಕೊಂಡು ರಾಜಕೀಯ ವಿಚಾರ ಮಾತನಾಡಿಲ್ಲವೇ? ಮೊದಲು ನೆನಪು ಮಾಡಿಕೊಳ್ಳಲಿ. ರಾಜ್ಯದಲ್ಲಿ ಶೇಕಡಾ 40ರಷ್ಟು ಕಮೀಷನ್ ಪಡೆದ ಸರ್ಕಾರ ಎಂಬ ಕುಖ್ಯಾತಿ ಗಳಿಸಿದ್ದನ್ನು ಮರೆತಿದ್ದಾರೆ. ಸ್ವತಃ ಅಮಿತ್ ಶಾ ಅವರೇ ದೇಶದ ಕಂಡ ಮಹಾನ್ ಭ್ರಷ್ಟ ಸಿಎಂ ಬಿ. ಎಸ್. ಯಡಿಯೂರಪ್ಪ ಎಂದು ಹೇಳಿದ್ದು ನೆನಪಿಲ್ಲವೇ. ತನಗೆ ರಾಜಕೀಯದಲ್ಲಿ ಗೆಲ್ಲಲು ಕಾರಣರಾದ ಯಡಿಯೂರಪ್ಪರ ವಿರುದ್ಧ ಮಾತನಾಡಿರುವ ಹರೀಶ್ ಗೆ ಕೃತಜ್ಞತೆ ಅನ್ನೋದೇ ಇಲ್ಲ.
ಮುಂದಾದರೂ ಶಾಮನೂರು ಶಿವಶಂಕರಪ್ಪರ ಕುಟುಂಬದ ಬಗ್ಗೆ ಮಾತನಾಡುವಾಗ ಎಚ್ಚರ ವಹಿಸಬೇಕು ಎಂದು ಮೊಹಮ್ಮದ್ ಜಿಕ್ರಿಯಾ ಹಾಗೂ ಶಿವರಾಜ್ ಅವರು ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.