ಮುಂದಿನ ಚುನಾವಣೆಯಲ್ಲಿ ಬಿ.ಜೆ.ಪಿ 20-30 ಸ್ಥಾನ ಗೆಲ್ಲೊದಿಲ್ಲ: ಶಾಸಕ ಶಾಮನೂರು ಶಿವಶಂಕರಪ್ಪ

ದಾವಣಗೆರೆ : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 20 ರಿಂದ 30 ಸ್ಥಾನಗಳನ್ನು ಗೆಲ್ಲುವುದಿಲ್ಲ ಎಂಬುದು ಆ ಪಕ್ಷವೇ ಸಂಸ್ಥೆಯೊಂದರಿಂದ ನಡೆಸಿರುವ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.
ಈ ಕಾರಣಕ್ಕೆ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರನ್ನು ಮುಂದಿಟ್ಟುಕೊಂಡು ನೀವೇ ಪಕ್ಷವನ್ನು ಬೆಳೆಸಿ, ಮುನ್ನೆಡೆಸಿ ಎಂಬುದಾಗಿ ಹೇಳಿದ್ದಾರೆ. ನೀವೇ ಮುಖ್ಯಮಂತ್ರಿ ಇದ್ದ ಹಾಗೆ ಅಂತಾ ಬಿಜೆಪಿ ವರಿಷ್ಠರೇ ಹೇಳಿದ್ದಾರೆ ಎನ್ನುವ ಮಾಹಿತಿ ಇದೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು .
ಜಿಲ್ಲಾ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ
ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿಯವರ ಮಾತು ನಂಬುವಷ್ಟು ಜನರೇನೂ ದಡ್ಡರಿಲ್ಲ. ಅವರೂ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್
ಪಕ್ಷ ಅಧಿಕಾರಕ್ಕೆ ಬರುವುದು ಖಚಿತ. ಇದರಲ್ಲಿ ಎರಡು ಮಾತಿಲ್ಲ ಎಂದು ಭವಿಷ್ಯ ನುಡಿದರು.
ಬಿಜೆಪಿಯವರು ಈಗಾಗಲೇ ಕೆಲವು ಕಡೆ ವಿಚಾರ ಮಾಡಿದ್ದಾರೆ. ಅವರಿಗೆ ಈಗ ಬಂದಿರುವ ವರದಿಯಿಂದ ಎಚ್ಚೆತ್ತಿದ್ದಾರೆ. ಬೆಲೆ ಏರಿಕೆ ಎಷ್ಟಾಗಿದೆ ಎಂಬುದು ಅವರಿಗೆ ಗೊತ್ತಿದೆ. ಹಾಗಾಗಿ, ಕಾಂಗ್ರೆಸ್ ಪಕ್ಷದ ಮುಖಂಡರು,
ಕಾರ್ಯಕರ್ತರು ಕಾಂಗ್ರೆಸ್ ಅಧಿಕಾರಕ್ಕೆ ತರಲು ಶ್ರಮಿಸಿ ಎಂದು ಕರೆ ನೀಡಿದ ಅವರು, ಬಿಜೆಪಿಯವರು ದಾವಣಗೆರೆ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂಬ ಹೇಳಿಕೆ ಕೊಟ್ಟಿರುವುದನ್ನು ಗಮನಿಸಿದ್ದೇನೆ. ಎಲ್ಲಾ ಕ್ಷೇತ್ರಗಳಲ್ಲಿ ಸೋಲುತ್ತೇವೆ ಎಂದು ಹೇಳಬೇಕಿತ್ತೇ ವಿನಾ ಗೆಲ್ಲುತ್ತೇವೆ ಎಂದು ತಪ್ಪಾಗಿ ಹೇಳಿದ್ದಾರೆ. ಕಾಂಗ್ರೆಸ್ ನ ಅಭ್ಯರ್ಥಿಗಳು ಗೆಲ್ಲುವಂತೆ ಮಾಡಲು ಜನರು ಕಾಂಗ್ರೆಸ್ ಗೆ ಮತ ಹಾಕಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಮತ ಇಲ್ಲ, ಅಸೂಯೆಯೂ ಇಲ್ಲ. ಎಲ್ಲರೂ ಒಟ್ಟಾಗಿದ್ದೇವೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ನಾಯಕರು ಶ್ರಮಿಸುತ್ತಾರೆ. ನಾವು ಸಹ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗೋಣ ಎಂದು ಶಾಮನೂರು ಶಿವಶಂಕರಪ್ಪ ಕರೆ ನೀಡಿದರು.
ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ದಾವಣಗೆರೆ ಪ್ರವಾಸ ಬರುವುದು ಖಚಿತವಾಗಿತ್ತು. ಆದ್ರೆ, ಅವ್ರು ಬರಲೇ ಇಲ್ಲ. ಕಾಂಗ್ರೆಸ್ ಏರ್ಪಡಿಸಿದ್ದ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಎದುರು ಹಿಂದುಳಿದ ವರ್ಗಗಳ
ಜಾತಿ ಒಕ್ಕೂಟದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕಿತ್ತು. ಸಿದ್ದರಾಮಯ್ಯ ಬಾರದ ಕಾರಣ ಹೆಚ್ಚಾಗಿ ಜನರು ಸೇರಿರಲಿಲ್ಲ. ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಶಾಮನೂರು ಶಿವಶಂಕರಪ್ಪ ಅವರು, ಸಿದ್ದರಾಮಯ್ಯನವರು ಬಂದಿದ್ದರೆ ಚೆನ್ನಾಗಿತ್ತು. ಆದ್ರೆ ಹವಾಮಾನ ವೈಪರೀತ್ಯ ಕಾರಣದಿಂದ ಬರಲು ಆಗಿಲ್ಲ.ನಾವೆಲ್ಲರೂ ಸೇರಿ ಕೇಂದ್ರ ಸರ್ಕಾರದ ಜನ ವಿರೋಧಿ, ರೈತ ವಿರೋಧಿ ನೀತಿ ಖಂಡಿಸೋಣ ಎಂದರು.
ಕೃಷಿ ವಿರೋಧಿ ನೀತಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಪಂಜಾಬ್, ಹರ್ಯಾಣ ಹಾಗೂ ದೆಹಲಿಯಲ್ಲಿ ರೈತರು ಹೋರಾಟ
ಮಾಡುತ್ತಿದ್ದಾರೆ. ಆದ್ರೆ ಪ್ರಧಾನಿ ನರೇಂದ್ರ ಮೋದಿ ಸೌಜನ್ಯಕ್ಕಾದರೂ ಅವರ ಜೊತೆ ಮಾತುಕತೆ ನಡೆಸಿಲ್ಲ. ಸಚಿವರು ಹಾಗೂ ಕಾರ್ಯದರ್ಶಿಗಳನ್ನು ಕಳುಹಿಸಿ ಮಾತುಕತೆ ನಡೆಸಿದ್ದಾರೆ. ಬೇಡಿಕೆ ಈಡೇರಿಸುವ ಬಗ್ಗೆಯಾಗಲೀ, ಸಮಸ್ಯೆ ನಿವಾರಿಸಲು ಎರಡು ವರ್ಷಗಳಾಗುತ್ತಾ ಬಂದರೂ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.