150 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು: ಅವಿನಾಶ್ ಪಾಂಡೆ ಮೇ 2 ಕ್ಕೆ ಹರಿಹರದಲ್ಲಿ ರಾಹುಲ್ ಗಾಂಧಿ ಪ್ರಚಾರ ಸಭೆ

ದಾವಣಗೆರೆ: 40 ಪರ್ಸೆಂಟ್ ಬಿಜೆಪಿ ಸರ್ಕಾರದ ವಿರುದ್ಧ ಜನರು ಬೇಸತ್ತಿದ್ದು, ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಜನತೆ ತೀರ್ಮಾನಿಸಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳೂ, ಮಾಜಿ ಸಂಸದರೂ ಆದ ಅವಿನಾಶ್ ಪಾಂಡೆ ಹೇಳಿದರು.
ಬಾಪೂಜಿ ಅತಿಥಿಗೃಹದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಅಭೂತ ಪೂರ್ವ ಜಯ ದಾಖಲಿಸುವ ಮೂಲಕ ಮತ್ತೆ ಅಧಿಕಾರಕ್ಕೆ ಬರಲಿದ್ದು, ರಾಜ್ಯದಲ್ಲಿ ಪ್ರಚಾರಕ್ಕೆ ಹೋದಲ್ಲೆಲ್ಲಾ ಜನರಿಂದ ಸಿಗುತ್ತಿರುವ ಅಭೂತ ಪ್ರತಿಕ್ರಿಯೆಯೇ ಇದಕ್ಕೆ ಸಾಕ್ಷಿ ಆಗಿದೆ. 150 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಳೆದ 4 ವರ್ಷಗಳಿಂದ ಅಧಿಕಾರ ನಡೆಸಿದ ಬಿಜೆಪಿ ಸರ್ಕಾರ ಭ್ರಷ್ಟಾಚಾರ ನಡೆಸಿ ಜೈಲಿಗೆ ಹೋಗಿ ಬಂದ ಮುಖ್ಯಮಂತ್ರಿಯನ್ನು ಬದಲಾಯಿಸಿದರೂ ಸಹ ಶೇ.40 ರಷ್ಟು ಕಮೀಷನ್ ಆರೋಪ ಕೇಳಿಬಂದಿತು. ರಾಜ್ಯದ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಈ ಆರೋಪ ಮಾಡಿ ಸ್ವತ ಪ್ರಧಾನಮಂತ್ರಿಯವರೆಗೆ ದೂರು ನೀಡಿದರೂ ಸಹ ಯಾವುದೇ ಉಪಯೋಗವಾಗಲಿಲ್ಲ. ಗುತ್ತಿಗೆದಾರ ಆಗಿದ್ದ ಬಿಜೆಪಿ ಕಾರಕರ್ತ ಸಂತೋಷ್ ಪಾಟೀಲ್ ಸಚಿವ ಈಶ್ವರಪ್ಪನವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡರು.
ಇನ್ನು ವಿವಿಧ ಇಲಾಖೆಗಳಲ್ಲಿ ನೇಮಕಾತಿ ವೇಳೆ ಹುದ್ದೆಗಳನ್ನು ಸಚಿವರುಗಳೇ ಭಾಗಿಗಳಾಗಿ ಹರಾಜು ಮಾಡಲಾಗಿದೆ. ಈ ಸಂಬಂಧ ಎಡಿಜಿಪಿ ಅಧಿಕಾರಿಯೊಬ್ಬರು ಜೈಲಿನಲ್ಲಿದ್ದಾರೆ. ಭ್ರಷ್ಟಾಚಾರ ಎಷ್ಟೋಂದು ಮಿತಿ ಮೀರಿದ್ದಾರೆ ಎಂದರೆ ಇದೇ ಜಿಲ್ಲೆಯ ಶಾಸಕರೊಬ್ಬರು ಲೋಕಾಯುಕ್ತ ದಾಳಿಗೆ ಒಳಗಾಗಿದ್ದಾರೆ. ಅವರ ಮನೆಯಲ್ಲಿ ಕೋಟ್ಯಾಂತರ ಹಣ ದೊರೆತಿದೆ. ಇಂತಹ ಭ್ರಷ್ಟ ಸರ್ಕಾರದ ವಿರುದ್ಧ ಜನರು ಬೇಸತ್ತಿದ್ದಾರೆ.
ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್, ಪ್ರತಿ ಕುಟುಂಬಕ್ಕೆ 10 ಕೆಜಿ ಅಕ್ಕಿ, ಪ್ರತಿ ಮನೆಯ ಯಜಮಾನಿಗೆ 2 ಸಾವಿರ ರು., ನಿರುದ್ಯೋಗಿ ಪದವೀಧರರಿಗೆ 3 ಸಾವಿರ ರು., ಡಿಪ್ಲೋಮಾ ಮಾಡಿ ಕೆಲಸ ಸಿಗದವರಿಗೆ 1,500 ರು. ಭತ್ಯೆ, ಮಹಿಳೆಯರಿಗೆ ಉಚಿತ ಬಸ್ಸು ಪಾಸ್ ಘೋಷಣೆಯ ಗ್ಯಾರಂಟಿ ಕಾರ್ಡ್ ನೀಡಿದ್ದೇವೆ. ಹಿಂದೆ ನಮ್ಮ ಸರ್ಕಾರ 7 ಕೆಜಿ ಅಕ್ಕಿ ನೀಡಿದರೆ, ಅದನ್ನು ಬಿಜೆಪಿ ಸರ್ಕಾರ 4 ಕೆಜಿಗೆ ಇಳಿಸಿತ್ತು. ನಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದ ತಕ್ಷಣ ಪ್ರತಿ ಕುಟುಂಬಕ್ಕೆ 10 ಕೆಜಿ ಅಕ್ಕಿ ನೀಡುತ್ತೇವೆ. ಇದಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.
ಜನರು ಪರಸ್ಪರರು ಅನೋನ್ಯವಾಗಿರಬೇಕು. ರಾಜ್ಯದಲ್ಲಿ ಶಾಂತಿ, ಸೌಹಾರ್ದತೆ, ಸಾಮರಸ್ಯ ಇರಬೇಕು. ಜಾತಿಯ ಸಂಕೋಲೆಯನ್ನು ಕಿತ್ತು ಹಾಕಿ, ನಾವೆಲ್ಲರೂ ಮನುಷ್ಯರಾಗಿ ಬಾಳಬೇಕು. ಈ ನಿಟ್ಟಿನಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣುವ ಕಾಂಗ್ರೆಸ್ಸಿನತ್ತ ಜನರು ಒಲವು ತೋರುತ್ತಿದ್ದಾರೆ. ಕರ್ನಾಟಕ ರಾಜ್ಯದ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಸಂಕಲ್ಪ ಮಾಡಿದ್ದಾರೆ. ಯುವ ಜನರು, ಮಹಿಳೆಯರು, ಪುರುಷರು, ಹಿರಿಯರು ಹೀಗೆ ಎಲ್ಲರೂ ಕಾಂಗ್ರೆಸ್ಸಿಗೆ ಮತ ನೀಡುವ ಮೂಲಕ ಮತ್ತೆ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ ಹರಿಹರಕ್ಕೆ ಆಗಮಿಸಲಿದ್ದು, ಮಧ್ಯಾಹ್ನ 1 ಗಂಟಗೆ ಗಾಂಧಿ ಮೈದಾನದಲ್ಲಿ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಅವಿನಾಶ್ ಪಾಂಡೆ ತಿಳಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್. ಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಕೆ.ವಿ. ಗೌತಮ್, ಕೋ ಆರ್ಡಿನೇಟರ್ ರಮೇಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಬಿ. ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಈ ಸಂದರ್ಭದಲ್ಲಿದ್ದರು.