ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಕ್ರೀಡಾ ಅಂಕಣ ನಿರ್ಮಾಣ! ಸರ್ಕಾರದಿಂದ ಸುತ್ತೋಲೆ

ದಾವಣಗೆರೆ: ಗ್ರಾಮೀಣ ಹಾಗೂ ದೇಸಿ ಕ್ರೀಡೆಗಳನ್ನು ಉತ್ತೇಜಿಸುವ ಸಲುವಾಗಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕ್ರೀಡಾ ಅಂಕಣಗಳನ್ನು ನಿರ್ಮಿಸಲು ರಾಜ್ಯ ಸರ್ಕಾರ ಕ್ರಮಕೈಗೊಂಡಿದೆ. ಈ ಕುರಿತು ಮೇ.7ರ 2022ರಂದು ಸುತ್ತೋಲೆ ಹೊರಡಿಸಿರುವ ರಾಜ್ಯ ಸರ್ಕಾರ ಗ್ರಾಮೀಣ ಹಾಗೂ ದೇಸಿ ಕ್ರೀಡೆಗಳನ್ನು ಉತ್ತೇಜಿಸಲು ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಭಾಗಿತದೊಂದಿಗೆ ನರೇಗಾ ಯೋಜನೆಯಡಿ ‘ಕ್ರೀಡಾ ಅಂಕಣಗಳನ್ನು ಒಟ್ಟು 504 ಕೋಟಿ ರೂ.ಗಳ ಮೊತ್ತದಲ್ಲಿ ನಿರ್ಮಿಸಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಿದೆ.


ಗ್ರಾಮೀಣ ಹಾಗೂ ದೇಸಿ ಕ್ರೀಡೆಗಳನ್ನು ಉತ್ತೇಜಿಸಲು ಹಾಗೂ ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳ ಅಭ್ಯಾಸಕ್ಕೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಹಾತ್ಮಗಾಂಧಿ ನರೇಗಾ ಯೋಜನೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಸಹಯೋಗದೊಂದಿಗೆ ಕ್ರೀಡಾ ಅಂಕಣಗಳನ್ನು ನಿರ್ಮಿಸುವುದು ಮತ್ತು ಕ್ರೀಡಾ ತರಬೇತಿ ನೀಡುವುದು ಸರ್ಕಾರದ ಆಶಯವಾಗಿದೆ. ಗ್ರಾಮೀಣ ಕ್ರೀಡಾ ಅಂಕಣಗಳಲ್ಲಿ ನರೇಗಾ ಯೋಜನೆಯಡಿ ಸ್ಥಳೀಯ ಅವಶ್ಯಕತೆಗಳಿಗೆ ಅನುಗುಣವಾಗಿ ರನ್ನಿಂಗ್ ಟ್ರ‍್ಯಾಕ್, ಕಬಡ್ಡಿ, ಖೋ-ಖೋ, ವಾಲಿಬಾಲ್, ಬಾಸ್ಕೆಟ್ ಬಾಲ್ ಇತ್ಯಾದಿ ಅಂಕಣಗಳನ್ನು ನಿರ್ಮಿಸುವುದು, ಸದರಿ ವೆಚ್ಚವನ್ನು ನರೇಗಾ ಯೋಜನೆಯಡಿ ಭರಿಸಿ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಒಂದರ0ತೆ ಕ್ರೀಡಾ ಅಂಕಣಗಳನ್ನು ಆದ್ಯತೆ ಮೇರೆಗೆ ಸರ್ಕಾರಿ ಶಾಲೆ, ಕಾಲೇಜು, ವಸತಿ ನಿಲಯಗಳಲ್ಲಿ ಅಭಿವೃದ್ಧಿಪಡಿಸುವುದು.

ಎಷ್ಟು ವೆಚ್ಚದಲ್ಲಿ ಕ್ರೀಡಾ ಅಂಕಣ ನಿರ್ಮಾಣ?:
ನರೇಗಾ ಯೋಜನೆಯ ಸೆಕ್ಯೂರ್ ತಂತ್ರಾ0ಶದಲ್ಲಿ ವಿವಿಧ ಕ್ರೀಡಾಂಗಣಗಳಿಗೆ ವೆಚ್ಚವಾಗುವ ಮಾದರಿ ಅಂದಾಜು ಪಟ್ಟಿಗಳನ್ನು ತಯಾರಿಸಲಾಗಿದ್ದು, ಅದರಂತೆ ಕಬಡ್ಡಿ ಅಂಕಣಕ್ಕೆ 2.60 ಲಕ್ಷಗಳು, ಖೋಖೋ ಅಂಕಣಕ್ಕೆ 3.30 ಲಕ್ಷ, ವಾಲಿಬಾಲ್ ಅಂಕಣಕ್ಕೆ 5.10 ಲಕ್ಷ, ಬಾಸ್ಕೆಟ್ ಬಾಲ್ ಅಂಕಣಕ್ಕೆ 5.20 ಲಕ್ಷ, ರನ್ನಿಂಗ್ ಟ್ರ್ಯಾಕ್ 5 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ. ಕ್ರೀಡಾ ಅಂಕಣ ನಿರ್ಮಾಣದ ನಂತರ ತಲಾ 25 ಸಾವಿರ ರೂಗಳವರೆಗೆ ಕ್ರೀಡಾ ಸಾಮಗ್ರಿಗಳನ್ನು ಜಿಲ್ಲಾ ಪಂಚಾಯತ್ ವಲಯದ ಕ್ರೀಡಾಕೂಟ ಮತ್ತು ರಾಲಿಗಳ ಸಂಘಟನೆ ಹಾಗೂ ಯುವ, ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ಅಡಿಯಲ್ಲಿ ಒದಗಿಸಿರುವ ಅನುದಾನದಿಂದ ನೀಡಲು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ಮಟ್ಟದ ಉಪ/ಸಹಾಯಕ ನಿರ್ದೇಶಕರುಗಳಿಗೆ ಸೂಚಿಸಲಾಗಿರುತ್ತದೆ.

ಕ್ರೀಡಾ ಅಂಕಣಕ್ಕೆ ನಿಬಂಧನೆಗಳೇನು?:
ಕ್ರೀಡಾ ಅಂಕಣಗಳನ್ನು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ನಿವೇಶನ ಅಥವಾ ಸರ್ಕಾರಿ ಶಾಲಾ/ಕಾಲೇಜು ಆವರಣಗಳಲ್ಲಿ ನಿರ್ಮಿಸತಕ್ಕದ್ದು.
ಕಾಮಗಾರಿಗಳನ್ನು ನರೇಗಾ ಯೋಜನೆಯಡಿ ನೋಂದಾಯಿತ ಕೂಲಿಕಾರರಿಂದ ನಿರ್ವಹಿಸತಕ್ಕದ್ದು ಮತ್ತು ಯೋಜನೆಯಡಿ ಅನುಮತಿಸಲ್ಪಟ್ಟ ಯಂತ್ರಗಳನ್ನು          ಹೊರತುಪಡಿಸಿ ಇತರೆ ಯಾವುದೇ ಯಂತ್ರಗಳನ್ನು ಬಳಸತಕ್ಕದ್ದಲ್ಲ.
ಕ್ರೀಡಾ ಅಂಕಣ ನಿರ್ಮಾಣ ಕಾಮಗಾರಿಗಳಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.
ಕ್ರೀಡಾ ಅಂಕಣ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಹೆಚ್ಚುವರಿ ಕ್ರಿಯಾಯೋಜನೆ ತಯಾರಿಸುವುದು ಅಗತ್ಯವಿದ್ದಲ್ಲಿ ಅಂತಹ ಕ್ರಿಯಾಯೋಜನೆಗಳಿಗೆ ಜಿಲ್ಲಾ ಪಂಚಾಯತಿಯು ಅನುಮೋದನೆ ನೀಡತಕ್ಕದ್ದು.
ಸುತ್ತೋಲೆಯಲ್ಲಿ ತಿಳಿಸಿರುವ ಕ್ರೀಡಾ ಅಂಕಣಗಳ ಜೊತೆಗೆ ಅಥವಾ ಬದಲಾಗಿ ಸ್ಥಳೀಯವಾಗಿ ಅವಶ್ಯತೆ ಇರುವ ಇತರ ಕ್ರೀಡಾ ಅಂಕಣಗಳ ಅಂದಾಜು ಪಟ್ಟಿಗಳನ್ನು ತಯಾರಿಸಿಕೊಂಡು ಅನುಷ್ಠಾನಗೊಳಿಸಬಹುದು ಎಂಬ ನಿಬಂಧನೆಗಳನ್ನು ಸಹ ಸರ್ಕಾರ ಹಾಕಿದೆ.

garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!