ಖಾಸಗಿ ಶಾಲೆಯಲ್ಲಿ RTE ಮಕ್ಕಳಿಂದ ಅಕ್ರಮ ಶುಲ್ಕ ವಸೂಲಿ ವಿವಾದ.. ಇದೀಗ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸಂಕಷ್ಟ
ಬೆಂಗಳೂರು: ಶಿಕ್ಷಣದಿಂದ ಯಾರೂ ವಂಚಿತರಾಗಬಾರದೆಂಬ ಉದ್ದೇಶದಿಂದ ಸರ್ಕಾರ ಜಾರಿಗೆ ತಂದಿರುವ ಆರ್‌ಟಿಇ ಯೋಜನೆ ಹಳಿತಪ್ಪುತ್ತಿದೆ ಎಂಬುದಕ್ಕೆ ಬೆಂಗಳೂರಿನ ಈ ಖಾಸಗಿ ಶಾಲೆ ಉದಾಹರಣೆಯಾಗಿದೆ. ಇದೀಗ ಈ ವಿಚಾರದಲ್ಲಿ ಶಾಲೆಗಷ್ಟೇ ಅಲ್ಲ, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೂ ಸಂಕಷ್ಟ ಎದುರಾಗಿದೆ.
ಜೂನ್ ತಿಂಗಳಲ್ಲಿ ರಾಜ್ಯವ್ಯಾಪಿ ಚರ್ಚೆಗೆ ಗುರಿಯಾಗಿದ್ದ ಬೆಂಗಳೂರಿನ ವಿದ್ಯಾರಣ್ಯಪುರ ಬಳಿಯ ಮೌಂಟ್ ಲಿಟೆರಾ ಶಾಲೆ ಆರ್‌ಟಿಇ ಮಕ್ಕಳಿಂದ ಕಾನೂನು ಬಾಹಿರವಾಗಾಗಿ ಶುಲ್ಕ ವಸೂಲಿ ಮಾಡಿರುವ ಆರೋಪ ಕುರಿತಂತೆ ಸುಪ್ರೀಂ ಕೋರ್ಟ್ ವಕೀಲರೂ ಆದ ಹೋರಾಟಗಾರ ಪ್ರತಾಪ್ ಎಂಬವರು ಕಳೆದ ಜೂನ್ ತಿಂಗಳಲ್ಲೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡಿದ್ದರು. ಈ ದೂರು ಶಿಕ್ಷಣ ಇಲಾಖೆಗೆ ರವಾನೆಯಾಗಿದ್ದರೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬುದು ದೂರುದಾರರ ಆರೋಪ.
ಸದರಿ ಶಾಲೆಯ ಅಕ್ರಮಗಳ ಕುರಿತು ಮಾಧ್ಯಮಗಳು ದಾಖಲೆ ಸಹಿತ ವರದಿ ಮಾಡಿದ್ದು ಆ ದಾಖಲೆಗಳೊಂದಿಗೆ ದೂರು ನೀಡಿದ್ದರೂ ಅಧಿಕಾರಿಗಳು ಸಂಬಂಧಪಟ್ಟವರ ಹೇಳಿಕೆಗಳನ್ನೂ ಪಡೆದಿಲ್ಲ ಎಂದು ದೂರುದಾರರು ಆರೋಪಿಸಿದ್ದಾರೆ.
ಶಾಸನಬದ್ದ ‘ಆಯೋಗ’ದ ಆದೇಶವೂ ಲೆಕ್ಕಕ್ಕಿಲ್ಲ..?
ಶಿಕ್ಷಣ ಸಂಸ್ಥೆಯು ಈ ಹಿಂದೆ ಆರ್‌ಟಿಇ ಮಕ್ಕಳಿಂದ ನಿಯಮ ಬಾಹಿರವಾಗಿ ಶುಲ್ಕ ವಸೂಲಿ ಮಾಡಿದ ಆರೋಪದಲ್ಲಿ ಶಾಲೆಯ ಆಡಳಿತ ಮಂಡಳಿಯನ್ನು ಆಯೋಗವು ತಪ್ಪಿತಸ್ಥ ಎಂದು ಘೋಷಿಸಿದೆ. ಶಾಸನಬದ್ಧ ಸಂಸ್ಥೆಯಾಗಿರುವ ಆಯೋಗವು ನೀಡಿರುವ ಆದೇಶ ನ್ಯಾಯಾಲಯದ ತೀರ್ಪಿನಂತೆಯೇ ಆಗಿದ್ದರೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿರುವ ದೂರುದಾರರು, ಈ ಶಿಕ್ಷಣ ಸಂಸ್ಥೆಯ ಅಕ್ರಮಗಳ ಕುರಿತ ದೂರಿನ ಬಗ್ಗೆ ಸೂಕ್ತ ಕ್ರಮವಹಿಸದೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ನಿರ್ಲಕ್ಯ ತಾಳಿದ್ದಾರೆಂದು ಆರೋಪಿಸಿದ್ದಾರೆ.
ಇದೀಗ ಅಧಿಕಾರಿಗಳ ವಿರುದ್ದವೇ ಕ್ರಮಕ್ಕೆ ಕೋರಿ ಪ್ರತಾಪ್ ರಾಜ್ ಅವರು ದೂರು ಸಲ್ಲಿಸಿದ್ದಾರೆ.
ಈ ನಡುವೆ ಜ.24ರ ಈ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಸೂಕ್ತ ಕ್ರಮಕ್ಕೆ ಪ್ರಕ್ರಿಯೆ ಆರಂಭಿಸಿದೆ ಎಂದು ಸಿಎಸ್ ಕಚೇರಿ ಮೂಲಗಳು ತಿಳಿಸಿವೆ.