Covid 3rd Wave: 3ನೇ ಅಲೆಯಲ್ಲಿ 4 ಸಾವಿರ ಮಕ್ಕಳ ಕೋವಿಡ್ ಪ್ರಕರಣಗಳು ವರದಿಯಾಗಬಹುದು – ಮಹಾಂತೇಶ್ ಬೀಳಗಿ
ದಾವಣಗೆರೆ: ಜಿಲ್ಲೆಯಲ್ಲಿ ಜನರು ಮಾಸ್ಕ್, ಸಾಮಾಜಿಕ ಅಂತರ ಪಾಲನೆ ಮಾಡದೆ ನಿರ್ಲಕ್ಷ್ಯ ವಹಿಸುತ್ತಿರುವುದು ಕಂಡರೆ ಕರೋನಾದ ಮೂರನೇ ಅಲೆ ಮುನ್ಸೂಚನೆ ಕಂಡುಬರುತ್ತಿದ್ದು, ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸೂಚಿಸಿದರು.
ಕೋವಿಡ್-19 ಎರಡನೇ ಅಲೆಯ ಸಂಪೂರ್ಣ ನಿಯಂತ್ರಣ ಹಾಗೂ ಮೂರನೇ ಅಲೆಯನ್ನು ತಡೆಗಟ್ಟುವ ಸಲುವಾಗಿ ತೆಗೆದುಕೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗೆಗೆ ಶನಿವಾರ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಪಕ್ಕದ ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಅತೀ ಹೆಚ್ಚು ಕೊರೊನ ಪ್ರಕರಣಗಳು ದಾಖಲಾಗುತ್ತಿದ್ದು, ಈ ರಾಜ್ಯಗಳೊಂದಿಗೆ ನಮ್ಮ ರಾಜ್ಯ ಗಡಿ ಹಂಚಿಕೊಂಡಿರುವುದರಿಂದ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚು ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿರುವುದರಿಂದ ಇದು ಮೂರನೇ ಅಲೆಯ ಮುನ್ಸೂಚನೆಯಾಗಿದ್ದು ಎಚ್ಚರದಿಂದಿರಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.
ಕೋವಿಡ್ ನಿಯಂತ್ರಿಸುವಲ್ಲಿ ಜಿಲ್ಲಾಡಳಿತದೊಂದಿಗೆ ವೈದ್ಯಕೀಯ ಕಾಲೇಜುಗಳು, ಖಾಸಗಿ ಆಸ್ಪತ್ರೆಗಳು ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ತಂಡಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಭಾವ್ಯ ಮೂರನೇ ಅಲೆ ಎದುರಾದಲ್ಲಿ ಅದನ್ನು ತಡೆಗಟ್ಟಲು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.
ಕೋವಿಡ್ ಕರ್ತವ್ಯದ ವೈದ್ಯರು ಸಿಬ್ಬಂದಿಗೆ ತರಬೇತಿ ನೀಡಿ ಆತ್ಮಸ್ಥೈರ್ಯ ಮತ್ತಷ್ಟು ಹೆಚ್ಚಿಸಬೇಕು. ಜಿಲ್ಲಾಡಳಿತ, ಇಲಾಖೆಗಳ ಸಮನ್ವಯತೆಯಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳು, ಆಸ್ಪತ್ರೆಗಳು ಮಕ್ಕಳಿಗೆ ಬರಬಹುದಾದ ಸೋಂಕನ್ನು ತಡೆಗಟ್ಟಲು ಸಜ್ಜಾಗಬೇಕು ಹಾಗೂ ಬೇಕಾದ ಎಲ್ಲಾ ವೈದ್ಯಕೀಯ ಸಲಕರಣೆಗಳನ್ನು ಮುಂಜಾಗ್ರತವಾಗಿ ಸಿದ್ಧಮಾಡಿಟ್ಟುಕೊಳ್ಳಬೇಕು ಎಂದರು.
ದಂಡ ವಿಧಿಸದಿರುವ ಕಾರಣ ಮಾಸ್ಕ್ ಧರಿಸದಿರುವುದು, ಸಾಮಾಜಿಕ ಅಂತರವಿಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರುವುದು, ಧಾರ್ಮಿಕ ಸ್ಥಳಗಳಲ್ಲಿ ದರ್ಶನದ ಜೊತೆಗೆ ಸೇವೆ ಸಲ್ಲಿಸುವುದು ಹೀಗೆ ಬೇಜವ್ದಾರಿಯಿಂದ ನಿಯಮ ಉಲ್ಲಂಘಿಸಿ ನಡೆಯುತ್ತಿರುವುದರಿಂದ 3ನೇ ಅಲೆಯ ಅಪಾಯವನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಸರ್ಕಾರದ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದವರಿಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಿ, ದಂಡ ವಿಧಿಸಬೇಕು ಎಂದು ತಿಳಿಸಿದರು.
ಮೊದಲನೇ ಅಲೆಯಲ್ಲಿ 1800 ಮಕ್ಕಳ ಪ್ರಕರಣಗಳು, 2ನೇ ಹಂತದಲ್ಲಿ 2,600 ಪ್ರಕರಣಗಳು ವರದಿಯಾಗಿದ್ದು, 3ನೇ ಅಲೆಯಲ್ಲಿ 4 ಸಾವಿರ ಮಕ್ಕಳ ಕೋವಿಡ್ ಪ್ರಕರಣಗಳು ವರದಿಯಾಗಬಹುದು ಎಂದು ಅಂದಾಜಿಸಿದ್ದು, ಈ ಪೈಕಿ 200 ಮಕ್ಕಳು ಆಸ್ಪತ್ರೆಗೆ ದಾಖಲಾಗಬಹುದು ಹಾಗೂ 40 ಮಕ್ಕಳು ಐಸಿಯುನಲ್ಲಿ ದಾಖಲಾಗಬಹುದು ಎಂದು ಅಂದಾಜಿಸಲಾಗಿದೆ. ಐಸಿಯುನಲ್ಲಿ ದಾಖಲಾಗುವ ಮಕ್ಕಳಿಗೆ ಬೇಕಾದ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದರು.
ನಗರ ಪ್ರದೇಶದಲ್ಲಿ ನಡೆಯುವ ಸಂತೆ ಜಾತ್ರೆಗಳಲ್ಲಿ ಬಿಗಿ ಕ್ರಮ ಅನುಸರಿಸಿ ಕೋವಿಡ್ ನಿಯಮಾ ಪಾಲಿಸಲು ತಿಳಿಸಬೇಕು. ಒಂದು ವೇಳೆ ವಿರೋಧಿಸಿದರೆ ಪೊಲೀಸರ ಸಹಾಯದಿಂದ ಅಂತಹವರ ವಿರುದ್ಧ ಕ್ರಮ ಜರುಗಿಸಬೇಕು. ನಿನ್ನೆ ಜಿಲ್ಲೆಯಲ್ಲಿ ಕೇವಲ 4 ಪಾಸಿಟಿವ್ ಪ್ರಕರಣಗಳು ವರದಿಯಾಗಿರುವುದರಿಂದ ಕೋವಿಡ್ ಇಲ್ಲವೆಂದು ಮೈಮರೆಯುವುದು ಬೇಡ. ಒಮ್ಮೆಲೆ ಹೆಚ್ಚು ಪ್ರಕರಣಗಳು ಬಂದಿರುವ ಉದಾಹರಣೆಗಳು ನಮ್ಮ ಮುಂದಿದೆ ಎಂದರು.
ದುರ್ಬಲ ವರ್ಗದ 17 ಸಾವಿರ ಅಪೌಷ್ಠಿಕ ಮಕ್ಕಳಪಟ್ಟಿ ನಮ್ಮಲ್ಲಿದ್ದು ಇವರಲ್ಲಿ 10 ಸಾವಿರ ಮಕ್ಕಳ ಪೋಷಕರಿಗೆ ಈಗಾಗಲೇ ಲಸಿಕೆ ನೀಡಲಾಗಿದೆ. ಉಳಿದ 7 ಸಾವಿರ ಮಕ್ಕಳ ಪೋಷಕರಿಗೂ 15 ದಿನದೊಳಗಾಗಿ ಆದ್ಯತೆಯ ಮೇಲೆ ಲಸಿಕೆ ನೀಡಲು ಕ್ರಮ ವಹಿಸಲು ಸೂಚಿಸಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವಿಜಯ ಮಹಾಂತೇಶ್ ದಾನಮ್ಮನವರ್ ಮಾತನಾಡಿ, ರಾಜ್ಯದಲ್ಲಿ 3ನೇ ಅಲೆಯ ಮುನ್ಸೂಚನೆ ಕಂಡು ಬಂದಿದ್ದು ಮಕ್ಕಳ ಮೇಲೆ ತೀವ್ರವಾಗಿ ಪರಿಣಾಮ ಬೀರಲಿದೆ. ಇದಕ್ಕಾಗಿ ಪೋಷಕರು ಮಕ್ಕಳನ್ನು ಬಹಳ ಸುರಕ್ಷತೆಯಿಂದ ಕಾಪಾಡಿಕೊಳ್ಳಬೇಕಾಗಿದೆ. ಆದ್ದರಿಂದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಹೋಗಿ ಮಕ್ಕಳ ಪೋಷಕರಿಗೆ ಸೋಂಕು ಹಾಗೂ ಲಸಿಕೆಯ ಬಗ್ಗೆ ಜಾಗೃತಿ ನೀಡಿ ಲಸಿಕೆ ಪಡೆಯಲು ಮನವೊಲಿಸಬೇಕು ಎಂದರು.
ಜಿಲ್ಲೆಯ ಎಲ್ಲಾ ತಾಲ್ಲೂಕು ಹಾಗೂ ಗ್ರಾಮಗಳಲ್ಲಿ ನಡೆಯುವ ಸಭೆ ಸಮಾರಂಭ, ಮದುವೆ ಕಾರ್ಯಗಳಲ್ಲಿ ಸರ್ಕಾರದ ಆದೇಶದಂತೆ 100 ಕ್ಕಿಂತ ಹೆಚ್ಚಿನ ಜನರು ಪಾಲ್ಗೊಂಡಿರುವುದು ಕಂಡು ಬಂದಲ್ಲಿ ಕೂಡಲೆ ದಂಡ ವಿಧಿಸಿ ಪ್ರಕರಣ ದಾಖಲಿಸಿಬೇಕು. ಸಾರ್ವಜನಿಕ ಸ್ಥಳಗಳಾದ ದಿನಸಿ ಅಂಗಡಿ, ಹಾಲಿನ ಡೈರಿ, ಮಾರುಕಟ್ಟೆ, ಹಾಗೂ ದೇವಸ್ಥಾನಗಳಲ್ಲಿ ಜನರು ಗುಂಪಿನಲ್ಲಿ ಸೇರುತ್ತಿದ್ದು, ಅದರಲ್ಲೂ ಶ್ರಾವಣ ಮಾಸದಲ್ಲಿ ಜನರು ದೇವಸ್ಥಾನಗಳಿಗೆ ಹೋಗುವುದು ಹೆಚ್ಚು. ಜನರು ಆದಷ್ಟು ಮುಂಜಾಗ್ರತ ಕ್ರಮಗಳನ್ನು ವಹಿಸಿದರೆ ಸೋಂಕನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಜನರು ಬೇಜವಾಬ್ದಾರಿಯಾಗಿ ವರ್ತಿಸಬಾರದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಿ.ಬಿ. ರಿಷ್ಯಂತ್ ಮಾತನಾಡಿ, 3ನೇ ಅಲೆ ಬಂದೆ ಬರುತ್ತದೆ ಎಂಬುದು ಖಾತರಿಯಾಗಿದ್ದು, ಮಕ್ಕಳಿಗೆ ಬಂದರೆ ಪೋಷಕರು ಬಹಳಷ್ಟು ಆತಂಕಕ್ಕೊಳಗಾಗುತ್ತಾರೆ. ಸಾಮಾನ್ಯವಾಗಿ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಪ್ರಮಾಣದಲ್ಲಿರುತ್ತದೆ. ಅವರಲ್ಲಿ ಸೋಂಕು ತಗುಲಿದರೆ ಅದರೊಂದಿಗೆ ಹೋರಾಡುವಷ್ಟು ಶಕ್ತಿ ಅವರಲ್ಲಿ ಇರುವುದಿಲ್ಲ, ಇದರಿಂದಾಗಿ ಪೋಷಕರು ಬಹಳಷ್ಟು ಭಯಭೀತರಾಗುತ್ತಾರೆ. ಆದ್ದರಿಂದ ಆದಷ್ಟು ಜನರಲ್ಲಿ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲು ಮಹಾನಗರಪಾಲಿಕೆಯ ಗಾಡಿಗಳಲ್ಲಿ ಹಾಗೂ ಪೊಲೀಸ್ ಗಸ್ತು ವಾಹನಗಳಲ್ಲಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಧ್ವನಿ ವರ್ಧಕಗಳ ಮೂಲಕ ಅರಿವು ಮೂಡಿಸಬೇಕು ಎಂದರು.
ಈ ಬಗೆಗೆ ಅರಿವು ಮೂಡಿಸಿದ ನಂತರವೂ ಜನರು ಕ್ರಮಗಳನ್ನು ಉಲ್ಲಂಘಿಸಿದರೆ ಅವರಿಗೆ ದಂಡ ವಿಧಿಸಿ ಅವರ ಮೇಲೆ ಪ್ರಕರಣ ದಾಖಲಿಸಬೇಕು ಹಾಗೂ ದೇವಸ್ಥಾನಗಳು, ಸಾರ್ವಜನಿಕ ಸ್ಥಳಗಳಲ್ಲಿ ಗುಂಪಾಗಿ ಜನರು ಸೇರಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಡಿಹೆಚ್‌ಓ ಡಾ.ನಾಗರಾಜ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್, ಜಿಲ್ಲಾ ಸರ್ಜನ್ ಡಾ.ಜಯಪ್ರಕಾಶ್, ಆರ್‌ಸಿಹೆಚ್ ಡಾ.ಮೀನಾಕ್ಷಿ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.