ದಾವಣಗೆರೆಯಲ್ಲಿ ಮಾಸ್ಕ್ ಜಾಗೃತಿ ಅಭಿಯಾನ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಬಿಎಸ್‍ ಚನ್ನಬಸಪ್ಪ ಜವಳಿ ಅಂಗಡಿಗಳಿಗೆ 1 ಲಕ್ಷ ದಂಡವಿಧಿಸಿದ ಜಿಲ್ಲಾಧಿಕಾರಿ

FB_IMG_1618846424455

ದಾವಣಗೆರೆ ( ಏಪ್ರಿಲ್19)ದಾವಣಗೆರೆ ಜಿಲ್ಲೆಯಲ್ಲಿ ಕೋವಿಡ್ 2ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರ ನೇತೃತ್ವದ ತಂಡ ನಗರದ ಗಡಿಯಾರಕಂಬ, ಕಾಳಿಕಾದೇವಿ ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಸಂಚರಿಸಿ, ಮಾಸ್ಕ್ ಧರಿಸದವರಿಗೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಅಂಗಡಿಗಳ ಮೇಲೆ ದಂಡ ಹಾಕುವ ಮೂಲಕ ಚುರುಕು ಮುಟ್ಟಿಸುವುದರ ಜೊತೆಗೆ ಕೊರೊನ ಸೋಂಕಿನ ಕುರಿತು ಜಾಗೃತಿ ಮೂಡಿಸಿದರು. ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಿ ವ್ಯಾಪಾರ ಪರವಾನಗಿಯನ್ನು ರದ್ದು ಮಾಡುವ ಎಚ್ಚರಿಕೆ ನೀಡಿದರು.

ಸೋಮವಾರದಂದು ಸಂಜೆ ನಗರದ ಗಡಿಯಾರಕಂಬ ಬಳಿ ಹಾಗೂ ಕಾಳಿಕಾದೇವಿ ರಸ್ತೆ, ವಿಜಯಲಕ್ಷ್ಮಿ ರಸ್ತೆ ಸೇರಿದಂತೆ ಈ ಭಾಗದ ಪ್ರಮುಖ ರಸ್ತೆಗಳಲ್ಲಿ ಜನಸಂದಣಿ ಕಂಡುಬಂದಿತು. ಈ ಪ್ರದೇಶದ ಬಟ್ಟೆ ಅಂಗಡಿಗಳು, ಜ್ಯೂವೆಲರ್ಸ್‍ಗಳು, ಫ್ಯಾನ್ಸಿ ಅಂಗಡಿಗಳು ಸೇರಿದಂತೆ ವಿವಿಧ ಅಂಗಡಿಗಳು ಗ್ರಾಹಕರಿಂದ ತುಂಬಿ ತುಳುಕುತ್ತಿದ್ದವು. ಯಾವುದೇ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಹಾಗೂ ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಅಂಗಡಿಕಾರರು ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿರುವುದು ಕಂಡುಬಂದಿತು. ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು ಈ ಪ್ರದೇಶಗಳಿಗೆ ಭೇಟಿ ನೀಡಿ, ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವುದರ ಜೊತೆಗೆ ಜಾಗೃತಿಯನ್ನೂ ಮೂಡಿಸಿದರು. ಇಲ್ಲಿನ ಬಟ್ಟೆ ಅಂಗಡಿಗಳು, ಜ್ಯೂವೆಲರ್ಸ್ ಅಂಗಡಿಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಅಂಗಡಿಗಳಲ್ಲಿ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ವ್ಯಾಪಾರ ವಹಿವಾಟ ನಡೆಸುವುದನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಂಗಡಿಕಾರರು ಹಾಗೂ ಸಾರ್ವಜನಿಕರ ಕಾರ್ಯವೈಖರಿಗೆ ಕಿಡಿಕಾರಿದ ಅಧಿಕಾರಿಗಳು, ನಿಮ್ಮ ಇಂತಹ ವರ್ತನೆಗಳಿಂದಲೇ ಕೊರೊನಾ ವ್ಯಾಪಕವಾಗಿ ಹಬ್ಬುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಳಿಕಾದೇವಿ ರಸ್ತೆಯಲ್ಲಿನ ಬಿಎಸ್‍ ಚನ್ನಬಸಪ್ಪ ಜವಳಿ ಅಂಗಡಿಗಳಿಗೆ ತೆರಳಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ಬಿಎಸ್‍ಸಿ ಅವರ ಎರಡು ಅಂಗಡಿಗಳಲ್ಲಿ ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವುದನ್ನು ಕಂಡು, ಬೇಸರ ವ್ಯಕ್ತಪಡಿಸಿದರು. ಎರಡೂ ಅಂಗಡಿಗಳಿಗೆ ತಲಾ 50 ಸಾವಿರ ರೂ. ದಂಡ ವಿಧಿಸಿ, ಪರಿಸ್ಥಿತಿಯನ್ನು ನಿಭಾಯಿಸಿದಿದ್ದರೆ, ಅಂಗಡಿಗಳ ಪರವಾನಗಿ ರದ್ದುಪಡಿಸಿ, ಮುಚ್ಚಿಸುವ ಎಚ್ಚರಿಕೆ ನೀಡಿದರು. ಅಂಬರ್‍ಕರ್ ಪಂಪಣ್ಣ ಜವಳಿ ಅಂಗಡಿಯಲ್ಲಿಯೂ ಇದೇ ಸ್ಥಿತಿ ಇರುವುದನ್ನು ಕಂಡು, ಇವರಿಗೆ 10 ಸಾವಿರ ರೂ. ದಂಡ ವಿಧಿಸಿದರು. ದಂಡ ಪಾವತಿಸಲು ನಿರಾಕರಿಸಿದ್ದಕ್ಕಾಗಿ ಕರ್ನಾಟಕ ವಿಪತ್ತು ನಿರ್ವಹಣೆ ಕಾಯ್ದೆಯನ್ವಯ ಇವರ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮಾಸ್ಕ್ ಧರಿಸದ ಸಾರ್ವಜನಿಕರಿಗೆ ಜಿಲ್ಲಾಧಿಕಾರಿಗಳು ಸ್ವತಃ ಮಾಸ್ಕ್ ವಿತರಿಸಿದರು. ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸ್ಯಾನಿಟೈಸ್ ಮಾಡಿಕೊಂಡು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ. ನಿಮ್ಮ ಬಗ್ಗೆ ನೀವು ಜಾಗರೂಕರಾಗಿರಿ. ಹಬ್ಬ- ಮದುವೆ ಸಮಾರಂಭಗಳನ್ನು ಕನಿಷ್ಠ 6 ತಿಂಗಳುಗಳ ಕಾಲ ಮಾಡದೇ ಕೋವಿಡ್ ಸೋಂಕು ಹರಡದಂತೆ ಎಚ್ಚರ ವಹಿಸಿ. ಜೀವಕ್ಕಿಂತ ಹಣ, ಸಂಭ್ರಮ ಮುಖ್ಯವಲ್ಲ ಕೋವಿಡ್ ನಿಯಮಗಳನ್ನು ಪಾಲಿಸದವರಿಗೆ ದಂಡ ವಿಧಿಸಲಾಗುತ್ತದೆ. ಸರ್ಕಾರ ಜಾರಿಗೊಳಿಸಿರುವ ಮಾರ್ಗಸೂಚಿಗಳನ್ನು ಬೇಕಾಬಿಟ್ಟಿಯಾಗಿ ಉಲ್ಲಂಘನೆ ಮಾಡುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ಭಾನುವಾರದಂದು ತರಕಾರಿ ಮಾರುಕಟ್ಟೆಗೆ ತೆರಳಿ ಮಾಸ್ಕ್ ಕುರಿತು ಜಾಗೃತಿ ಮೂಡಿಸಲಾಯಿತು. ನಗರದ ಗಡಿಯಾರಕಂಬ, ಕಾಳಿಕಾದೇವಿ ರಸ್ತೆ ಮುಂತಾದ ಜನನಿಬಿಡ ಸ್ಥಳಗಳಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸುತ್ತಿಲ್ಲ, ಸಾಮಾಜಿಕ ಅಂತರ ಪಾಲಿಸುತ್ತಿಲ್ಲ ಎಂಬ ದೂರುಗಳು ಕೇಳಿಬಂದ ಕಾರಣ, ಸೋಮವಾರದಂದು ಇಲ್ಲಿನ ಪ್ರದೇಶಗಳಿಗೆ ಆಕಸ್ಮಿಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಸರ್ಕಾರ ಹಾಗೂ ಜಿಲ್ಲಾಡಳಿತ ಕೋವಿಡ್ ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ಮಾರ್ಗಸೂಚಿಗಳನ್ನು ಅಣಕಿಸುವ ರೀತಿಯಲ್ಲಿ ಇಲ್ಲಿನ ಅಂಗಡಿಕಾರರು ಹಾಗೂ ಸಾರ್ವಜನಿಕರು ವರ್ತಿಸುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಈಗಾಗಲೆ ಯಾವುದೇ ಸಭೆ, ಸಮಾರಂಭ, ಧಾರ್ಮಿಕ ಸಮಾರಂಭಗಳ ಆಯೋಜನೆಯನ್ನು ರದ್ದುಪಡಿಸಲಾಗಿದೆ. ಜನರು ಮತ್ತು ವ್ಯಾಪಾರಸ್ಥರು ನಿಯಮ ಪಾಲನೆ ಮಾಡಬೇಕು. ಉಲ್ಲಂಘಿಸಿದವರಿಗೆ ಪ್ರಥಮ ಹಂತವಾಗಿ ದಂಡ ವಿಧಿಸಲಾಗಿದೆ ಹಾಗೂ ದಂಡ ಕಟ್ಟದವರ ಅಂಗಡಿಯನ್ನು ಮುಚ್ಚಿಸಿ ಮಾಲಿಕರ ವಿರುದ್ಧ ಎಫ್.ಐ,ಆರ್ ದಾಖಲು ಮಾಡಲಾಗುವುದು. ಜನರು ಜಾಗೃತರಾಗಬೇಕು. ಕೇವಲ ಡಿಸಿ, ಎಸ್‍ಪಿ ಹಾಗು ತಹಶ್ದಿಲ್ದಾರ್ ಗಳು ಸೋಂಕು ನಿಯಂತ್ರಣ ಮಾಡಲು ಸಾಧ್ಯವಿಲ್ಲ ಜನರ ಮತ್ತು ವ್ಯಾಪಾರಸ್ಥರು ನಿರ್ಲಕ್ಷಿಸದೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಸಾಮಾಜಿಕ ಅಂತರವಿರದ ಹಾಗೂ ನಿಗಧಿಪಡಿಸಿದ ಜನಕ್ಕಿಂತ ಹೆಚ್ಚು ಜನ ಭಾಗವಹಿದ್ದ ಕಾರಣ 2 ಕಲ್ಯಾಣ ಮಂಟಪಗಳಿಗೆ ತಲಾ ರೂ. 10,000 ದಂತೆ ದಂಡ ವಿಧಿಸಿ ಎಚ್ಚರಿಕೆ ನಿಡಲಾಗಿದೆ. ಮುಂದಿನ ದಿನಗಳಲ್ಲಿ ಮುಂದುವರೆದರೆ ಅವರ ವ್ಯಾಪಾರ ಪರವಾನಗಿಯನ್ನು ರದ್ದು ಪಡಿಸಿ ಅಂತವರ ವಿರುದ್ದ ಕೇಸ್ ದಾಖಲು ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ ಸಾರ್ವಜನಿಕರು ಸಹಕಾರ ನೀಡಬೇಕು ಮತ್ತು ಸರ್ಕಾರದ ನಿಯಮಗಳನನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಸಾರ್ವನಿಕರು ಮತ್ತು ವ್ಯಾಪಾಗಳು ಕರೋನ ನಿಯಮಾವಳಿಗಳನ್ನು ಪಾಲನೆ ಮಾಡಬೇಕು. ಉಲ್ಲಂಘಿಸಿದಲ್ಲಿ ದಂಡ ವಿಧಿಸಾಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನು ಕಠಿಣ ನಿಯಮಗಳನ್ನು ಜಾರಿಗೆ ತರಲಾಗುವುದು ಎಂದರು. ಜಾಗೃತಿ ಅಬಿಯಾನದಲ್ಲಿ ಎ, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ತಹಶೀಲ್ದಾರ್ ಗಿರೀಶ್ ಇದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!