ಕೋವಿಡ್ ನಿಯಂತ್ರಣದಲ್ಲಿ ಪೌರಕಾರ್ಮಿಕರ ಕಾರ್ಯ ಅನನ್ಯ: ಡಿಸಿ ಮಹಾಂತೇಶ್ ಬೀಳಗಿ

IMG-20210923-WA0012

ದಾವಣಗೆರೆ: ಕೋವಿಡ್ ನಿಯಂತ್ರಿಸುವಲ್ಲಿ ಪೌರ ಕಾರ್ಮಿಕರ ಕಾರ್ಯ ಮಹತ್ವದ್ದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಶ್ಲಾಘಿಸಿದರು.

ನಗರದ ನಿಜಲಿಂಗಪ್ಪ ಬಡಾವಣೆಯ ಕರ್ನಾಟಕ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಮಹಾನಗರ ಪಾಲಿಕೆಯಿಂದ ಗುರುವಾರ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಇಡೀ ಜಗತ್ತು ಕೊರೋನ ಸಂಕಷ್ಟದಲ್ಲಿ ಮುಳುಗಿದಾಗ ಪೌರಕಾರ್ಮಿಕರು ನಗರ, ಪಟ್ಟಣಗಳಲ್ಲಿ ರೋಗ ರುಜಿನಗಳಡದಂತೆ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ, ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಮುಂದಾಗಿದ್ದರು. ನಗರದಲ್ಲಿ ಕೋವಿಡ್ ನಿಯಂತ್ರಿಸುವಲ್ಲಿ ಪೌರಕಾರ್ಮಿಕರ ಸೇವೆ ಅನನ್ಯವಾದುದು ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಫ್ಲೈಓವರ್, ಕಾಂಕ್ರೀಟ್ ರಸ್ತೆ, ಫುಟ್‌ಪಾತ್, ಉದ್ಯಾನವನ ಸೇರಿದಂತೆ ಆಕರ್ಷಿತ ಯೋಜನೆಗಳಿಂದ ಇಂದು ದಾವಣಗೆರೆ ಸ್ಮಾರ್ಟ್ ಸಿಟಿ ಆಗಿಲ್ಲ ಬದಲಾಗಿ ಪೌರಕಾರ್ಮಿಕರು ಸ್ಮಾರ್ಟ್ ಆಗಿ ಕೆಲಸ ನಿರ್ವಹಿಸಿದ್ದರಿಂದ ಸ್ಮಾರ್ಟ್ ಸಿಟಿ ಆಗಿದೆ ಎಂದು ಪೌರಕಾರ್ಮಿಕರ ಕಾರ್ಯ ವೈಖರಿಗೆ ಪ್ರಶಂಸಿಸಿದರು.

ಗೃಹಭಾಗ್ಯ ಯೋಜನೆಯಡಿ ಅನೇಕ ಫಲಾನುಭವಿಗಳ ಹೆಸರುಗಳು ಬಿಟ್ಟುಹೋಗಿದ್ದು, ನಿಯಮಾನುಸಾರ ಸಲ್ಲಿಸಿದ ಅರ್ಜಿಗಳನ್ನು ಸರ್ಕಾರಕ್ಕೆ ತಲುಪಿಸುತ್ತೇವೆ. ಹಾಗೂ ಪೌರಕಾರ್ಮಿಕರ ನ್ಯಾಯಯುತವಾದ ಎಲ್ಲಾ ಬೇಡಿಕೆಗಳನ್ನು ಕಾನೂನಾತ್ಮಕವಾಗಿ ಪರಿಶೀಲಿಸಿ ಅವುಗಳನ್ನು ಈಡೇರಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ವಿಶ್ವಾಸ ಮೂಡಿಸಿದರು.

ಭಾರತದ ವಾಸಯೋಗ್ಯ ಪಟ್ಟಿಯಲ್ಲಿ ದಾವಣಗೆರೆ ದೇಶಕ್ಕೆ 9ನೇ ಸ್ಥಾನ ಹಾಗೂ ಕರ್ನಾಟಕ ರಾಜ್ಯಕ್ಕೆ 2ನೇ ಸ್ಥಾನ ಪಡೆದುಕೊಂಡಿದ್ದು, ಇದರಲ್ಲಿ ಪೌರಕಾರ್ಮಿಕರ ಪಾತ್ರ ಮಹತ್ವದಾಗಿದೆ. ಇದು ಮತ್ತಷ್ಟು ಮೇಲ್ಮಟ್ಟಕ್ಕೆ ಹೋಗಬೇಕೆಂದರೆ ಪೌರಕಾರ್ಮಿಕರೊಂದಿಗೆ ಎಲ್ಲರ ಪಾಲ್ಗೊಳ್ಳುವಿಕೆ ಮುಖ್ಯ ಎಂದು ಜಿಲ್ಲಾಧಿಕಾರಿ ಹೇಳಿದರು.

ಮೇಯರ್ ಎಸ್.ಟಿ.ವೀರೇಶ್ ಮಾತನಾಡಿ, ಕೆಲವೇ ದಿನಗಳಲ್ಲಿ ನೇರಪಾವತಿ ನೌಕರರನ್ನು ಖಾಯಂ ಮಾಡಲಾಗುವುದು. ಪೌರಕಾರ್ಮಿಕರ ದೃಷ್ಟಿಯಿಂದ ತಾತ್ಕಾಲಿಕವಾಗಿ ಆಸ್ಪತ್ರೆ ತೆರೆಯಲಾಗುವುದು. ಪೌರಕಾರ್ಮಿಕರ ಸುರಕ್ಷತೆಗೆ ಉನ್ನತ ಗುಣಮಟ್ಟದ ಗ್ಯಾಮ್ ಬೂಟ್, ಗ್ಲೌಸ್, ಮಾಸ್ಕ್, ಯೂನಿಫಾರಂ, ಬ್ಯಾಡ್ಜ್ ಸೇರಿದಂತೆ ಇನ್ನಿತರ ಪರಿಕರಗಳನ್ನು ನೀಡಲಾಗುವುದು ಎಂದರು.

ಅಕ್ಟೋಬರ್ 2 ರಿಂದ ನಿತ್ಯ 25 ರಿಂದ 30 ಪೌರಕಾರ್ಮಿಕರಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಲಾಗುವುದು. ಎಲ್ಲಾ ಪೌರಕಾರ್ಮಿಕರಿಗೂ ವಿಮೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮಹಾ ನಗರಪಾಲಿಕೆ ಉಪಮಹಾಪೌರ ಶಿಲ್ಪ.ಹೆಚ್.ಆರ್., ಆಯುಕ್ತ ವಿಶ್ವನಾಥ ಮುದಜ್ಜಿ, ಉಪಆಯುಕ್ತರಾದ ನಳೀನ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಡಿ.ಗೋಣೆಪ್ಪ,ಪಾಲಿಕೆ ಸದಸ್ಯ ಎ.ನಾಗರಾಜ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ರೇಣುಕಾ ಶ್ರೀನಿವಾಸ್, ಉಮಾ ಪ್ರಕಾಶ್, ಗೀತಾ ದಿಳ್ಯಪ್ಪ, ಎನ್.ನೀಲಗಿರಿಯಪ್ಪ, ಗೋವಿಂದರಾಜ್, ಎಲ್.ಎಮ್.ಹನುಮಂತಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!