03 ನೇ ಅಲೆ ಮಕ್ಕಳ ತಜ್ಞ ವೈದ್ಯರೊಂದಿಗೆ ಸಭೆ ನಡೆಸಿ: ಮಳೆಗಾಲದಲ್ಲಿ ಸಾರ್ವಜನಿಕರಿಗೆ ತೊಂದರೆ ತಪ್ಪಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ ಚಿವ ಬಿ ಎ ಬಸವರಾಜ್

ದಾವಣಗೆರೆ : ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಿ, ಕೋವಿಡ್‍ನ ಪ್ರಕರಣಗಳು ಸದ್ಯ ಇಳಿಮುಖವಾಗುತ್ತಿದ್ದು, ಬರುವ ದಿನಗಳಲ್ಲಿ ಕೋವಿಡ್‍ನ 03ನೇ ಅಲೆ ಬರುವ ಬಗ್ಗೆ ಹಾಗೂ ಮಕ್ಕಳನ್ನು ಹೆಚ್ಚು ಬಾಧಿಸುವ ಸಾಧ್ಯತೆಗಳ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿರುವ ಮಕ್ಕಳ ತಜ್ಞ ವೈದ್ಯರ ಪಟ್ಟಿಯನ್ನು ಈಗಲೆ ಸಿದ್ಧಪಡಿಸಿಕೊಳ್ಳಬೇಕು. ಜನರ ಪ್ರಾಣ ರಕ್ಷಣೆಗೆ ಆದ್ಯತೆ ನೀಡುವ ಕೆಲಸ ಆಗಬೇಕು. ಮುಂದಿನ ವಾರ ಜಿಲ್ಲೆಯ ಎಲ್ಲ ಮಕ್ಕಳ ತಜ್ಞ ವೈದ್ಯರೊಂದಿಗೆ ಸಭೆ ನಡೆಸಿ, ಅವರಿಂದ ಸೂಕ್ತ ಸಲಹೆ, ಅಭಿಪ್ರಾಯಗಳನ್ನು ಸಂಗ್ರಹಿಸಲಾಗುವುದು. ಅಲ್ಲದೆ 03ನೇ ಅಲೆ
ತಡೆಗಟ್ಟಲು ಅಗತ್ಯ ಯೋಜನೆ ರೂಪಿಸಿ, ಅದರಂತೆ ಮುಂಜಾಗ್ರತಾ ಕ್ರಮಗಳನ್ನು ಪ್ರಾರಂಭಿಸಬೇಕು, ಯಾವುದೇ ನ್ಯೂನತೆಗಳಿಗೆ ಅವಕಾಶ ನೀಡದೆ, ನಿರ್ಲಕ್ಷ್ಯ ತೋರದೆ ಜಿಲ್ಲಾಡಳಿತ ಸಜ್ಜಾಗಬೇಕು ಎಂದರು. ಪಾಲಕರೂ ಕೂಡ ಸಂಕಷ್ಟದ ಸಂದರ್ಭದಲ್ಲಿ ಮಕ್ಕಳನ್ನು ಅತ್ಯಂತ ಜಾಗರೂಕತೆಯಿಂದ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಭೀಬೀಳಗಿ ಅವರು, ಈಗಾಗಲೆ ಜಿಲ್ಲೆಯಲ್ಲಿನ ಮಕ್ಕಳ ತಜ್ಞ ವೈದ್ಯರ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಲಾಗಿದ್ದು, ತಮ್ಮ ಅಧ್ಯಕ್ಷತೆಯಲ್ಲಿಯೇ ಮುಂದಿನವಾರ ಸಭೆ ನಡೆಸಲು ಕ್ರಮ ಕೈಗೊಳ್ಳಾಗುವುದು ಎಂದರು.
ಲಾಕ್‍ಡೌನ್ ವಿಸ್ತರಣೆಗೆ ಶಿಫಾರಸು :
ಜೂನ್ 07 ರವರೆಗೆ ಲಾಕ್‍ಡೌನ್ ಜಾರಿಯಲ್ಲಿದ್ದು, ಕೋವಿಡ್ ಪ್ರಕರಣಗಳನ್ನು ಇನ್ನಷ್ಟು ಕಡಿಮೆಗೊಳಿಸಲು ಲಾಕ್‍ಡೌನ್ ಅನ್ನು ಇನ್ನೂ 08 ದಿನಗಳ ಕಾಲ ವಿಸ್ತರಣೆಯಾಗಬೇಕು. ಅಲ್ಲದೆ ಕಠಿಣ ಲಾಕ್‍ಡೌನ್ ಕ್ರಮಗಳನ್ನು ಜಾರಿಗೊಳಿಸಬೇಕು. ಸದ್ಯ 2ನೇ ಅಲೆಯಲ್ಲಿ ಸಾಕಷ್ಟು ಸಾವು ನೋವು ಕಂಡಿದ್ದೇವೆ. 03ನೇ ಅಲೆಯಂತೂ ಬರುವುದೇ ಬೇಡ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು. ಚನ್ನಗಿರಿ ಶಾಸಕರು ಹಾಗೂ ಕೆಎಸ್‍ಎಸ್‍ಡಿಎಲ್ ಅಧ್ಯಕ್ಷ ಮಾಡಾಳ್ ವಿರುಪಾಕ್ಷಪ್ಪ ಅವರು ಮಾತನಾಡಿ, ಕೋವಿಡ್ ನಿಯಂತ್ರಣಕ್ಕೆ ಅಧಿಕಾರಿಗಳು ಹಗಲಿರುಳೆನ್ನದೆ ಶ್ರಮಿಸುತ್ತಿದ್ದಾರೆ. ಕೊರೋನಾ ನಿಯಂತ್ರಣಕ್ಕೆ ಲಾಕ್‍ಡೌನ್ ಅನ್ನು ಕನಿಷ್ಟ ಇನ್ನೂ 15 ದಿನಗಳ ಕಾಲ ವಿಸ್ತರಿಸಬೇಕು, 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವ ಕಾರ್ಯ ಶೀಘ್ರ ಪೂರ್ಣಗೊಳ್ಳಬೇಕು, ಈ ನಿಟ್ಟಿನಲ್ಲಿ ಜಿಲ್ಲೆಗೆ ಸಮರ್ಪಕವಾಗಿ ಲಸಿಕೆ ಪೂರೈಕೆಯಾಗಬೇಕು ಎಂದರು. ಮಾಯಕೊಂಡ ಶಾಸಕ ಪ್ರೊ. ಲಿಂಗಣ್ಣ ಮಾತನಾಡಿ, ಕ್ಷೇತ್ರ ವ್ಯಾಪ್ತಿಯ ಆಸ್ಪತ್ರೆಯಲ್ಲಿ ಕೋವಿಡ್ ಆಕ್ಸಿಜನ್ ಬೆಡ್ ಒದಗಿಸಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಲಾಕ್‍ಡೌನ್ ಅನ್ನು ಜೂ. 07 ರ ನಂತರ ಕನಿಷ್ಟ ಇನ್ನೂ ಒಂದು ವಾರ ಕಾಲ ವಿಸ್ತರಿಸುವಂತೆ ಹಾಗೂ ದಾವಣಗೆರೆ ಜಿಲ್ಲೆಯ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಪೂರೈಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು. ಮಾಯಕೊಂಡದಲ್ಲಿ ಆಕ್ಸಿಜನ್ ಬೆಡ್ ವ್ಯವಸ್ಥೆಯನ್ನು ಮುಂದಿನ ವಾರ ನಾನೇ ಬಂದು ಉದ್ಘಾಟಿಸುತ್ತೇನೆ ಎಂದು ಭರವಸೆ ನೀಡಿದರು.
ಮಳೆಗಾಲ ತೊಂದರೆಯಾಗದಿರಲಿ :
ಶೀಘ್ರದಲ್ಲಿಯೇ ಮಳೆಗಾಲ ಪ್ರಾರಂಭವಾಗಲಿದ್ದು, ಹೆಚ್ಚಿನ ಮಳೆಯಾಗಿ ಸಾರ್ವಜನಿಕರು ತೊಂದರೆ ಅನುಭವಿಸಬಾರದು. ಹೀಗಾಗಿ ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಅಧಿಕಾರಿಗಳು ಹಾಗೂ ಮಹಾನಗರಪಾಲಿಕೆ ಆಯುಕ್ತರು ಜಂಟಿಯಾಗಿ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ, ಹೆಚ್ಚಿನ ಮಳೆಯಾದಲ್ಲಿ ತೊಂದರೆ ಎದುರಾಗಬಹುದಾದ ಸ್ಥಳಗಳನ್ನು ಗುರುತಿಸಿ, ಪರಿಹಾರಕ್ಕಾಗಿ ಕೈಗೊಳ್ಳಬಹುದಾದ ಪರಿಹಾರ ಕ್ರಮಗಳನ್ನು ಈಗಲೆ ಮಾಡಿಕೊಳ್ಳಬೇಕು. ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ವಾರ್ಡ್ ವಾರು ಪರಿಶೀಲನೆ ನಡೆಸಿ, ನ್ಯೂನತೆಗಳನ್ನು ಸರಿಪಡಿಸುವ
ಕಾರ್ಯ ಪ್ರಾರಂಭಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಚನ್ನಗಿರಿ ಶಾಸಕ ಹಾಗೂ ಕೆಎಸ್‍ಎಸ್‍ಡಿಎಲ್ ಅಧ್ಯಕ್ಷ ಮಾಡಾಳ್ ವಿರುಪಾಕ್ಷಪ್ಪ, ಹೊನ್ನಾಳಿ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಮಾಯಕೊಂಡ ಶಾಸಕ ಪ್ರೊ. ಲಿಂಗಣ್ಣ, ಮಹಾನಗರಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿ.ಪಂ. ಸಿಇಒ ಡಾ. ವಿಜಯಮಹಾಂತೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.