ಕೋವಿಡ್ ಟಫ್ ರೂಲ್ಸ್ , ಆದರೆ ಆರ್ಥಿಕ ಚಟುವಟಿಕೆಗಳಿಗೆ ನಿರ್ಬಂಧ ಹೇರುವ ಚಿಂತನೆ ಇಲ್ಲ; ಸರ್ಕಾರದ ಸ್ಪಷ್ಟನೆ

ಹುಬ್ಬಳ್ಳಿ: ಕೋವಿಡ್‌ ಹಿನ್ನೆಲೆಯಲ್ಲಿ, ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಕೈಗೊಂಡ ʼಮಾಕ್‌ ಡ್ರಿಲ್‌ʼ ಕುರಿತು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಪರಿಶೀಲನೆ ನಡೆಸಿದರು. ಜನರು ಸರ್ಕಾರದ ಕ್ರಮಗಳೊಂದಿಗೆ ಕೈ ಜೋಡಿಸಿ ಮುನ್ನೆಚ್ಚರಿಕೆ ಕ್ರಮ ಪಾಲಿಸಬೇಕು. ರಾಜ್ಯದಲ್ಲಿ ಎಂಟೂವರೆ ಲಕ್ಷ ಡೋಸ್‌ ಲಸಿಕೆ ಲಭ್ಯವಿದ್ದು, ಎಲ್ಲರೂ 3 ನೇ ಡೋಸ್‌ ಪಡೆಯಬೇಕು ಎಂದು ಸಚಿವರು ಮನವಿ ಮಾಡಿದರು.

ಧಾರವಾಡದಲ್ಲಿ ಮಾತನಾಡಿದ ಅವರು, ಪ್ರತಿ ಆಸ್ಪತ್ರೆಗಳಲ್ಲಿ 50-60 ಹಾಸಿಗೆಗಳನ್ನು ಮೀಸಲಿಡಲಾಗಿದೆ. ಹುಬ್ಬಳ್ಳಿಯ ಕಿಮ್ಸ್‌ನಲ್ಲಿ 200 ವೆಂಟಿಲೇಟರ್‌ಗಳು, ಪರಿಣತ ವೈದ್ಯರ ತಂಡ, ಸಿಬ್ಬಂದಿ ಇದ್ದಾರೆ. ಔಷಧಿಯ ದಾಸ್ತಾನು ಕೂಡ ಇದೆ. 40 ಕೆಎಲ್‌ನ ಎರಡು ಟ್ಯಾಂಕ್‌ಗಳಿವೆ. ಒಂದನೇ ಮತ್ತು ಎರಡನೇ ಕೋವಿಡ್‌ ಅಲೆಯ ವೇಳೆ ಕಿಮ್ಸ್‌ ಆಸ್ಪತ್ರೆ ಬಹಳ ಯಶಸ್ವಿಯಾಗಿ ಕೆಲಸ ಮಾಡಿದೆ. ಇನ್ನು ಮುಂದೆಯೂ ಜನರಿಗೆ ಉತ್ತಮ ಸೇವೆ ನೀಡಲಿದೆ ಎಂದರು.

ಟಫ್ರೂಲ್ಸ್ಅಲ್ಲ, ಟಫ್ಮೈಂಡ್ಬೇಕು:

ಸರ್ಕಾರ ಟಫ್‌ ರೂಲ್ಸ್‌ಗಳನ್ನು ಮಾಡುವ ಬದಲು ಜನರು ಟಫ್‌ ಮೈಂಡೆಡ್‌ ಆಗಿ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು. ಜನರನ್ನು ರಕ್ಷಣೆ ಮಾಡಲು ಈಗಾಗಲೇ ಸರ್ಕಾರ ದೃಢಸಂಕಲ್ಪ ಮಾಡಿದೆ. ಅದೇ ರೀತಿ, ಜನರು ಕೂಡ ರೋಗವನ್ನು ಎದುರಿಸುವ ದೃಢ ಸಂಕಲ್ಪ ಮಾಡಿ ಮುನ್ನೆಚ್ಚರಿಕೆ ಕ್ರಮ ಪಾಲಿಸಬೇಕು ಎಂದು ಸಚಿವರು ಕಿವಿಮಾತು ಹೇಳಿದರು.

ವಿದೇಶದಿಂದ ಬರುವವರನ್ನು ವಿಮಾನ ನಿಲ್ದಾಣದಲ್ಲಿ ರಾಂಡಮ್‌ ಪರೀಕ್ಷೆ ಮಾಡಲಾಗುತ್ತಿದೆ. ಎರಡು-ಮೂರು ದಿನಗಳಲ್ಲಿ ಹೆಚ್ಚು ಪ್ರಕರಣ ಕಂಡುಬಂದರೆ ನಿರ್ದಿಷ್ಟ ದೇಶಗಳ ಪ್ರಯಾಣಿಕರಿಗೆ ಪರೀಕ್ಷೆ ಮಾಡಲಾಗುವುದು ಎಂದರು.

ಇದೇ ವೇಳೆ, ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಮಾತನಾಡಿದ ಸಚಿವರು, ಇಲ್ಲಿ ಆರೋಗ್ಯ ಸಿಬ್ಬಂದಿ ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದ್ದಾರೆ. ಸೋಂಕಿತರ ಸಂಖ್ಯೆ ಹೆಚ್ಚಿದರೂ ಎಲ್ಲರಿಗೂ ಗುಣಮಟ್ಟದ ಚಿಕಿತ್ಸೆ ನೀಡಿ ಗುಣಮುಖರಾಗುವಂತೆ ನಮ್ಮ ಸಿಬ್ಬಂದಿ ಮಾಡಲಿದ್ದಾರೆ. ಕೋವಿಡ್‌ ಚಿಕಿತ್ಸೆಗೆ ಪೂರಕವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಯಾವೆಲ್ಲ ರೀತಿಯ ಕ್ರಮ ವಹಿಸಬೇಕೆಂದು ಪರಿಶೀಲಿಸಿ ಸೂಚಿಸಲಾಗುವುದು ಎಂದರು.

ಕಳೆದ ಎರಡು ವರ್ಷಗಳಿಗಾಗಿ 10 ಸಾವಿರಕ್ಕೂ ಅಧಿಕ ಸಿಬ್ಬಂದಿಯನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗಿತ್ತು. ಈಗ ಅಂತಹ ಅಗತ್ಯ ಇಲ್ಲ. ಆದರೆ ಸೋಂಕಿತರ ಸಂಖ್ಯೆ ಹೆಚ್ಚಾದರೆ ತಾತ್ಕಾಲಿಕವಾಗಿ ಸಿಬ್ಬಂದಿಯನ್ನು ನೇಮಿಸಲಾಗುವುದು. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಅನೇಕ ಸಿಬ್ಬಂದಿಯನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗಿದೆ. ಆದರೆ ಅವರನ್ನು ಖಾಯಂ ಮಾಡಲು ನಿಯಮಗಳಲ್ಲಿ ಅವಕಾಶವಿಲ್ಲ. ಆದರೆ ಯಾರನ್ನೂ ಕೆಲಸದಿಂದ ತೆಗೆದುಹಾಕಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಯಾವುದೇ ಚಟುವಟಿಕೆಗೆ ನಿರ್ಬಂಧ ವಿಧಿಸಿಲ್ಲ. ಆದರೆ ಮಾಸ್ಕ್‌ ಧರಿಸುವುದು, ಮೂರನೇ ಡೋಸ್‌ ಪಡೆಯುವುದು, ಒಳಾಂಗಣ ಸ್ಥಳಗಳಲ್ಲಿ ಅಂತರ ಕಾಯ್ದುಕೊಳ್ಳುವುದು ಮೊದಲಾದ ಕ್ರಮಗಳಿಗೆ ಸೂಚನೆ ನೀಡಲಾಗಿದೆ. ಈಗ ದೇಶದಲ್ಲಿ ಆರ್ಥಿಕ ಪುನಶ್ಚೇತನ ಆಗುತ್ತಿದೆ. ಆದ್ದರಿಂದ ಆರ್ಥಿಕ ಚಟುವಟಿಕೆಗಳಿಗೆ ನಿರ್ಬಂಧ ಹೇರುವ ಯಾವುದೇ ಚಿಂತನೆ ಇಲ್ಲ. ಜೀವವೂ ಮುಖ್ಯ ಹಾಗೂ ಜೀವನವೂ ಮುಖ್ಯವಾಗುವಂತೆ ಕ್ರಮ ವಹಿಸಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಎಂಟೂವರೆ ಲಕ್ಷ ಡೋಸ್‌ ಕೋವಿಡ್‌ ಲಸಿಕೆ ಲಭ್ಯವಿದೆ. ಇನ್ನೂ 20-25 ಲಕ್ಷ ಡೋಸ್‌ ತರಿಸಲಾಗುವುದು. ಕೇಂದ್ರ ಸರ್ಕಾರ ಲಸಿಕೆ ನೀಡಲು ತಯಾರಿದೆ. ಗ್ರಾಮ ಪಂಚಾಯಿತಿ ಮಟ್ಟದಿಂದಲೇ ಲಸಿಕಾಕರಣದ ಪ್ರಮಾಣ ಹೆಚ್ಚಿಸಲಾಗುವುದು ಎಂದು ತಿಳಿಸಿದರು.

 

Leave a Reply

Your email address will not be published. Required fields are marked *

error: Content is protected !!