ದಾನಿಗಳ ನೆರವಿನಿಂದ ಖಾಸಗಿ ಶಿಕ್ಷಕರಿಗೆ ಸಹಾಯಹಸ್ತ

IMG-20210709-WA0027

 

ದಾವಣಗೆರೆ.ಜು.೯; ಅನುದಾನ ರಹಿತ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಇಂದಿನ ದಿನಮಾನಗಳಲ್ಲಿ ಕಷ್ಟವಾಗಿದ್ದು, ಅಲ್ಲಿ ಕೆಲಸ ಮಾಡುವ ಎಲ್ಲಾ ಹಂತದ ಸಿಬ್ಬಂದಿಗಳಿಗೆ ವೇತನ ನೀಡಲು ಆದಾಯ ಬೇಕಾಗುತ್ತದೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೇ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ಧಾರೆ. ಖಾಸಗಿ ಶಿಕ್ಷಣ ಇರುವುದರಿಂದಲೇ ಹೆಚ್ಚು ಜನ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗುತ್ತಿದೆ ಎಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ್ ಹೇಳಿದರು.ನಗರದ ಜಿಎಂಐಟಿ ಕಾಲೇಜಿನ ಆವರಣದಲ್ಲಿ ಭಾರತೀಯ ಜನತಾಪಾರ್ಟಿ, ಡಾ.ವೈ.ಎ.ಎನ್ ಮತ್ತು ಚಿದಾನಂದ ಎಂ.ಗೌಡ ಸ್ನೇಹಿತರ ಬಳಗದಿಂದ ಆಯೋಜಿಸಲಾಗಿದ್ದ ಕೋವಿಡ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾದ ಅನುದಾನ ರಹಿತ ಶಿಕ್ಷಣಸಂಸ್ಥೆಗಳ ಶಿಕ್ಷಕರಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದರು.

ಒಂದು ವೇಳೆ ರಾಜ್ಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಇಲ್ಲವೆಂದುಕೊಂಡಿದ್ದರೆ ಇವೆಲ್ಲವನ್ನೂ ಹೊಂದಿಸಲು ರಾಜ್ಯ ಸರ್ಕಾರಗಳಿಗೆ ಸಾಧ್ಯವಾಗುತ್ತಿರಲಿಲ್ಲ. ಎಷ್ಟೋ ಸಾವಿರ ಕೋಟಿಗಳನ್ನು ಮೂಲಭೂತ ಸೌಲಭ್ಯಕ್ಕಾಗಿ ನೀಡಬೇಕಾಗಿತ್ತು. ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದೂ ಕೂಡ ಸರ್ಕಾರದ ಭಾಗವಾಗಿದೆ ಎಂದರೆ ತಪ್ಪಾಗಲಾರದು. ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ರಾಜ್ಯದಲ್ಲಿ ಮಾತ್ರವಲ್ಲದೇ ದೇಶದಲ್ಲಿ ಹೆಚ್ಚು ಜನ ಪ್ರತಿಭಾವಂತರಾಗಿ ಉದ್ಯೋಗ ಪಡೆಯಲು ಅನುಕೂಲ ಅಗಿದೆ ಎಂದರು.

ಪ್ರತಿಭಾವಂತರು ಉದ್ಯೋಗಿಗಳಾದ ನಂತರ ಕೇವಲ ಅವರು ಪಡೆಯುವ ಸಂಬಳ ಮುಖ್ಯವಲ್ಲ. ಅವರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದರೆ ಮಾತ್ರ ಸಂಸ್ಥೆಗಳು, ಸರ್ಕಾರ ಬೆಳೆಯಲು ಸಾಧ್ಯ. ಕೋವಿಡ್ ಬಂದು ಇದೀಗ ಹೋಗುತ್ತಿದೆ. ಆದರೆ ಯಾರೂ ಕೂಡ ಮೈ ಮರೆಯಬಾರದು. ಹೊರಗೆ ಬಂದಾಗ ಮಾಸ್ಕ್ ಬಳಸಿ, ಸಾಮಾಜಿಕ ಅಂತರ ಕಾಪಾಡಿ, ಸೋಂಕು ನಿವಾರಣ ದ್ರಾವಣ ಬಳಸಿ ಕೊರೋನಾ ಓಡಿಸಬೇಕೆಂದು ಕರೆ ನೀಡಿದರು.

ಆಗ್ನೇಯ ಶಿಕ್ಷಕರ ಕ್ಷೇತ್ರದ ಡಾ.ವೈ.ನಾರಾಯಣಸ್ವಾಮಿ ಮಾತನಾಡಿ, ಪ್ಲೇಗ್‌ಗಿಂತಲೂ ಭೀಕರವಾದ ಕಾಯಿಲೆ ಕೊರೋನಾ, ಒಬ್ಬರ ಮುಖ ಇನ್ನೊಬ್ಬರು ನೋಡದಂತಹ ಕಾಯಿಲೆ. ಪ್ರಪಂಚದಲ್ಲಿ ಇದಕ್ಕಿಂತ ಭೀಕರ ಖಾಯಿಲೆ ಮತ್ತೊಂದಿಲ್ಲ ಎನ್ನಿಸುತ್ತದೆ. ನನ್ನ ಕ್ಷೇತ್ರದಲ್ಲಿ 120ರಿಂದ 130 ಜನ ಶಿಕ್ಷಕರು ಬಲಿಯಾಗಿದ್ದಾರೆ. ಎಲ್ಲಾ ಕ್ಷೇತ್ರಗಳು ಛಿದ್ರಛಿದ್ರಗೊಂಡಿವೆ. ಅದರಲ್ಲೂ ಶೈಕ್ಷಣಿಕ ಕ್ಷೇತ್ರ ವಲಯವಂತೂ ದಿಕ್ಕೆಟ್ಟು ಹೋಗಿದೆ. ಮಾನಸಿಕವಾಗಿ ಬೆಂದು ಜೀರ್ಣ ಮಾಡಿಕೊಳ್ಳಲಾರದ ಸ್ಥಿತಿ ತಲುಪಿದೆ ಎಂದರು.

ಶಾಲೆಗಳು ಇಲ್ಲದ ಕಾರಣ ಮಕ್ಕಳು ಖಿನ್ನತೆಗೆ ಒಳಗಾಗಿದ್ದಾರೆ. ಹಳ್ಳಿಗಳಲ್ಲಿ ಬಾಲಕಾರ್ಮಿಕ ಪದ್ದತಿ ಆರಂಭವಾಗಿದೆ. ಜೀತಪದ್ದತಿ, ಬಾಲ್ಯ ವಿವಾಹ ಆರಂಭವಾಗಿದೆ. ದೊಡ್ಡ ಪ್ರಮಾಣದಲ್ಲಿ ಮಕ್ಕಳು ಮೊಬೈಲ್‌ಗೆ ದಾಸರಾಗಿದ್ದಾರೆ. ಮೊಬೈಲ್ ಇಲ್ಲದೇ ಜೀವ ಇಲ್ಲ ಎನ್ನುವ ಪರಿಸ್ಥಿತಿಗೆ ಬಂದಿದ್ಧಾರೆ. ಯಾರಿಗೂ ಹೇಳದ ಸ್ಥಿತಿಯಲ್ಲಿ ನಾವುಗಳು ಬದುಕಿದ್ದೇವೆ. ಈ ನಿಟ್ಟಿನಲ್ಲಿ ಅಲ್ಪ ಪ್ರಮಾಣದ ಸೇವೆ ಸಲ್ಲಿಸಲು ಆಹಾರದ ಕಿಟ್ ಒದಗಿಸಲಾಗುತ್ತಿದೆ. ಅದನ್ನು ಶಿಕ್ಷಣ ಇಲಾಖೆ ಸರಿಯಾದ ರೀತಿಯಲ್ಲಿ ಹಂಚಿಕೆ ಮಾಡಬೇಕು. ಅದರಲ್ಲಿ ಯಾವುದೇ ಗೋಲ್‌ಮಾಲ್ ಮಾಡಬಾರದು ಎಂದರು.

ಕಾರ್ಯಕ್ರಮದಲ್ಲಿ ಆಗ್ನೇಯ ಪಧವೀಧರರ ಕ್ಷೇತ್ರದ ಸದಸ್ಯ ಚಿದಾನಂದ ಎಂ.ಗೌಡ, ಮಾಜಿ ಶಾಸಕ ಬಸವರಾಜನಾಯ್ಕ, ಲಿಂಗರಾಜ, ಜಯಣ್ಣ, ಸಹನಾರವಿ, ಗೀತಾ ಡಿಳ್ಳಪ್ಪ, ಪರಮೇಶ್ವರಪ್ಪ, ಶ್ರೀನಿವಾಸ್, ರೇವಣಸಿದ್ದಪ್ಪ, ರಾಮಮೂರ್ತಿ, ಸಾಂಬಶಿವಯ್ಯ, ರಾಮರೆಡ್ಡಿ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!