ನೃತ್ಯಗಳು ಸಾಮಾಜಿಕ ಬದಲಾವಣೆಗೆ ಸಹಕಾರಿಯಾಗಿದೆ – ಡಾ ಎಚ್ ಕೆ ಎಸ್ ಸ್ವಾಮಿ, 

IMG_20241022_133711
ಚಿತ್ರದುರ್ಗ:- ನೃತ್ಯಗಳು ಮಕ್ಕಳಲ್ಲಿ, ಯುವ ಜನಾಂಗದಲ್ಲಿ, ಸಂಘಟನಾ ಶಕ್ತಿಯನ್ನು ಹೆಚ್ಚಿಸಿ, ತಮ್ಮಲ್ಲಿರುವ ಕೌಶಲ್ಯಗಳನ್ನು ಪ್ರದರ್ಶಿಸಿ, ಭಾವನೆಗಳನ್ನು ವ್ಯಕ್ತಪಡಿಸಿ, ಕೈಕಾಲುಗಳ ಚಲನಗಳ ಮುಖಾಂತರ ದೇಹದ ಆರೋಗ್ಯವನ್ನು ವೃದ್ಧಿಸಿಕೊಂಡು, ಸಮಾಜಕ್ಕೆ ಉತ್ತಮ ಪ್ರಜೆಗಳಾಗಿ ಬದುಕಲು ಸಹಕಾರಿಯಾಗುತ್ತವೆ.  ಮಕ್ಕಳಿದ್ದಾಗಲೇ ನೃತ್ಯಗಳ ತರಬೇತಿ ನೀಡಿದರೆ, ಆರೋಗ್ಯವಂತ ಯೋಜನಾಂಗವನ್ನು ಸೃಷ್ಟಿಸಲು ಸಹಕಾರಿಯಾಗುತ್ತದೆ,  ನೃತ್ಯಗಳ ಮುಖಾಂತರ ಜನಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲು ಸಹಕಾರಿಯಾಗುತ್ತದೆ ಎಂದು ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷರಾದ ಡಾ. ಎಚ್. ಕೆ. ಎಸ್. ಸ್ವಾಮಿಯವರು ಕರೆ ನೀಡಿದ್ದಾರೆ.
ಅವರು ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆಯಲ್ಲಿರುವ ಶ್ರೀ ಸದ್ದಲೇ ಶಿಕ್ಷಣ ಮತ್ತು ಸಾಂಸ್ಕೃತಿಕ ಸಂಸ್ಥೆಯಾದ ಅಗ್ನಿ ಡ್ಯಾನ್ಸ್ ಅಕಾಡೆಮಿ ಆಯೋಜಿಸಿದ್ದ ಎಂಟು ದಿನಗಳ ಉಚಿತ ನೃತ್ಯ ತರಬೇತಿ ಕಾರ್ಯಕ್ರಮದ ಮುಕ್ತಾಯ ಸಮಾರಂಭದಲ್ಲಿ ನೃತ್ಯ ನಿರ್ದೇಶಕರಾದ ಜಮದಗ್ನಿಯವರನ್ನು ಸನ್ಮಾನಿಸುತ್ತಾ ಮಾತನಾಡುತ್ತಿದ್ದರು.
ನೃತ್ಯಗಳು ಜನರಲ್ಲಿ ಹೆಚ್ಚಿನ ಹೃದಯದ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ, ಸ್ನಾಯುಗಳನ್ನ ವೃದ್ಧಿಸುತ್ತದೆ, ಹೃದಯದ  ಆರೋಗ್ಯವನ್ನು ಸುಧಾರಿಸುತ್ತದೆ, ಚಲನಶೀಲ ಸ್ಪೂರ್ತಿದಾಯಕ ದೇಹವನ್ನು ಪಡೆಯಲು ನೃತ್ಯಗಳು ಸಹಕಾರಿಯಾಗಿದೆ. ಮೆದುಳಿಗೆ ಉತ್ತಮ ವ್ಯಾಯಾಮ ದೊರಕುತ್ತದೆ ಮತ್ತು ಮನುಷ್ಯನ ಒತ್ತಡವನ್ನು ಕಡಿಮೆ ಮಾಡಿ ಸಂತೋಷ ಮತ್ತು ಖುಷಿಯನ್ನು ನೀಡುತ್ತದೆ ಎಂದರು.
ಈಗಲೂ ಸಹ ಬಹಳಷ್ಟು ಮಕ್ಕಳು ನೃತ್ಯ ಶಾಲೆಗಳಿಗೆ ಸೇರ್ಪಡೆಯಾಗದೆ ಹಿಂದೆ ಉಳಿದಿದ್ದಾರೆ, ಅಂತವರಿಗೆ ಕನಿಷ್ಠಪಕ್ಷ ಪ್ರತಿಯೊಂದು ನೃತ್ಯ ಶಾಲೆಗಳು, ವರ್ಷಕ್ಕೆ ಒಂದೆರಡು ಉಚಿತ ನೃತ್ಯ ತರಗತಿಗಳನ್ನ ಏರ್ಪಡಿಸಿ, ಅವರಲ್ಲಿ ನೃತ್ಯ ಕಲೆಯನ್ನು ಜಾಗೃತಗೊಳಿಸಿಕೊಟ್ಟರೆ, ಮುಂದೆ ಅವರೊಂದು ದಿನ ನೃತ್ಯವನ್ನೇ ತಮ್ಮ ಜೀವನವನ್ನಾಗಿ ರೂಪಿಸಿಕೊಂಡು, ಬದುಕನ್ನು ರೂಪಿಸಿಕೊಂಡು, ಸಮಾಜದಲ್ಲಿ ಸುಧಾರಣೆ ತರಲು ಅನುಕೂಲಕರವಾಗುತ್ತದೆ ಎಂದರು.
ನೃತ್ಯಗಳ ಮುಖಾಂತರ ಸಾಮಾಜಿಕ ಬದಲಾವಣೆ ಮಾಡಲು ಸಹ ಅನುಕೂಲಕರವಾಗಿದೆ. ರಸ್ತೆ ನಿಯಮಗಳ ಉಲ್ಲಂಘನೆ, ರಸ್ತೆ ಸುರಕ್ಷತೆಯ ಬಗ್ಗೆ, ಯುವಜನರಲ್ಲಿರುವ ದೃಶ್ಚಟಗಳ ನಿವಾರಣೆಗೆ, ಮಧ್ಯಪಾನ, ತಂಬಾಕು ಸೇವನೆ ನಿವಾರಣೆಗೆ, ಬಾಲ್ಯ ವಿವಾಹ ನಿವಾರಣೆಗೆ, ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸಲು ನೃತ್ಯಗಳನ್ನು ಸಹ ಬಳಸಿಕೊಳ್ಳಬಹುದು. ಬಹಳಷ್ಟು ಪರಿಸರ ಸ್ನೇಹಿ ಚಟುವಟಿಕೆಗಳನ್ನು ಸಹ ನೃತ್ಯಗಳ ಮುಖಾಂತರ ಪ್ರದರ್ಶಿಸಿ ಜನರಲ್ಲಿ ಜಾಗೃತಿ ಮೂಡಿಸಿ, ಪರಿಸರ ಸಂರಕ್ಷಣೆ ಬಗ್ಗೆ ಸಹ ಕಾರ್ಯಕ್ರಮಗಳನ್ನ ಆಯೋಜಿಸಲು ಅನುಕೂಲಕರವಾಗುತ್ತದೆ ಎಂದರು.
ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ, ಭ್ರಷ್ಟಾಚಾರ, ಅಸಮಾನತೆ, ಮೇಲು ಕೀಳು ತೊಲಗಿಸಲು ಸಹ ನೃತ್ಯಗಳ ಮುಖಾಂತರ ನಾವು ಪ್ರದರ್ಶನಗಳನ್ನು ಏರ್ಪಡಿಸಿ, ಜನರಲ್ಲಿ ಜಾಗೃತಿ ಮೂಡಿಸಬಹುದು. ಇದಕ್ಕಾಗಿ ಸರ್ಕಾರ ಹೆಚ್ಚಿನ ಮಟ್ಟದ ಸಹಕಾರವನ್ನು ನೀಡಿ, ಇಂತಹ ನೃತ್ಯ ಕೇಂದ್ರಗಳನ್ನ ಸಾಮಾಜಿಕ ಬದಲಾವಣೆಗೆ ಬಳಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಅಗ್ನಿ ಡ್ಯಾನ್ಸ್ ಅಕಾಡೆಮಿಯ ಕೊರಿಯೋಗ್ರಾಫರ್ ಮತ್ತು ಮುಖ್ಯಸ್ಥರಾದ ಜಮಧಾಗ್ನಿಯವರು ಮಾತನಾಡುತ್ತಾ ಯುವ ಜನಾಂಗ ಮತ್ತು ಮಕ್ಕಳಲ್ಲಿರುವ ಕಲೆಯನ್ನ, ಸಾಂಸ್ಕೃತಿಕ ಚಟುವಟಿಕೆಯನ್ನ, ಹೊರ ತರಲು ನೃತ್ಯಗಳು ಸಹಕಾರಿಯಾಗಿವೆ. ಪಾಶ್ಚಿಮಾತ್ಯ ನೃತ್ಯ, ಜಾನಪದ ನೃತ್ಯ, ಕೋಲಾಟ, ಭರತನಾಟ್ಯ, ಯಕ್ಷಗಾನ ಹಾಗೂ ಇನ್ನಿತರ ವೈವಿಧ್ಯಮಯ ನೃತ್ಯ ಚಟುವಟಿಕೆಗಳನ್ನ ಮಕ್ಕಳಿಗೆ ಬೋಧಿಸಿ, ಅವರಲ್ಲಿರುವ ಕಲೆಯನ್ನ ಅರಳಿಸಿ, ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿ ನಿರ್ಮಿಸಲು ಸಹಕಾರಿಯಾಗಿದೆ. ಪ್ರತಿ ಮಗುವಿನಲ್ಲೂ ಸಹ ಒಂದು ಕಲೆ ಅಡಗಿರುತ್ತದೆ, ಅದನ್ನು ಹೊರ ತೆಗೆಯಲು ವೃತ್ತ ಕೇಂದ್ರಗಳು ಪ್ರಯತ್ನಿಸಬೇಕಾಗಿದೆ. ಅದಕ್ಕಾಗಿ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಮಕ್ಕಳಲ್ಲಿ ಕನಿಷ್ಠ ಪಕ್ಷ ವಾರಕ್ಕೆ ಒಂದೆರಡು ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಿ, ತರಬೇತಿಯನ್ನು ನೀಡಿದರೆ, ಮಗುವಿನ ಸಮೃದ್ಧ ಅಭಿವೃದ್ಧಿಗೆ ಸಹಕಾರಿಯಾಗುವುದು ಎಂದರು.
ಉಚಿತ ನೃತ್ಯ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಾದ ಪ್ರೇರಣಾ ಎಚ್.ಎಸ್., ನೇಹಾ, ಮೌಲ್ಯ, ಅಭಿನವ್, ಉಷಾರೇಖಾ ಹಾಗೂ ಇನ್ನಿತರ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ನೃತ್ಯಗಳನ್ನು ಪ್ರದರ್ಶಿಸಿ, ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ನೃತ್ಯದ ಸವಿಯನ್ನ ಉಣಬಡಿಸಲಾಯಿತು.

Leave a Reply

Your email address will not be published. Required fields are marked *

error: Content is protected !!