ಜಾತಿರಹಿತ ಬೌದ್ಧಧರ್ಮಕ್ಕೆ ಸರ್ಟಿಫಿಕೇಟ್ ನೀಡಲು ದರ್ಶನ್ ಆಗ್ರಹ
ಬೆಂಗಳೂರು, ಮಾ.09: ಜಾತಿ ರಹಿತವಾಗಿ ಬೌದ್ಧ ಧರ್ಮಕ್ಕೆ ದರ್ಮದ ಸರ್ಟಿಫಿಕೇಟ್ ನೀಡಬೇಕು ಎಂದು ದಿ ಬೌದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ಯುವ ಘಟಕದ ರಾಜ್ಯಾಧ್ಯಕ್ಷ ದರ್ಶನ್ ಬಿ ಸೋಮಶೇಖರ್ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು 1956 ರಲ್ಲಿ ದಲಿತ ಸಮುದಾಯದ ಸುಮಾರು 10 ಲಕ್ಷ ಜನರನ್ನು ಬೌದ್ಧ ಧರ್ಮಕ್ಕೆ ಮತಾಂತರ ಮಾಡಿಸಿದರು. ಜಾತಿ ರಹಿತ ಸಮಾಜ ಕಟ್ಟುವುದು ಅಂಬೇಡ್ಕರ್ ಕನಸಾಗಿತ್ತು. ಅದು ಇಂದಿಗೂ ನನಸಾಗಿಲ್ಲ. ಈಗ ಅವರೇ ಕಟ್ಟಿ ಬೆಳೆಸಿದ ದಿ ಬೌದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ಸಂಸ್ಥೆ ಈಗ ಕರ್ನಾಟಕದಲ್ಲಿ ಮತ್ತಷ್ಟು ಕಾರ್ಯಪ್ರವೃತ್ತವಾಗಿದೆ. ಹೆಚ್ಚು ಆಕ್ಟಿವ್ ಆಗಿ ಈಗ ಜಾತಿರಹಿತ ಸಮಾಜ ಕಟ್ಟುವ ಕೆಲಸವನ್ನು ಮಾಡುತ್ತಿದ್ದೇವೆ. ಒಂದು ಮಾದರಿ ಸಮಾಜ ಕಟ್ಟುವುದು ನಮ್ಮ ಗುರಿ ಎಂದರು.
ಅನೇಕ ಜನ ಬೌದ್ಧ ಧರ್ಮ ಸೇರುತ್ತಿದ್ದಾರೆ. ಆದರೆ ಬೌದ್ಧ ಧರ್ಮಕ್ಕೆ ಕಾನೂನಾತ್ಮಕವಾಗಿ ಜಾತಿ ರಹಿತ ಮಾನ್ಯತೆ ಸಿಗುತ್ತಿಲ್ಲ. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋದಾಗ ಅದನ್ನು ಕಾನೂನಾತ್ಮಕವಾಗಿ ಒಪ್ಪಿಕೊಳ್ಳುತ್ತಿಲ್ಲ. ಹೀಗಾಗಿ ನಮ್ಮ ಸಂಘಟನೆ ಇದರ ಬಗ್ಗೆ ಹೋರಾಟ ಮಾಡುತ್ತಿದೆ. ಕರ್ನಾಟಕ ಸರ್ಕಾರ ಬೌದ್ಧ ಧರ್ಮದವರಿಗೆ ಜಾತಿ ಹೆಸರು ಹೆಸರಿಸದೆ ಧರ್ಮದ ಸರ್ಟಿಫಿಕೇಟ್ ನೀಡಬೇಕು ಎಂದು ಒತ್ತಾಯಿಸಿದರು.
ಇದೇವೇಳೆ ಮಾತನಾಡಿದ ಖಜಾಂಚಿ ಬಿ.ಆರ್. ಕೃಷ್ಣಯ್ಯ ಮಾತನಾಡಿ, ಇಂದು ಕೆಲವರ ಕುತಂತ್ರದಿಂದ ಜಾತಿ ವ್ಯವಸ್ಥೆ ಆಳವಾಗಿ ಬೇರೂರಿದೆ. ಇದರಿಂದ ಜನಸಾಮಾನ್ಯರಲ್ಲಿ ನೆಮ್ಮದಿಯೇ ಮಾಯವಾಗಿದೆ ಎಂದು ಹೇಳಿದರು.
ಇಂದು ಜಾತಿ ಹೆಸರಿನಲ್ಲಿ ಭಾರತ ಛಿದ್ರ ಛಿದ್ರವಾಗುತ್ತಿದೆ. ಮನಸ್ಸುಗಳೂ ಕೂಡ ಒಡೆದು ಹೋಗುತ್ತಿವೆ. ನಾವು ನೆಮ್ಮದಿಯ ರಾಷ್ಟ್ರ, ನೆಮ್ಮದಿಯ ರಾಜ್ಯ ಕಟ್ಟಬೇಕಿದೆ. ಇದು ಅಂಬೇಡ್ಕರ್ ಕನಸು. ಜಾತಿ ಧರ್ಮದ ಅಫೀಮಿನಲ್ಲಿ ತೇಲುತ್ತಿರುವ ಯುವ ಜನತೆಯನ್ನು ರಕ್ಷಣೆ ಮಾಡಬೇಕಿರುವ ತುರ್ತು ಅಗತ್ಯವಿದೆ ಎಂದು ಹೇಳಿದರು.
ಬಿಎಸ್ಐ ಸಂಘಟನೆ ಮುಖಂಡರಾದ ರಮೇಶ್, ಲಿಂಗರಾಜು, ಸೋಮಶೇಖರ್, ಸುರೇಶ್, ಜಯಶಂಕರ್ ಮತ್ತಿತರರು ಉಪಸ್ಥಿತರು.