ದಾವಣಗೆರೆ: ಮೇ.27ಕ್ಕೆ ಬೆಳಗುತ್ತಿಯಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ

ದಾವಣಗೆರೆ : ಸರ್ಕಾರದ ನಿರ್ದೇಶನದಂತೆ ಮೇ. 27 ರಂದು ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಕಸಬಾ ಹೋಬಳಿ ಹಿರೆಗೋಣಿಗೆರೆ ಗ್ರಾಮ ಮತ್ತು ನ್ಯಾಮತಿ ತಾಲ್ಲೂಕಿನ ಬೆಳಗುತ್ತಿ ಹೋಬಳಿಯ ಬೆಳಗುತ್ತಿ ಗ್ರಾಮದಲ್ಲಿ “ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ನ್ಯಾಮತಿ ತಾಲ್ಲೂಕಿನ ಬೆಳಗುತ್ತಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯವನ್ನು ಮಾಡಲಿದ್ದಾರೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಂದಾಯ ಇಲಾಖೆಯ ವಿವಿಧ ಸೇವೆಗಳು ಹಾಗೂ ಯೋಜನೆಗಳಾದ ಪೌತಿ ಖಾತೆ ಬದಲಾವಣೆ, ಸಾಮಾಜಿಕ ಭದ್ರತಾ ಯೋಜನೆ ಪಿಂಚಣಿ ಸೌಲಭ್ಯ, ಅತಿವೃಷ್ಟಿ/ಬರ ಪರಿಹಾರ, ಪಡಿತರ ಚೀಟಿ, ಪಹಣಿ ಲೋಪದೋಷ ತಿದ್ದುಪಡಿ, ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಮತ್ತು ಈಗಾಗಲೇ ಸಾರ್ವಜನಿಕರಿಂದ ಸ್ವೀಕರಿಸಲಾಗಿರುವ ಅರ್ಜಿಗಳನ್ನು ಗ್ರಾಮ ವಾಸ್ತವ್ಯದಲ್ಲಿ ಇತ್ಯರ್ಥಪಡಿಸಲಾಗುವುದು.
ಉಳಿದಂತೆ ದಾವಣಗೆರೆ ತಾಲ್ಲೂಕು ಅಣಜಿ ಹೋಬಳಿಯ ತುಂಬಿಗೆರೆ, ಹರಿಹರ ತಾಲ್ಲೂಕಿನ ಕಸಬಾ ಹೋಬಳಿಯ ಕಡ್ಲೆಗೊಂದಿ, ಚನ್ನಗಿರಿ ತಾಲ್ಲೂಕಿನ ಬಸವಾಪಟ್ಟಣ-1 ಹೋಬಳಿಯ ಕೋಟೇಹಾಳ್, ಜಗಳೂರು ತಾಲ್ಲೂಕಿನ ಬಿಳಿಚೋಡು ಹೋಬಳಿಯ ದಿದ್ದಿಗೆ ಗ್ರಾಮಗಳಲ್ಲಿ ತಹಶೀಲ್ದಾರರುಗಳು ತಮ್ಮ ತಾಲ್ಲೂಕುಗಳಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
                         
                       
                       
                       
                       
                       
                       
                      