ದಾವಣಗೆರೆ ಜಿಲ್ಲೆಗೆ ಹೊಸ ಕೊವಿಡ್ ಮಾರ್ಗಸೂಚಿ ಪ್ರಕಟಿಸಿದ ಡಿಸಿ: ಜಿಲ್ಲೆಯ 25 ಗ್ರಾಮಗಳು ಕಂಟೈನಮೆಂಟ್ ಜೋನ್ ವ್ಯಾಪ್ತಿಗೆ
![Davanagere_dc_sp_photo_(2)[1]](https://garudavoice.com/wp-content/uploads/2021/06/Davanagere_dc_sp_photo_21.jpg)
ದಾವಣಗೆರೆ: ಸರ್ಕಾರದ ನಿರ್ದೇಶನದಂತೆ ಇದೇ ತಿಂಗಳ 14ರ ಮಧ್ಯಾಹ್ನ 12ರಿಂದ 21ರ ಬೆಳಿಗ್ಗೆ 6ರವರೆಗೆ ಲಾಕ್‌ಡೌನ್ ಮುಂದುವರಿಕೆ ಮಾಡಿರುವುದಾಗಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶಿಸಿದ್ದಾರೆ.
ಜಿಲ್ಲಾಡಳಿತ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಇದೇ ತಿಂಗಳ 14ರವರೆಗೆ ಲಾಕ್‌ಡೌನ್ ಜಾರಿಯಲ್ಲಿತ್ತು. ಆದರೆ, ದಾವಣಗೆರೆಯಲ್ಲಿ ಸೋಂಕಿತ ಪ್ರಕರಣಗಳು ಹೆಚ್ಚಾಗಿರುವ ಕಾರಣ 21 ರವರೆಗೆ ಲಾಕ್ಡೌನ್ ಮುಂದುವರೆಸಲಾಗಿದ್ದು, ನಾಗರೀಕರು ಸಹಕರಿಸುವಂತೆ ತಿಳಿಸಿದರು.7ರಂದು ನೀಡಿದ್ದ ಲಾಕ್‌ಡೌನ್ ಆದೇಶದ ನಿಯಮಾವಳಿಗಳೇ ಈಗಲೂ ಮುಂದುವರೆಯುತ್ತವೆ. 14, 16 ಮತ್ತು 18ರ ಬೆಳಿಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ಲಾಕ್‌ಡೌನ್ ಸಡಿಲಿಕೆ ಇರುತ್ತದೆ ಆ ದಿನಗಳಲ್ಲಿ ಮಧ್ಯಾಹ್ನ 12 ರವರೆಗೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಲಾಕ್‌ಡೌನ್ ಅವಧಿಯಲ್ಲಿ ಕಟ್ಟಡ ಕಾಮಗಾರಿಗೆ ಮತ್ತು ಕೃಷಿ ಪರಿಕರಗಳ ಮಾರಾಟಗಳ ಅಂಗಡಿಗಳು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ದಿನಸಿ, ತರಕಾರಿ, ಹಣ್ಣು, ಮಾಂಸ,ಮತ್ತು ಮೀನು, ಹಾಗೂ ಮಧ್ಯದ ಅಂಗಡಿಗಳು ಕೊವಿಡ್ ನಿರ್ವಹಣೆಯ ಷರತ್ತಿಗೆ ಒಳಪಟ್ಟು ವ್ಯಾಪಾರಕ್ಕೆ ಅನುಮತಿಸಲಾಗಿದೆ. ನರೇಗಾ ಕಾಮಗಾರಿಗೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಅನಗತ್ಯವಾಗಿ ಸಂಚರಿಸುವುದನ್ನು ನಿಲ್ಲಿಸಿಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಮಹಾಂತೇಶ್ ಭೀಳಗಿ ಮಾತನಾಡಿರುವ ವಿಡಿಯೋ ವನ್ನ ಕೆಳಗಡೆ ಸ್ಕ್ರೋಲ್ ಮಾಡಿ
ದಾವಣಗೆರೆ ಜಿಲ್ಲೆಯ 25 ಗ್ರಾಮಗಳು ಕಂಟೆನ್ಮೆಂಟ್ ಜೋನ್ ವ್ಯಾಪ್ತಿಗೆ :
- ದಾವಣಗೆರೆ ತಾಲೂಕಿನ ಅಣಬೇರು, ಕುಕ್ಕವಾಡ, ಕರ್ಕಿ, ಕೈದಾಳೆ, ತುರ್ಚಗಟ್ಟ, ಬೇತೂರು, ಕಾಶಿಪುರ, ಮಳಲಕೆರೆ
- ಹರಿಹರ ತಾಲೂಕಿನ ಗುತ್ತೂರು, ಕೆ. ಬೇವಿನಹಳ್ಳಿ, ನಂದಿತಾವರೆ, ಭಾನುವಳ್ಳಿ, ಹೊಳೆಸಿರಿಗೆರೆ, ಹಾಲಿವಾಣ
- ಹೊನ್ನಾಳಿ ತಾಲೂಕಿನ ಕುಳಗಟ್ಟೆ, ಹನುಮನಹಳ್ಳಿ, ಕೂಲಂಬಿ, ಗೊಲ್ಲರಹಳ್ಳಿ, ಐನೂರು, ದಾನಿಹಳ್ಳಿ, ಕುಂಕುವಾ, ಫಲವನಹಳ್ಳಿ, ಸುರಹೊನ್ನೆ
- ಚನ್ನಗಿರಿ ತಾಲೂಕಿನ ಸಿದ್ಧನಮಠ,
- ಜಗಳೂರು ತಾಲೂಕಿನ ಹೊಸಕೆರೆ ಗ್ರಾಮಗಳು ಸೀಲ್
ದಾವಣಗೆರೆ ಜಿಲ್ಲೆಯಲ್ಲಿ 14.16,18 ರಂದು ಮೂರು ದಿನ ಬೆಳಗ್ಗೆ 9 ರಿಂದ ಮದ್ಯಹ್ನ 12 ಗಂಟೆವರೆಗೆ ಮಾತ್ರ ಸಿಮೆಂಟ್,ಕಬ್ಬಿಣ,ಪೇಟ್ಸ್, ಹಾರ್ಡವೇರ್,ಗ್ಲಾಸ್,ಪ್ಲೈ-ವುಡ್, ಸಾಮಿಲ್ಸ್, ಎಲೆಕ್ಟ್ರಿಕಲ್ಸ್, ಪೈಪ್ಸ್, ಟೈಲ್ಸ್ / ಮಾರ್ಬಲ್ಸ್, ಸ್ಯಾನಿಟರು ವೇರ್ ಅಂಗಡಿಗಳ ಚಟುವಟಿಕೆಗಳನ್ನು ನಡೆಸಲು ಅನುಮತಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಜನಪ್ರತಿನಿಧಿಗಳೊಂದಿಗೆ ಈ ಬಗ್ಗೆ ಚರ್ಚೆ ನಡೆಸಿದ್ದು ಈ ಸಾಂಕ್ರಮಿಕವನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಹತ್ತಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣಗಳು 25 ಗ್ರಾಮಗಳಲ್ಲಿ ವರದಿಯಾಗಿದ್ದು, ಆ ಗ್ರಾಮಗಳನ್ನು ಕಂಟೆನ್ಮೆಂಟ್ ಜೋನ್ ಮಾಡಲಾಗಿದೆ. ಈ ಗ್ರಾಮಗಳಲ್ಲಿ ವೈದ್ಯಕೀಯ ತುರ್ತು ಹಾಗೂ ಅಗತ್ಯ ಸೇವೆಗಳ ಹೊರತುಪಡಿಸಿ ಗ್ರಾಮದಿಂದ ಹೊರ ಹಾಗೂ ಒಳ ಸಂಚಾರವನ್ನು ಕಟ್ಟುನಿಟ್ಟಾಗಿ ಬಿಗಿಗೊಳಿಸಲಾಗಿದೆ.
ನರೇಗಾ ಹಾಗೂ ಕೃಷಿ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಉಳಿದ ದಿನ ಹಾಲು ಮೊಟ್ಟೆ, ಮೆಡಿಕಲ್ ಅಂಗಡಿಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ತರಕಾರಿ ಹಣ್ಣುಗಳನ್ನು ತಳ್ಳುಗಾಡಿ ಮುಖಾಂತರ ಮನೆ ಮನೆಗೆ ಹೋಗಿ ಮಾರಾಟ ಮಾಡಲು ಅನುವು ಮಾಡಿಕೊಡಲಾಗಿದೆ. ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲಾಗುವುದು ಎಂದ ಅವರು, 6-10 ಪ್ರಕರಣಗಳಿರುವ 64 ಗ್ರಾಮಗಳಲ್ಲಿ ಸರ್ವೇಕ್ಷಣೆಯನ್ನು ತೀವ್ರಗೊಳಿಸಿ ಸ್ಥಳೀಯ ಗ್ರಾಮಪ್ರತಿನಿಧಿಗಳು, ಪಿಡಿಓ ಇವರುಗಳಿಂದ ಜಾಗೃತಿ ಮೂಡಿಸಿ ಟೆಸ್ಟ್ ಗಳನ್ನು ಹೆಚ್ಚು ಮಾಡಲು ನಿರ್ದೇಶಿಸಲಾಗಿದೆ.
ಜಿಲ್ಲೆಯಲ್ಲಿ ಜೂ.1 ರಂದು ಶೇ.23.47, ಜೂ.9 ರಂದು ಶೇ.12.65, ಜೂ.10 ರಂದು ಶೇ.10.23, ಜೂ.11 ರಂದು ಶೇ.6.81 ರಷ್ಟು ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಪಾಸಿಟಿವ್ ದರ ಕಡಿಮೆಯಾಗುತ್ತಿದೆ. ಇದು ಹೀಗೆ ಮುಂದುವರಿಯಬೇಕು ಎಂದರೆ ನಿರ್ಬಂಧನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದರು. ಅನಗತ್ಯವಾಗಿ ಮನೆಯಿಂದ ಯಾರು ಹೊರ ಬರಬಾರದು ಹಾಗೂ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಕೋವಿಡ್ ಸೋಂಕಿತರನ್ನು ನೋಡಿಕೊಳ್ಳುವ ಅಟೆಂಡರ್‍ಗಳು ಸುಮ್ಮಸುಮ್ಮನೆ ಕಾರಣ ಹೇಳಿ ಹೊರಬರಬಾರದು ಎಂದು ಮನವಿ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಪಿ.ರಿಷ್ಯಂತ್ ಮಾತನಾಡಿ, ಜಿಲ್ಲೆಯಲ್ಲಿ 26 ಕಡೆ ಚೆಕ್‍ಪೋಸ್ಟ್ ಇದ್ದು ಅಲ್ಲಿ ಸಿಬ್ಬಂದಿಗಳನ್ನು ಹೆಚ್ಚಳ ಮಾಡಲಾಗುವುದು. ಕೆಲವೆಡೆ ಇಬ್ಬರು ಸಿಬ್ಬಂದಿ ಇದ್ದು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬ ದೂರು ಇದೆ. ಹಾಗಾಗಿ ಹೋಂ ಗಾರ್ಡ್ ಗಳನ್ನು ಪಡೆದು ಸಿಬ್ಬಂದಿ ನೇಮಕ ಮಾಡಲಾಗುವುದು. ಹಾಗೂ ನಿಯಾಮ ಉಲ್ಲಂಘಿಸುವವರ ವಿರುದ್ಧ ಕೇಸ್ ದಾಖಲಾಗಿಸಲಾಗುವುದು. ಅನಗತ್ಯವಾಗಿ ರಸ್ತೆಯಲ್ಲಿ ಓಡಾಡುವ ಬೈಕ್ ಸವಾರರನ್ನು ದಂಡ ವಿಧಿಸಿ ವಾಹನಗಳನ್ನು ಸೀಜ್ ಮಾಡಲಾಗುವುದು. ಗ್ರಾಮೀಣ ಭಾಗದಲ್ಲಿ ಪ್ಯಾಟ್ರೋಲ್ ವಾಹನಗಳಿಂದ ಗಸ್ತು ನಡೆಸಲಾಗುವುದು. ಆಸ್ಪತ್ರೆಗಳಲ್ಲಿ ರೋಗಿಗಳನ್ನು ನೋಡಿಕೊಳ್ಳುವವರು ಹೆಚ್ಚಾಗಿದ್ದು ಅಲ್ಲಿ ಹೆಚ್ಚಿನ ಸಿಬ್ಬಂದಿಗಳನ್ನು ನೇಮಿಸಿ ಜನದಟ್ಟನೆ ನಿಯಂತ್ರಿಸಲಾಗುವುದು ಎಂದರು.
ಜಿ.ಪಂ. ಸಿಇಒ ವಿಜಯ ಮಹಾಂತೇಶ ದಾನಮ್ಮನವರ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಜಾಗೃತಿ ಮೂಡಿಸಲಾಗುತ್ತಿದ್ದು, ಟೆಸ್ಟ್ ಗಳ ಸಂಖ್ಯೆ ಹೆಚ್ಚಿಸಲಾಗಿದೆ. ಹಾಗೂ ಪಾಸಿಟಿವ್ ದರ ಕಡಿಮೆಯಾಗುತ್ತಿದೆ. ಸೋಂಕಿತರನ್ನ ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‍ಗೆ ಕಳುಹಿಸಲು ತಿಳಿಸಲಾಗುತ್ತಿದೆ ಎಂದರು.
ಆರ್.ಸಿ.ಹೆಚ್ ಅಧಿಕಾರಿ ಡಾ.ಮೀನಾಕ್ಷಿ ಮಾಹಿತಿ ನೀಡಿ ಜಿಲ್ಲೆಯಲ್ಲಿ ಈಗಾಗಲೇ 3,69,925 ಜನರಿಗೆ ಲಸಿಕೆ ಹಾಕಲಾಗಿದೆ ಎಂದರು.
ಸಭೆಯಲ್ಲಿ ಎಸಿ ಮಮತ ಹೊಸಗೌಡರ್, ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಡಿಹೆಚ್‍ಒ ಡಾ.ನಾಗರಾಜ್, ಯೋಜನಾಧಿಕಾರಿ ನಜ್ಮಾ, ಎಎಸ್‍ಪಿ ರಾಜೀವ್, ಡಾ.ನಟರಾಜ್, ಡಾ.ಯತೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಮಹಾಂತೇಶ್ ಭೀಳಗಿ ಮಾತನಾಡಿರುವ ವಿಡಿಯೋ ನೋಡಿ..